Advertisement

ಅಸಹಾಯಕರಿಗೆ ನೆರವಾಗಲು ದೀಕ್ಷೆ ತೊಟ್ಟ  ಟೀಮ್‌ ನರೇಂದ್ರ

06:45 AM Aug 13, 2017 | Team Udayavani |

ನಗರ: ಮೂಲ ಸೌಕರ್ಯವಿಲ್ಲದ ಟಾರ್ಪಾಲ್‌ ಆಧಾರದ ಜೋಪಡಿ ಮನೆ, ಮೂರು ಮಂದಿ ಹೆಣ್ಣು ಮಕ್ಕಳು. ಈ ಮಧ್ಯೆ ಮರದಿಂದ ಬಿದ್ದು ಸೊಂಟ ಹಾಗೂ ಬೆನ್ನುಮೂಳೆ ಮುರಿದುಕೊಂಡು ಹಾಸಿಗೆ ಹಿಡಿದಿರುವ ಮನೆಯ ಆಧಾರಸ್ತಂಭ ಮಗ. ಇಂತಹ ಅಸಹಾಯಕ ಸ್ಥಿತಿಯಲ್ಲಿರುವ ಬಂಟ್ವಾಳ ತಾಲೂಕಿನ ಪೆರುವಾಯಿಯ ಬಡ ಕುಟುಂಬದ ನೆರವಿಗೆ ಧಾವಿಸಿದ್ದು ಪುತ್ತೂರಿನ “ಟೀಮ್‌ ನರೇಂದ್ರ’. ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳ ಜತೆ ಜೀವನದ ಬಂಡಿ ಸಾಗಿಸಲು ಏಗುತ್ತಿರುವ ಇಳಿವಯಸ್ಸಿನ ದಂಪತಿಗೆ ಮನೆ ನಿರ್ಮಾಣ, ಮಗ ಸಂತೋಷ್‌ ಅವರ ಚಿಕಿತ್ಸೆಗೆ ನೆರವು ನೀಡುವ ಮೂಲಕ ಸಹಕಾರದ ನರೇಂದ್ರ ಟೀಂ ಅವರ ಬಾಳಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

Advertisement

ಮನೆ ನಿರ್ಮಾಣದಿಂದ ಆರಂಭ
ಜೋಪಡಿಯಲ್ಲಿ ವಾಸಿಸುತ್ತಿರುವ ಸಂತೋಷ್‌ ಅವರ ಮನೆ ನಿರ್ಮಾಣಕ್ಕೆ ಮುಂದಾದ ಟೀಮ್‌, ಜಾಗ ಸಮತಟ್ಟು  ಮಾಡಿದೆ. ಮನೆ ನಿರ್ಮಾಣ ಕಾರ್ಯ ಟೀಂನ ಸದಸ್ಯ ಚೇತನಾ ಆಸ್ಪತ್ರೆಯ ಉದ್ಯೋಗಿ ಸಂತೋಷ್‌ ವಾಗ್ಲೆ ಮುಂದಾಳತ್ವದಲ್ಲಿ ನಡೆಯಲಿದೆ. ಸದಸ್ಯ ವಾಸ್ತುತಜ್ಞ ಪಿ.ಜಿ. ಜಗನ್ನಿವಾಸ್‌ ರಾವ್‌ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. 700 ಚದರ ಅಡಿ ವಿಸ್ತೀರ್ಣದ ಸಂಪೂರ್ಣ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಮಿಕ್ಕಿ ವೆಚ್ಚ ತಗುಲಲಿದ್ದು, ಶೌಚಾಲಯ ಸೌಲಭ್ಯವನ್ನು ಕಲ್ಪಿಸಲಾಗುವುದು. ನಿರ್ಮಾಣ ಪರಿಕರಗಳಿಗೆ ನೆರವು ನೀಡುವಂತೆ ದಾನಿಗಳನ್ನು ಕೋರಲಾಗಿದೆ. ಹಾಸಿಗೆ ಹಿಡಿದಿರುವ ಸಂತೋಷ್‌ನಿಗೆ ಸಂಸ್ಥೆಯಿಂದ ಈಗಾಗಲೇ 10 ಸಾವಿರ ರೂ. ಸಹಾಯಧನ ನೀಡಲಾಗಿದೆ. ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಯನ್ನೂ ಸಂಪರ್ಕಿಸಲಾಗಿದ್ದು, ಪ್ರಸ್ತುತ  ಯೇನೆಪೊಯ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದಾರೆ.

“ಟೀಮ್‌ ನರೇಂದ್ರ’
ಹಿಂದೂ ಸಮಾಜದ ನಿರಾಶ್ರಿತ, ಬಡ, ಆರೋಗ್ಯ ರಹಿತರು, ಶೈಕ್ಷಣಿಕ ವಿಚಾರದಲ್ಲಿ ತೊಂದರೆ ಅನುಭವಿಸುತ್ತಿರುವವರಿಗೆ ನೆರವಾಗಲೆಂದು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಸಹೃದಯಿಗಳು ಆರಂಭಿಸಿದ ಸೇವಾ ಸಂಸ್ಥೆ ರಕ್ಷಾಬಂಧನದ ಶುಭದಿನ ಕಾರ್ಯಯೋಜನೆಗೆ ಇಳಿದಿದೆ. ಸಂಸ್ಥೆಯಲ್ಲಿ ಈಗಾಗಲೇ 9 ಮಂದಿ ಕಾರ್ಯಕಾರಿ ಸದಸ್ಯರ ಜತೆಗೆ ಮಹಿಳೆಯರು-ಪುರುಷರು ಸೇರಿ 30 ಮಂದಿ ಇದ್ದಾರೆ. 

ಟ್ರಸ್ಟ್‌  ಮಾಡಲು ಚಿಂತನೆ
ಅಸಹಾಯಕರ ಸೇವಾ ಮನೋಭಾವದಿಂದ ಹುಟ್ಟಿಕೊಳ್ಳುತ್ತಿರುವ ಸೇವಾ ಸಂಸ್ಥೆಗೆ 100 ಕ್ಕೂ ಹೆಚ್ಚು ಮಂದಿ ಸೇರಿಕೊಳ್ಳಲು ಆಸಕ್ತಿ ತೋರಿದ್ದಾರೆ. ಆರಂಭಿಕ ಹಂತದಲ್ಲಿರುವ ಸಂಸ್ಥೆಗೆ ನೋಂದಣಿ ಪ್ರಕ್ರಿಯೆ ನಡೆಸಿ, ಟೀಮ್‌ ನರೇಂದ್ರ ಟ್ರಸ್ಟ್‌  ಆಗಿ ಪರಿವರ್ತಿಸಲಾ ಗುವುದು ಎನ್ನುತ್ತಾರೆ ತಂಡದ ದಿನೇಶ್‌ ಜೈನ್‌.

ಸಮಾನ ಮನಸ್ಕರ ತಂಡ
ಎಲ್ಲ ವೃತ್ತಿಯ ಸಮಾನ ಮನಸ್ಕರು ಸೇರಿಕೊಂಡು ಈ ತಂಡವನ್ನು ರೂಪಿಸಲಾಗಿದೆ. ಆರ್ಥಿಕ ನೆರವಿನಿಂದ ಹಿಡಿದು ಕಷ್ಟದಲ್ಲಿರುವವರಿಗೆ ಸಹಕಾರ ನೀಡಲಾಗುವುದು. ಆರಂಭದಲ್ಲಿ ಅಸಹಾಯಕ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಇನ್ನಷ್ಟು ಇಂಥ ಕಾರ್ಯಗಳನ್ನು ನಡೆಸಲಾಗುವುದು. 
ಡಾ| ಸುರೇಶ್‌ ಪುತ್ತೂರಾಯ ಸದಸ್ಯರು, ಟೀಮ್‌ ನರೇಂದ್ರ

Advertisement

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next