ವೆಲ್ಲಿಂಗ್ಟನ್ : ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಸರಣಿಯನ್ನು ಯಶಸ್ವಿಯಾಗಿ ಮುಗಿಸಿದೆ. 4-1 ಅಂತರದಿಂದ ಸರಣಿ ಗೆದ್ದ ಭಾರತ ಮತ್ತೊಂದು ಏಕದಿನ ಸರಣಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.
ವೆಸ್ಟ್ ಪ್ಯಾಕ್ ಸ್ಟೇಡಿಯಂ ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 252 ರನ್ ಗಳಿಸಿತ್ತು. ಅಂಬಾಟಿ ರಾಯುಡು 90 ರನ್, ಹಾರ್ದಿಕ್ ಪಾಂಡ್ಯಾ 45 ವಿಜಯ್ ಶಂಕರ್ 45 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಬ್ಲಾಕ್ ಕ್ಯಾಪ್ಸ್ 38 ರನ್ ಗೆ ಮೊದಲ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ನಾಯಕ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಂಥಮ್ 67 ರನ್ ಜೊತೆಯಾಟ ನಡೆಸಿದರು. ನಂತರ ಜೇಮ್ಸ್ ನೀಶಮ್ 44 ರನ್ ಗಳಿಸಿ ಸ್ವಲ್ಪ ಪ್ರತಿರೋಧ ತೋರಿದರೂ ಗೆಲವು ಕಾಣಲು ಸಾಧ್ಯವಾಗಲಿಲ್ಲ. ಕೊನೆಗೆ 217 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಭಾರತ 35 ರನ್ ಗೆಲುವು ದಾಖಲಿಸಿತು .
ಭಾರತದ ಪರ ಚಾಹಲ್ ಮೂರು ವಿಕೆಟ್ ಪಡೆದರೆ, ಶಮಿ ಮತ್ತು ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು.
ಕಿವೀಸ್ ತಂಡ 2004 ರ ನಂತರ ಮೊದಲ ಬಾರಿಗೆ ತವರಿನಲ್ಲಿ ಸರಣಿ ಸೋತಿತು.
ಅಂಬಟಿ ರಾಯುಡು ಪಂದ್ಯ ಪುರುಷ ಪ್ರಶಸ್ತಿ ಪಡೆದರೆ, ಮೊಹಮ್ಮದ್ ಶಮಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.