ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದ ಅಂತಿಮ ದಿನ ಮಳೆಗೆ ಬಲಿಯಾಗುವುದರೊಂದಿಗೆ ಪಂದ್ಯಕ್ಕೆ ಡ್ರಾ ಮುದ್ರೆ ಬಿದ್ದಿದೆ. ಇದರೊಂದಿಗೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ ಭಾರತ ಐತಿಹಾಸಿಕ ಸರಣಿ ಗೆದ್ದು ಬೀಗಿದೆ. ಕೊಹ್ಲಿ ಹುಡುಗರು ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಸರಣಿ ಗೆದ್ದ ಸಾಧನೆ ಮಾಡಿದ್ದಾರೆ.
ನಾಲ್ಕನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದ್ದ ಆಸ್ಟ್ರೇಲಿಯಾ ಅಂತಿಮ ದಿನ ಸೋಲು ತಪ್ಪಿಸಾಲು ಹೋರಾಡಬೇಕಿತ್ತು. ಆದರೆ ವರುಣನ ಕೃಪೆ ಪೈನ್ ಬಳಗದ ಮೇಲೆ ಇದ್ದರಿಂದ ಮತ್ತೊಂದು ಸೋಲು ಡ್ರಾಗೆ ಪರಿವರ್ತನೆಯಾಯಿತು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ622 ರನ್ ಗಳಿಸಿ ಡಿಕ್ಲರ್ ಮಾಡಿಕೊಂಡಿತ್ತು. ಭಾರತದ ಪರ ಚೇತೇಶ್ವರ ಪೂಜಾರ 193 ರನ್, ರರಿಷಭ್ ಪಂತ್ ಅಜೇಯ159 ರನ್ ಗಳಿಸಿದ್ದರು. ಆಸ್ಟ್ರೇಲಿಯಾ ತಂಡ ಕೇವಲ 300 ರನ್ ಗಳಿಗೆ ಅಲ್ ಔಟ್ ಆಗುವುದರೊಂದಿಗೆ ಫಾಲೋ ಆನ್ ಗೆ ಸಿಲುಕಿತ್ತು. ಆದರೆ ನಾಲ್ಕನೇ ಮತ್ತು ಐದನೇ ದಿನದ ಮಂದ ಬೆಳಕು ಮತ್ತು ಮಳೆ ಆಸ್ಟ್ರೇಲಿಯಾಗೆ ವರವಾಗಿ ಪರಿಣಮಿಸಿತು.
ಸರಣಿಯಲ್ಲಿ ಭಾರತ ಅಡಿಲೇಡ್ ಮತ್ತು ಮೆಲ್ಬೋರ್ನ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಪರ್ತ್ ಟೆಸ್ಟ್ ಪಂದ್ಯ ಆಸೀಸ್ ಪಾಲಾಗಿತ್ತು
ಸರಣಿಯಲ್ಲಿ ಅದ್ಭುತ ಪ್ರದರ್ಶನ ಬ್ಯಾಟಿಂಗ್ ನೀಡಿದ ಭಾರತದ ಚೇತೇಶ್ವರ ಪೂಜಾರ ಅರ್ಹವಾಗಿ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.