ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾಕ್ಕೆ ಸುದೀರ್ಘ ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸ ಪಂದ್ಯವಿಲ್ಲ ಎಂಬ ಕೊರತೆಯೊಂದು ನೀಗಿದೆ. ಆಯ್ದ ಕೌಂಟಿ ಆಟಗಾರರ ತಂಡದೊಂದಿಗೆ (ಕಂಬೈನ್ ಕೌಂಟೀಸ್) ಅಭ್ಯಾಸ ಪಂದ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಇಸಿಬಿ ತಿಳಿಸಿದೆ.
ಪ್ರಥಮ ದರ್ಜೆ ಮಾನ್ಯತೆ ಹೊಂದಿರುವ ತ್ರಿದಿನ ಅಭ್ಯಾಸ ಪಂದ್ಯವನ್ನು ಜು. 20-22ರಂದು ಆಡುವ ಸಾಧ್ಯತೆ ಇದೆ. ಭಾರತದ ಎದುರಾಳಿಯನ್ನು “ಸೆಲೆಕ್ಟ್ ಕೌಂಟಿ ಇಲೆವೆನ್’ ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ:ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ‘ಟೈಟಲ್’ ವಿವಾದ: ಪಡ್ಡೆ ಹುಲಿ ಪಾಲಾದ ‘ರಾಣಾ’
“ಬಿಸಿಸಿಐ ಸಲ್ಲಿಸಿದ ಅಭ್ಯಾಸ ಪಂದ್ಯದ ಬೇಡಿಕೆಯನ್ನು ನಾವು ಪುರಸ್ಕರಿಸಿದ್ದು, ಆಯ್ದ ಕೌಂಟಿ ಆಟಗಾರರ ತಂಡವೊಂದನ್ನು ರಚಿಸಿ ತ್ರಿದಿನ ಮುಖಾಮುಖೀಗೆ ಇಳಿಸಲಾಗುವುದು’ ಎಂದು ಇಸಿಬಿ ಪ್ರಕಟನೆಯಲ್ಲಿ ತಿಳಿಸಿದೆ.
ಕೋವಿಡ್‌ನಿಂದಾಗಿ ಭಾರತೀಯರ ಅಭ್ಯಾಸಕ್ಕೆ ಕೌಂಟಿ ತಂಡ ಲಭಿಸುವುದು ಅನುಮಾನ ಎಂಬ ಕಾರಣಕ್ಕೆ ತನ್ನದೇ ಆಟಗಾರರ ಎರಡು ತಂಡಗಳೊಂದಿಗೆ ಪ್ರ್ಯಾಕ್ಟೀಸ್ ಮ್ಯಾಚ್ ಆಡುವುದು ಕೊಹ್ಲಿ ಬಳಗದ ಯೋಜನೆಯಾಗಿತ್ತು. ಆದರೆ ಇದರ ತೀವ್ರತೆ ಕಡಿಮೆ ಎಂಬುದಾಗಿ ಅನೇಕರು ಅಭಿಪ್ರಾಯಪಟ್ಟಿದ್ದರು.
ಜು. 15ರಿಂದ ಕ್ರಿಕೆಟ್ ಕ್ಯಾಂಪ್
ಭಾರತದ ಕ್ರಿಕೆಟಿಗರು ಜು. 15ರಿಂದ ಆ. ಒಂದರ ತನಕ ಡರ್‌ಹ್ಯಾಮ್ ಕೌಂಟಿಯ “ಎಮಿರೇಟ್ಸ್ ರಿವರ್‌ಸೈಡ್ ಗ್ರೌಂಡ್’ನಲ್ಲಿ ಪ್ರಿ-ಟೆಸ್ಟ್ ಕ್ಯಾಂಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ನಾಟಿಂಗ್‌ಹ್ಯಾಮ್‌ಗೆ ತೆರಳುವರು. ಇಲ್ಲಿನ ಟ್ರೆಂಟ್‌ಬ್ರಿಜ್ ಅಂಗಳದಲ್ಲಿ ಆ. 4ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ.