Advertisement

ಪಿಂಕ್‌ ಬಾಲ್‌ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

09:42 AM Nov 13, 2019 | sudhir |

ಇಂದೋರ್‌: ಭಾರತದ ಪ್ರಪ್ರಥಮ ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕೆ ಇನ್ನೂ 10 ದಿನಗಳಿವೆಯಾದರೂ ನಾಯಕ ವಿರಾಟ್‌ ಕೊಹ್ಲಿ ಸಹಿತ ಟೀಮ್‌ ಇಂಡಿಯಾ ಆಟಗಾರರು ಮಂಗಳವಾರವೇ ಪಿಂಕ್‌ ಬಾಲ್‌ ಮೂಲಕ ಬ್ಯಾಟಿಂಗ್‌ ಅಭ್ಯಾಸ ಆರಂಭಿಸಿದರು. ಇಲ್ಲಿ ಗುರುವಾರದಿಂದ ಸರಣಿಯ ಮೊದಲ ಟೆಸ್ಟ್‌ ನಡೆಯಲಿದೆ. ಅನಂತರ ನ. 22ರಿಂದ ಕೋಲ್ಕತಾದಲ್ಲಿ ಐತಿಹಾಸಿಕ ಹಗಲು-ರಾತ್ರಿ ಪಂದ್ಯ ಆರಂಭವಾಗಲಿದೆ.

Advertisement

ಭಾರತದ ಆಟಗಾರರಿಗೆ ಅಹರ್ನಿಶಿ ಟೆಸ್ಟ್‌ ಪಂದ್ಯಗಳಲ್ಲಿ ಬಳಸುವ ಗುಲಾಲಿ ಬಣ್ಣದ ಚೆಂಡಿನಲ್ಲಿ ಆಡಿದ ಅನುಭವ ಇಲ್ಲದ ಕಾರಣ ಇಂದೋರ್‌ನಲ್ಲೇ ಈ ವ್ಯವಸ್ಥೆ ಮಾಡಲು ತಂಡದ ಆಡಳಿತ ಮಂಡಳಿ ನಿರ್ಧರಿಸಿತು.

ಪಿಂಕ್‌ ಬಾಲ್‌ ಮೂಲಕ ಬ್ಯಾಟಿಂಗ್‌ ಅಭ್ಯಾಸ ನಡೆಸಿದ ಮೊದಲ ಆಟಗಾರನೆಂದರೆ ವಿರಾಟ್‌ ಕೊಹ್ಲಿ. ಅವರಿಗೆ ಇಲ್ಲಿ ಮಿಶ್ರ ಅನುಭವ ಲಭಿಸಿತು. ಕೆಲವು ಎಸೆತಗಳನ್ನು ಎದುರಿಸಲು ವಿಫ‌ಲರಾದರೂ ತಮ್ಮ ನೆಚ್ಚಿನ ಕವರ್‌ ಡ್ರೈವ್‌ ಹೊಡೆತಗಳಿಗೆ ಮಾತ್ರ ಮೋಸ ಮಾಡಲಿಲ್ಲ.

ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಶುಭಮನ್‌ ಗಿಲ್‌ ಕೂಡ ಪಿಂಕ್‌ ಬಾಲ್‌ನಲ್ಲೇ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಮೂವರೂ ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟರು. ಪ್ರ್ಯಾಕ್ಟೀಸ್‌ ಪಿಚ್‌ನಲ್ಲಿ ಯಾವುದೇ ರೀತಿಯ ಸ್ವಿಂಗ್‌ ಪಡೆಯದ ಚೆಂಡು, ನೇರವಾಗಿ ಬ್ಯಾಟ್ಸ್‌ಮನ್‌ಗಳತ್ತ ಧಾವಿಸಿ ಬರುತ್ತಿತ್ತು. ಒಂದು ಎಸೆತ ಗಿಲ್‌ ಅವರಿಗೆ ಬಡಿಯಿತಾದರೂ ಗಂಭೀರ ನೋವೇನೂ ಆಗಲಿಲ್ಲ.

ರಾಘವೇಂದ್ರ ಮತ್ತು ಶ್ರೀಲಂಕಾದ ನುವಾನ್‌ ಸೇನಾವಿರತ್ನೆ ನೆಟ್‌ ಬೌಲರ್‌ಗಳಾಗಿದ್ದರು.

Advertisement

ಮೊದಲ ಸಲ ಎಸ್‌ಜಿ ಪಿಂಕ್‌ ಬಾಲ್‌
ಡೇ-ನೈಟ್‌ ಟೆಸ್ಟ್‌ ಪಂದ್ಯದ ವೇಳೆ ಮೊದಲ ಬಾರಿಗೆ “ಎಸ್‌ಜಿ ಕಂಪೆನಿ’ಯ ಪಿಂಕ್‌ ಬಾಲ್‌ಗ‌ಳನ್ನು ಉಪಯೋಗಿಸಲಾಗುತ್ತದೆ. ಪ್ರಯೋಗಾರ್ಥವಾಗಿ ಈಗಾಗಲೇ ಒಂದು ಸೆಟ್‌ ಚೆಂಡುಗಳನ್ನು ಬಿಸಿಸಿಐಗೆ ರವಾನಿಸಲಾಗಿದೆ. ಈ ಚೆಂಡಿನಲ್ಲೇ ಮಂಗಳವಾರ ನೆಟ್‌ ಪ್ರ್ಯಾಕ್ಟೀಸ್‌ ನಡೆಯಿತು.

ಈವರೆಗಿನ 11 ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳಲ್ಲಿ ಕೇವಲ ಕೂಕಾಬುರ ಮತ್ತು ಡ್ನೂಕ್ಸ್‌ ಕಂಪೆನಿಯ ಪಿಂಕ್‌ ಬಾಲ್‌ಗ‌ಳನ್ನು ಬಳಸಲಾಗಿತ್ತು. ಭಾರತದಲ್ಲಿ ಆಡಲಾದ 2016-18ರ ದುಲೀಪ್‌ ಟ್ರೋಫಿ ಋತುಗಳ ಹಗಲು-ರಾತ್ರಿ ಪಂದ್ಯಗಳ ವೇಳೆ ಕೂಕಾಬುರ ಚೆಂಡುಗಳಿಗೇ ಆದ್ಯತೆ ನೀಡಲಾಗಿತ್ತು.

ಭಾರತ-ಬಾಂಗ್ಲಾದೇಶ ಸರಣಿ ವೇಳೆ ಎಸ್‌ಜಿ ಬಾಲ್‌ಗ‌ಳನ್ನೇ ಉಪಯೋಗಿಸಲು ಪ್ರಮುಖ ಕಾರಣವೊಂದಿದೆ. ಇದು 2 ಪಂದ್ಯಗಳ ಸರಣಿಯಾಗಿದ್ದು, ಇಂದೋರ್‌ನಲ್ಲಿ ಎಸ್‌ಜಿ ಚೆಂಡಿನಿಂದಲೇ ಆಡಲಾಗುತ್ತದೆ. ಹೀಗಾಗಿ ಸರಣಿಯೊಂದರಲ್ಲಿ ಬೇರೆ ಬೇರೆ ಕಂಪೆನಿಯ ಚೆಂಡುಗಳ ಪ್ರಯೋಗ ಬೇಡ ಎಂಬುದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ತೀರ್ಮಾನವಾಗಿದೆ.

ಡೇ-ನೈಟ್‌ ಟೆಸ್ಟ್‌ ಒಂದು ಗಂಟೆಗೆ ಆರಂಭ
ನವೆಂಬರ್‌ ತಿಂಗಳ ಮಂಜು ಹಾಗೂ ಚಳಿಯ ತೀವ್ರತೆಯ ಕಾರಣ ಕೋಲ್ಕತಾದಲ್ಲಿ ನಡೆಯುವ ಭಾರತ-ಬಾಂಗ್ಲಾದೇಶ ನಡುವಿನ ಡೇ-ನೈಟ್‌ ಟೆಸ್ಟ್‌ ಪಂದ್ಯವನ್ನು ಅಪರಾಹ್ನ ಒಂದು ಗಂಟೆಗೆ ಆರಂಭಿಸಿ, ರಾತ್ರಿ 8 ಗಂಟೆಗೆ ಮುಗಿಸಲು ಬಿಸಿಸಿಐ ನಿರ್ಧರಿಸಿದೆ. ಬಂಗಾಲ ಕ್ರಿಕೆಟ್‌ ಮಂಡಳಿ ಇಂಥದೊಂದು ಕೋರಿಕೆಯನ್ನು ಬಿಸಿಸಿಐ ಮುಂದಿಟ್ಟಿತ್ತು.

ಇದರಂತೆ ಅಪರಾಹ್ನ ಒಂದರಿಂದ 3 ಗಂಟೆ ತನಕ ಮೊದಲ ಅವಧಿಯ ಆಟ ನಡೆಯಲಿದೆ. ಬಳಿಕ 40 ನಿಮಿಷಗಳ ವಿರಾಮ. 3.40ರಿಂದ 5.40ರ ತನಕ ದ್ವಿತೀಯ ಅವಧಿಯ ಆಟ, 6ರಿಂದ 8 ಗಂಟೆ ತನಕ ಅಂತಿಮ ಅವಧಿಯ ಆಟ ಸಾಗಲಿದೆ.

ಕೋಲ್ಕತಾ ಪಂದ್ಯಕ್ಕೆ ಹಸೀನಾ, ಮಮತಾ ಅತಿಥಿಗಳು
ಕೋಲ್ಕತಾ: ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತಾದ ಹಗಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಅತಿಥಿಗಳಾಗಿ ಆಗಮಿಸುವುದು ಖಾತ್ರಿಯಾಗಿದೆ.

ಬಾಂಗ್ಲಾದೇಶದ ಉಪ ರಾಯಭಾರಿ ತೌಫಿಕ್‌ ಹಸನ್‌ ನೇತೃತ್ವದ 4 ಸದಸ್ಯರ ತಂಡ ಮಂಗಳವಾರ ಈಡನ್‌ ಗಾರ್ಡನ್ಸ್‌ಗೆ ಆಗಮಿಸಿ ಪ್ರಧಾನಿ ಹಾಗೂ ಅವರ 80 ಸದಸ್ಯರ ನಿಯೋಗದ ಆಸನ ವ್ಯವಸ್ಥೆಯನ್ನು ಪರಿಶೀಲಿಸಿತು. ಹಸೀನಾ ಅವರು ಗಂಟೆ ಬಾರಿಸುವ ಮೂಲಕ ಈ ಪಂದ್ಯವನ್ನು ಉದ್ಘಾಟಿಸಲಿದ್ದಾರೆ.

ಬಳಿಕ ಮೊದಲ ದಿನದಾಟ ಮುಗಿಯುವ ವೇಳೆ ಸ್ಟೇಡಿಯಂಗೆ ಆಗಮಿಸಿ ಬಂಗಾಲ ಕ್ರಿಕೆಟ್‌ ಮಂಡಳಿಯಿಂದ ಸಮ್ಮಾನ ಸ್ವೀಕರಿಸಲಿದ್ದಾರೆ. ಆದರೆ ಶೇಖ್‌ ಹಸೀನಾ ಮತ್ತು ಮಮತಾ ಬ್ಯಾನರ್ಜಿ ಒಟ್ಟಿಗೇ ಪಂದ್ಯವನ್ನು ವೀಕ್ಷಿಸಲಿರುವರೇ ಎಂಬುದು ತಿಳಿದು ಬಂದಿಲ್ಲ.

ಬೆಂಗಳೂರಿನಲ್ಲಿ ಪಿಂಕ್‌ ಬಾಲ್‌ ಪಾಠ
ಇಂದೋರ್‌ಗೆ ಆಗಮಿಸುವುದಕ್ಕಿಂತ ಮೊದಲು ತಂಡದ 5 ಆಟಗಾರರು ಬೆಂಗಳೂರಿನ “ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ’ಯಲ್ಲಿ (ಎನ್‌ಸಿಎ) “ಪಿಂಕ್‌ ಬಾಲ್‌ ಕ್ಲಾಸ್‌’ಗೆ ಹಾಜರಾಗಿದ್ದರು. ಎನ್‌ಸಿಎ ನಿರ್ದೇಶಕ ರಾಹುಲ್‌ ದ್ರಾವಿಡ್‌ ಇದರ ಉಸ್ತುವಾರಿ ವಹಿಸಿದ್ದರು. ಇಲ್ಲಿ ಅಭ್ಯಾಸ ನಡೆಸಿದವರೆಂದರೆ ಪೂಜಾರ, ರಹಾನೆ, ಅಗರ್ವಾಲ್‌, ಶಮಿ ಮತ್ತು ಜಡೇಜ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ, “ಕೆಂಪು ಚೆಂಡಿಗೆ ಹೋಲಿಸಿದರೆ ಇದೊಂದು ಡಿಫ‌ರೆಂಟ್‌ ಬಾಲ್‌ ಗೇಮ್‌ ಆಗಲಿದೆ. ಎನ್‌ಸಿಎಯಲ್ಲಿ ನಮಗೆ ಎರಡು ಅವಧಿಗಳ ಉಪಯುಕ್ತ ಅಭ್ಯಾಸ ಲಭಿಸಿತು. ಒಂದು ಹಗಲು ಹೊತ್ತಿನಲ್ಲಾದರೆ, ಇನ್ನೊಂದು ಹೊನಲು ಬೆಳಕಿನಲ್ಲಿ. ನನಗೆ ಇದು ವಿಶೇಷ ಅನುಭವವಾಗಿತ್ತು. ಏಕೆಂದರೆ ನಾನು ಪಿಂಕ್‌ ಬಾಲ್‌ ಎದುರಿಸಿದ್ದು ಇದೇ ಮೊದಲು. ರಾಹುಲ್‌ ಭಾç ಇದಕ್ಕೆ ಸಂಬಂಧಿಸಿದಂತೆ ಉಪಯುಕ್ತ ಪಾಠ ಮಾಡಿದರು’ ಎಂದರು. ಗುಲಾಲಿ ಚೆಂಡುಗಳಿಗೆ ಮಾನಸಿಕವಾಗಿ ಹೊಂದಿಕೊಳ್ಳುವುದು ಮುಖ್ಯ ಎಂದೂ ರಹಾನೆ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next