Advertisement
ಶನಿವಾರದ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 7 ವಿಕೆಟ್‌ಗಳಿಂದ ಮಣಿಸಿದ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು. ಆಸ್ಟ್ರೇಲಿಯ ಎರಡಕ್ಕೆ ಇಳಿಯಿತು. ದಕ್ಷಿಣ ಆಫ್ರಿಕಾವನ್ನು ಸೋಲಿಸಿದರಷ್ಟೇ ಆಸೀಸ್ ಮರಳಿ “ಟೇಬಲ್ ಟಾಪರ್’ ಆಗಬಹುದಿತ್ತು. ಆದರೆ ಫಿಂಚ್ ಬಳಗಕ್ಕೆ ಎದುರಾದ ಸಣ್ಣ ಅಂತರದ ಸೋಲು ಇದಕ್ಕೆ ಅಡ್ಡಿಯಾಗಿ ಪರಿಣಮಿಸಿತು.
ಐಸಿಸಿ ವಿಶ್ವಕಪ್ ನಿಯಮದ ಪ್ರಕಾರ ಲೀಗ್ ಹಂತದಲ್ಲಿ ಮೊದಲ ಸ್ಥಾನ ಪಡೆದ ತಂಡ 4ನೇ ಸ್ಥಾನ ಗಳಿಸಿದ ತಂಡದೊಂದಿಗೆ ಮೊದಲ ಸೆಮಿಫೈನಲ್ ಆಡಬೇಕು. ಹಾಗೆಯೇ ಇನ್ನೊಂದು ಸೆಮಿಫೈನಲ್‌ನಲ್ಲಿ 2-3ನೇ ಸ್ಥಾನದ ತಂಡಗಳು ಮುಖಾಮುಖೀಯಾಗಬೇಕು. ಆರಂಭಿಕ ಲೆಕ್ಕಾಚಾರದ ಪ್ರಕಾರ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ಹಾಗೂ ಭಾರತ-ಇಂಗ್ಲೆಂಡ್ ಇಲ್ಲಿ ಎದುರಾಗುವ ಸಾಧ್ಯತೆ ಹೆಚ್ಚಿತ್ತು. ಆದರೆ ಆಸ್ಟ್ರೇಲಿಯದ ಸೋಲು ಸೆಮಿಫೈನಲ್ ಲೆಕ್ಕಾಚಾರವನ್ನು ಉಲ್ಟಾ ಮಾಡಿತು! ಭಾರತ 15 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದರೆ, ಆಸ್ಟ್ರೇಲಿಯ 14 ಅಂಕ ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಈಗ ತನ್ನ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡನ್ನು ಅವರದೇ ಅಂಗಳದಲ್ಲಿ ಎದುರಿಸಲು ಅಣಿಯಾಗಬೇಕಿದೆ.
Related Articles
ಭಾರತದ ಎಲ್ಲ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಮಾತ್ರ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತಂಡವೇ ಎದುರಾದರೆ ಒಳ್ಳೆಯದಿತ್ತು ಎಂಬುದೇ ಆಗಿತ್ತು. ಇದರಲ್ಲಿ ಮುಚ್ಚುಮರೆಯೇನೂ ಇರಲಿಲ್ಲ. ಬಲಿಷ್ಠ ಹಾಗೂ ಫೇವರಿಟ್ ತಂಡವಾದ ಇಂಗ್ಲೆಂಡನ್ನು ಅವರದೇ ಅಂಗಳದಲ್ಲಿ ಎದುರಿಸುವುದಕ್ಕಿಂತ ಅಷ್ಟೇನೂ ಶಕ್ತಿಶಾಲಿಯಲ್ಲದ ನ್ಯೂಜಿಲ್ಯಾಂಡನ್ನು ಸುಲಭದಲ್ಲಿ ಮಗುಚಬಹುದೆಂಬುದು ಇಲ್ಲಿನ ಲೆಕ್ಕಾಚಾರ.
Advertisement
ಲೀಗ್ ಹಂತದಲ್ಲಿ ನ್ಯೂಜಿಲ್ಯಾಂಡ್ ಆಟವೇನೂ ಭಾರೀ ಹೊಗಳಿಕೆಯ ಮಟ್ಟದಲ್ಲಿರಲಿಲ್ಲ. ಇವರಿಗಿಂತ ಪಾಕಿಸ್ಥಾನ ಅಥವಾ ಬಾಂಗ್ಲಾದೇಶ ಬಂದದ್ದಿದ್ದರೆ ಸೆಮಿಫೈನಲ್ ಪೈಪೋಟಿ ಬಿರುಸಿನಿಂದ ಕೂಡಿರುತ್ತಿತ್ತು ಎಂಬ ವಾದದಲ್ಲೂ ಸತ್ಯಾಂಶ ಇದೆ. ವಿಲಿಯಮ್ಸನ್ ಪಡೆ ಇಲ್ಲಿಯ ತನಕ ಬಂದದ್ದೇ ಅದೃಷ್ಟದ ಬಲದಿಂದ. ಭಾರತದೆದುರಿನ ಲೀಗ್ ಪಂದ್ಯ ಮಳೆಯಿಂದ ರದ್ದಾದುದರಿಂದ ಲಭಿಸಿದ ಒಂದು ಅಂಕವೇ ಕಿವೀಸ್‌ಗೆ ಬೋನಸ್ ಆಗಿ ಪರಿಣಮಿಸಿತು ಎನ್ನಲಡ್ಡಿಯಿಲ್ಲ.
ಈ ಸೆಮಿಫೈನಲ್ ಹೊತ್ತಿನಲ್ಲಿಅಂಡರ್-19 ಸೆಮಿ ನೆನಪುಭಾರತ-ನ್ಯೂಜಿಲ್ಯಾಂಡ್ ತಂಡಗಳು ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೆಣಸಾಡುವ ಹೊತ್ತಿಗೆ 2008ರ ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸ್ವಾರಸ್ಯವೊಂದು ಸುದ್ದಿಯಾಗಿದೆ. ಅಂದು ಕೌಲಾಲಂಪುರದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತ-ನ್ಯೂಜಿಲ್ಯಾಂಡ್ ತಂಡಗಳು ಎದುರಾಗಿದ್ದವು. ಇದನ್ನು 3 ವಿಕೆಟ್‌ಗಳಿಂದ ಗೆದ್ದ ಭಾರತದ ಕಿರಿಯರ ತಂಡ ಫೈನಲ್‌ಗೆ ಲಗ್ಗೆ ಇರಿಸಿತ್ತು. ಸ್ವಾರಸ್ಯ ಇರುವುದು ಇಲ್ಲಿ. ಈ ಪಂದ್ಯದ ವೇಳೆ ತಂಡಗಳ ನಾಯಕರಾಗಿದ್ದವರು ಬೇರೆ ಯಾರೂ ಅಲ್ಲ, ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್! ಅಂದಿನ ಕಿರಿಯ ಸದಸ್ಯರಾದ ರವೀಂದ್ರ ಜಡೇಜ, ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ಈಗಿನ ಸೀನಿಯರ್ ತಂಡದಲ್ಲೂ ಇದ್ದಾರೆ. ಇವರೆಲ್ಲರೂ 11 ವರ್ಷಗಳ ಬಳಿಕ ಮುಖಾಮುಖೀಯಾಗುತ್ತಿರುವುದು ವಿಶೇಷ. ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಆದದ್ದು ಈಗ ಇತಿಹಾಸ.