Advertisement

ವರ್ಷಾಂತ್ಯದಲ್ಲಿ ಲಭಿಸಲಿ ಭರವಸೆಯ “ಆರಂಭ’

06:35 AM Dec 24, 2018 | Team Udayavani |

ಭಾರತೀಯ ಕ್ರಿಕೆಟ್‌ ತಂಡವೀಗ ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿ ಆಡುತ್ತಿದೆ. ಸರಣಿ 1-1 ಸಮಬಲಕ್ಕೆ ಬಂದಿದೆ. ಅಡಿಲೇಡ್‌ನ‌ಲ್ಲಿ ಮೇಲೇರಿದವರು ಪರ್ತ್‌ನಲ್ಲಿ ಪಲ್ಟಿ ಹೊಡೆದಿದ್ದಾರೆ. ಇದಕ್ಕೊಂದು ಮುಖ್ಯ ಕಾರಣ, ಭಾರತದ ಓಪನಿಂಗ್‌ ಸಂಕಟ ಬಿಗಡಾಯಿಸಿದ್ದು. ಕೆ.ಎಲ್‌. ರಾಹುಲ್‌-ಮುರಳಿ ವಿಜಯ್‌ ಜೋಡಿ ಸಂಪೂರ್ಣ ಫ್ಲಾಪ್‌ ಆಗಿದೆ. ಇದಕ್ಕೊಂದು ಪರಿಹಾರ, ಪರ್ಯಾಯ-ಎರಡೂ ಬೇಕಿದೆ. ವರ್ಷಾಂತ್ಯದ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಮೂಲಕವಾದರೂ ಟೀಮ್‌ ಇಂಡಿಯಾಕ್ಕೆ ಭರವಸೆಯ ಆರಂಭ ಲಭಿಸಬೇಕಿದೆ.

Advertisement

ರಾಹುಲ್‌-ವಿಜಯ್‌ ಫೇಲ್‌
ಸಾಮಾನ್ಯವಾಗಿ ಪಂದ್ಯವೊಂದನ್ನು ಗೆದ್ದಾಗ ವೈಫ‌ಲ್ಯಗಳಿದ್ದರೂ ಮುಚ್ಚಿ ಹೋಗುತ್ತದೆ. ಸೋತಾಗ ವೈಫ‌ಲ್ಯಗಳೇ ಢಾಳಾಗಿ ಗೋಚರಿಸುತ್ತವೆ. ಈವೆರೆಗಿನ 4 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ ರಾಹುಲ್‌-ವಿಜಯ್‌ ಉತ್ತಮ ಆರಂಭ ನೀಡಿದ್ದು ಅಡಿಲೇಡ್‌ ಪಂದ್ಯದ 2ನೇ ಸರದಿಯಲ್ಲಿ ಮಾತ್ರ (63 ರನ್‌). ಉಳಿದ 3 ಇನ್ನಿಂಗ್ಸ್‌ಗಳಲ್ಲಿ ಇವರಿಬ್ಬರಿಂದ ಮೊದಲ ವಿಕೆಟ್‌ ಜತೆಯಾಟದಲ್ಲಿ ದಾಖಲಾದ ರನ್‌ 3, 6 ಮತ್ತು ಸೊನ್ನೆ!
ರಾಹುಲ್‌ ಗಳಿಕೆ 2, 44 ಮತ್ತು 0. ವಿಜಯ್‌ ಸ್ಕೋರ್‌ 11, 18 ಮತ್ತು 20 ರನ್‌. ಬಹುಶಃ ಮೆಲ್ಬರ್ನ್ನಲ್ಲಿ ಡಿ. 26ರಿಂದ ಆರಂಭವಾಗಲಿರುವ 3ನೇ ಟೆಸ್ಟ್‌ ಪಂದ್ಯದಲ್ಲಿ ಈ ಜೋಡಿ ಭಾರತದ ಇನ್ನಿಂಗ್ಸ್‌ ಆರಂಭಿಸುವುದು ಅನುಮಾನ.

ಪೃಥ್ವಿ ಶಾ ಬೇರ್ಪಟ್ಟ ಸಂಕಟ
ನಿಜಕ್ಕಾದರೆ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌, “ಭವಿಷ್ಯದ ತೆಂಡುಲ್ಕರ್‌’ ಎಂದೇ ಕರೆಯಲ್ಪಟ್ಟ ಪೃಥ್ವಿ ಶಾ ಭಾರತದ ಇನ್ನಿಂಗ್ಸ್‌ ಆರಂಭಿಸಬೇಕಿತ್ತು. ಅವರ ಮೇಲೆ ಭಾರೀ ಭರವಸೆಯನ್ನೂ ಇಡಲಾಗಿತ್ತು. ಆದರೆ ಅಭ್ಯಾಸ ಪಂದ್ಯದ ವೇಳೆ ಗಾಯಾಳಾದ ಶಾ ಈಗ ಸರಣಿಯಿಂದಲೇ ಹೊರಬಿದ್ದದ್ದು ತಂಡಕ್ಕೆ ಎದುರಾದ ದೊಡ್ಡ ಆಘಾತ. ಹೀಗಾಗಿ ಆರಂಭಕಾರನೊಬ್ಬ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಜತೆಗಾರನಿಗೂ ಸ್ಫೂರ್ತಿ ತುಂಬುವಂಥ ವಾತಾವರಣವೀಗ ಭಾರತೀಯ ತಂಡದಲ್ಲಿ ಕಾಣುತ್ತಿಲ್ಲ.

ಪರ್ಯಾಯ ಓಪನರ್ ಯಾರು?
ಪೃಥ್ವಿ ಶಾ ಬದಲು ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ ಅವರನ್ನು ಕರೆಸಿಕೊಳ್ಳಲಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಅಗರ್ವಾಲ್‌ “ರನ್‌ ಯಂತ್ರ’ವೇ ಆಗಿದ್ದಾರೆ. ಆದರೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯವಾಡಿದ ಅನುಭವವಿಲ್ಲ. ಇದನ್ನೇ ಅವರು ಸವಾಲಾಗಿ ತೆಗೆದುಕೊಳ್ಳಬೇಕಿದೆ. ಎಡಗೈ ಕಾಂಬಿನೇಶನ್‌ ಬೇಕಿದ್ದರೆ ಪಾರ್ಥಿವ್‌ ಪಟೇಲ್‌ ಇದ್ದಾರೆ. ಏನೇ ಇದ್ದರೂ ಇದು ತಾತ್ಕಾಲಿಕ ಪರಿಹಾರ ಸೂತ್ರ ಮಾತ್ರ. ಕನಿಷ್ಠ ಮುಂದಿನ 4 ವರ್ಷಗಳ ಕಾಲ ಬೇರೂರಬಲ್ಲ ಓಪನಿಂಗ್‌ ಜೋಡಿಯೊಂದು ಭಾರತದ ಪಾಲಿನ ತುರ್ತು ಅಗತ್ಯವಾಗಿದೆ.

ಭಾರತದ ಖ್ಯಾತ ಆರಂಭಿಕ ಜೋಡಿ
1. ಪಂಕಜ್‌ ರಾಯ್‌-ವಿನೂ ಮಂಕಡ್‌
ಭಾರತೀಯ ಕ್ರಿಕೆಟ್‌ ಕಂಡ ಮೊದಲ ಯಶಸ್ವಿ ಆರಂಭಿಕ ಜೋಡಿ. ಇವರು 1956ರ ಚೆನ್ನೈ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ದಾಖಲಿಸಿದ 413 ರನ್‌ ಜತೆಯಾಟ 52 ವರ್ಷಗಳ ಕಾಲ ವಿಶ್ವದಾಖಲೆಯಾಗಿತ್ತು.
2. ಸುನೀಲ್‌ ಗಾವಸ್ಕರ್‌-ಚೇತನ್‌ ಚೌಹಾಣ್‌
ವಿಶ್ವ ಕ್ರಿಕೆಟ್‌ ಕಂಡ 70ರ ದಶಕದ ಯಶಸ್ವೀ ಜೋಡಿ. ಗಾವಸ್ಕರ್‌ ಶತಕಗಳ ವಿಶ್ವದಾಖಲೆ ಬರೆದರೆ, ಚೌಹಾಣ್‌ಗೆ ಸೆಂಚುರಿ ಭಾಗ್ಯವೇ ಒಲಿದಿರಲಿಲ್ಲ. ಆದರೂ ಈ ಜೋಡಿಗೈದ ಮೋಡಿ ಸಾಟಿಯಿಲ್ಲದ್ದು.
3. ವೀರೇಂದ್ರ ಸೆಹವಾಗ್‌-ಗೌತಮ್‌ ಗಂಭೀರ್‌
ಸದ್ಯದ ಮಟ್ಟಿಗೆ ಭಾರತದ ಕೊನೆಯ ಯಶಸ್ವೀ ಓಪನಿಂಗ್‌ ಜೋಡಿ. ಟೆಸ್ಟ್‌ ಕ್ರಿಕೆಟಿಗೆ ಸ್ಫೋಟಕ ಸ್ಪರ್ಶವಿತ್ತ ಸೆಹವಾಗ್‌ 2 ತ್ರಿಶತಕಗಳ ಮೂಲಕ ಮೆರೆದದ್ದು ಅಸಾಮಾನ್ಯ ಸಾಹಸವೇ ಆಗಿದೆ.

Advertisement

“ಆರಂಭಿಕರು ಮೊದಲ ದಿನವೇ ಕ್ರೀಸ್‌ ಆಕ್ರಮಿಸಿಕೊಂಡು ದೊಡ್ಡ ಇನ್ನಿಂಗ್ಸಿಗೆ ಬುನಾದಿ ನಿರ್ಮಿಸಿದರೆ ಅರ್ಧ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಂಡಂತೆ. ಇದರಿಂದ ಮಧ್ಯಮ ಕ್ರಮಾಂಕದವರ ಮೇಲಿನ ಒತ್ತಡ ತಪ್ಪುತ್ತದೆ, ಸರಾಗವಾಗಿ ರನ್‌ ಗಳಿಸಲು ಸಾಧ್ಯವಾಗುತ್ತದೆ’
– ಡಾನ್‌ ಬ್ರಾಡ್‌ಮನ್‌

– ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next