ಹ್ಯಾಮಿಲ್ಟನ್: ನ್ಯೂಝಿಲ್ಯಾಂಡ್ ವಿರುದ್ಧ ಅವರದೇ ನೆಲದಲ್ಲಿ ಟಿ20 ಸರಣಿಯನ್ನು ಗೆದ್ದು ಬೀಗಲು ಟೀಂ ಇಂಡಿಯಾಗೆ ಕಠಿಣ ಸವಾಲು ಲಭಿಸಿದೆ. ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಗೆಲುವಿಗೆ 213 ರನ್ನುಗಳ ಗುರಿ ನಿಗದಿಯಾಗಿದೆ. ಈ ಸವಾಲನ್ನು ನಮ್ಮ ಬ್ಯಾಟ್ಸ್ ಮನ್ ಗಳ ಯಶಸ್ವಿಯಾಗಿ ಬೆನ್ನತ್ತಿದ್ದೇ ಆದಲ್ಲಿ ಕಿವೀಸ್ ನೆಲದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ. ಆರಂಭಿಕ ಆಟಗಾರ ಕಾಲಿನ ಮನ್ರೋ ಅವರ ಜಬರ್ದಸ್ತ್ ಅರ್ಧಶತಕದ ನೆರವಿನಿಂದ ಕಿವೀಸ್ ಸ್ಪರ್ಧಾತ್ಮಕ ಮೊತ್ತ ಪೇರಿಸುವಂತಾಯಿತು. 40 ಎಸೆತಗಳಲ್ಲಿ 72 ರನ್ನುಗಳನ್ನು ಬಾರಿಸಿದ ಮನ್ರೋ ಅವರು ತಮ್ಮ ಈ ಬಿರುಸಿನ ಇನ್ನಿಂಗ್ಸ್ ನಲ್ಲಿ 5 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರೆ, 5 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿ ಮಿಂಚಿದರು.
ಈ ಬಾರಿ ಟಾಸ್ ಗೆಲ್ಲುವ ಅದೃಷ್ಟ ರೋಹಿತ್ ಶರ್ಮಾ ಪಾಲಾಯಿತು. ಟಾಸ್ ಗೆದ್ದ ಅವರು ಆತಿಥೇಯರಿಗೆ ಮೊದಲು ಬ್ಯಾಟಿಂಗ್ ಅವಕಾಶವನ್ನು ಬಿಟ್ಟುಕೊಟ್ಟರು. ಉತ್ತಮ ಪ್ರಾರಂಭ ಪಡೆದ ಕಿವೀಸ್ ಆರಂಭಿಕ ಆಟಗಾರರ ಭರವಸೆಯ ಆಟದ ನೆರವಿನಿಂದ ಮತ್ತು ಮಧ್ಯಮ ಕ್ರಮಾಂಕದ ಬಿರುಸಿನ ಆಟದ ನೆರವಿನಿಂದ ನಿಗದಿತ 20 ಓವರುಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 212 ರನ್ನುಗಳನ್ನು ಕಲೆಹಾಕಿತು.
ಕಿವೀಸ್ ಪರ ಆರಂಭಿಕ ಆಟಗಾರರಾದ ಲೂಯಿಸ್ ಸೀಫರ್ಟ್ (43) ಮತ್ತು ಕಾಲಿನ್ ಮನ್ರೋ (72) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಕಪ್ತಾನ ಕೇನ್ ವಿಲಿಯಮ್ಸನ್ 27 ರನ್ ಹೊಡೆದರು. ಕೊಲಿನ್ ಡಿ ಗ್ರ್ಯಾಂಡ್ ಹೋಮ್ ಅಂತಿಮ ಹಂತದಲ್ಲಿ ಬಿರುಸಿನ ಆಟವಾಡಿ ಕೇವಲ 16 ಎಸೆತಗಳಲ್ಲಿ 30 ರನ್ನುಗಳನ್ನು ಹೊಡೆದರು. ಇವರಿಗೆ ಮಿಶೆಲ್ (19) ಅವರು ಉತ್ತಮ ಬೆಂಬಲ ಒದಗಿಸಿದರು.
ಕೊನೇ ಹಂತದಲ್ಲಿ ಬ್ಯಾಟಿಂಗ್ ಗೆ ಇಳಿದ ಅನುಭವಿ ರಾಸ್ ಟಯ್ಲರ್ ಕೇವಲ 7 ಎಸೆತಗಳಲ್ಲಿ 14 ರನ್ನುಗಳನ್ನು ಸಿಡಿಸಿ ತಂಡದ ಮೊತ್ತ ಏರಲು ಕಾರಣರಾದರು.
ಭಾರತದ ಬೌಲರ್ ಗಳ ಪ್ರದರ್ಶನ ಇಂದು ನಿರಾಶಾದಾಯಕವಾಗಿತ್ತು. ವೇಗಿಗಳ ಸಹಿತ ಎಲ್ಲಾ ಬೌಲರ್ ಗಳು ಇವತ್ತು ದುಬಾರಿಯಾದರು. ಸ್ಪಿನ್ನರ್ ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಖಲೀಲ್ ಅಹಮ್ಮದ್ ಮತ್ತು ಭುನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.