Advertisement

ಲಂಕಾಕ್ಕೆ ಬಂದಿಳಿದ ಟೀಮ್‌ ಇಂಡಿಯಾ ಕೊಹ್ಲಿ ಪಡೆಗೆ 2 ದಿನಗಳ ಅಭ್ಯಾಸ

08:56 AM Jul 21, 2017 | Team Udayavani |

ಕೊಲಂಬೊ: “ಕೋಚ್‌ ರಾಜಕೀಯ’ಕ್ಕೆ ಒಂದು ಹಂತದ ಮಂಗಳ ಹಾಡಿ ಶ್ರೀಲಂಕಾಕ್ಕೆ ಬಂದಿಳಿದಿರುವ ಟೀಮ್‌ ಇಂಡಿಯಾ ಶುಕ್ರವಾರದಿಂದ ಮೊರತುವಾದಲ್ಲಿ 2 ದಿನ ಗಳ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ. ಇದರಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷರ ಬಳಗ ವನ್ನು ಎದುರಿಸಲಿದೆ. ಇದು 3 ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡಕ್ಕೆ ಆಯೋಜಿಸ ಲಾಗಿರುವ ಏಕೈಕ ಅಭ್ಯಾಸ ಪಂದ್ಯ.

Advertisement

ಆದರೆ ಎದುರಾಳಿ ತಂಡದ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭಿ ಸಿಲ್ಲ. ನಿಜಕ್ಕಾದರೆ, ಇತ್ತೀಚೆಗೆ ತವರಿ ನಲ್ಲೇ ಜಿಂಬಾಬ್ವೆ ಯಂಥ ಸಾಮಾನ್ಯ ತಂಡದೆದುರು ಪರದಾಡಿದ್ದ ಶ್ರೀಲಂಕಾಕ್ಕೆ ಈ ಅಭ್ಯಾಸ ಪಂದ್ಯದ ಹೆಚ್ಚು ಆವಶ್ಯಕತೆ ಇದೆ !

ಟೆಸ್ಟ್‌ ಸರಣಿಗಾಗಿ ಪುನರಾಯ್ಕೆಗೊಂಡಿರುವ ರೋಹಿತ್‌  ಶರ್ಮ, ಗಾಯದಿಂದ ಚೇತರಿಸಿಕೊಂಡಿರುವ ಕೆ.ಎಲ್‌. ರಾಹುಲ್‌ ಅವರ ಫಿಟ್‌ನೆಸ್‌ ಹಾಗೂ ಫಾರ್ಮನ್ನು ಈ ಪಂದ್ಯದ ವೇಳೆ ಸೂಕ್ಷ್ಮವಾಗಿ ಗಮನಿಸಲಾಗುವುದು. ಹಾಗೆಯೇ ಗಾಯಾಳು ಆರಂಭಕಾರ ಮುರಳಿ ವಿಜಯ್‌ ಸ್ಥಾನಕ್ಕೆ ಬಂದಿರುವ ಶಿಖರ್‌ ಧವನ್‌ ಆಟದತ್ತಲೂ ಗಮನ ಕೇಂದ್ರೀಕರಿಸ ಲಾಗುವುದು. ಇವರಲ್ಲಿ ರಾಹುಲ್‌, ಧವನ್‌ ಇನ್ನಿಂಗ್ಸ್‌ ಆರಂಭಿಸುವ ಜವಾಬ್ದಾರಿ ಹೊರಲಿರುವು ದರಿಂದ ಇವರ ಫಿಟ್‌ನೆಸ್‌ ತಂಡಕ್ಕೆ ಹೆಚ್ಚು ಅನಿವಾರ್ಯ. ಹೆಚ್ಚುವರಿ ಆರಂಭಕಾರ ಅಭಿನವ್‌ ಮುಕುಂದ್‌ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ ಇರುವು ದರಿಂದ ರಾಹುಲ್‌-ಧವನ್‌ ಜೋಡಿಯನ್ನೇ ಭಾರತ ಹೆಚ್ಚಾಗಿ ಅವಲಂಬಿಸಿದೆ. 

9 ತಿಂಗಳ ಬಳಿಕ ರೋಹಿತ್‌ 
ರೋಹಿತ್‌ ಶರ್ಮ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಕೊನೆಯ ಸಲ ಟೆಸ್ಟ್‌ ಆಡಿದ್ದರು. ಅನಂತರ ಗಾಯಾಳಾದ ಕಾರಣ ಇಂಗ್ಲೆಂಡ್‌, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯ ವಿರುದ್ಧದ ಸರಣಿಗಳಿಂದ ಹೊರಗುಳಿದರು. 5 ತಿಂಗಳ ಬಳಿಕ ಕಣಕ್ಕಿಳಿದು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ನಾಯಕತ್ವ ವಹಿಸಿ, ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ಹೆಗ್ಗಳಿಕೆ ರೋಹಿತ್‌ ಶರ್ಮ ಅವರದ್ದಾಗಿದೆ. ಅನಂತರದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲೂ ಆಡಿ 300 ರನ್‌ ಬಾರಿಸಿ ಗಮನ ಸೆಳೆದರು. ಬಳಿಕ ಹೆಚ್ಚಿನ ವಿಶ್ರಾಂತಿಗೋಸ್ಕರ ವೆಸ್ಟ್‌ ಇಂಡೀಸ್‌ ಪ್ರವಾಸದಿಂದ ಹೊರಗುಳಿಸಲಾಯಿತು. ಇತ್ತ ರೋಹಿತ್‌ ಸ್ಥಾನಕ್ಕೆ ಬಂದಿದ್ದ ಕರುಣ್‌ ನಾಯರ್‌ ತ್ರಿಶತಕದ ಬಳಿಕ ಮಂದಗತಿಯಲ್ಲಿ ಸಾಗಿದ್ದು ಕೂಡ ಬದಲಾವಣೆಗೆ ಕಾರಣವಾಗಿದೆ. ಎಲ್ಲವೂ ಯೋಜನೆಯಂತೆ ಸಾಗಿದರೆ ರೋಹಿತ್‌ ಶರ್ಮ 9 ತಿಂಗಳ ಬಳಿಕ ಟೆಸ್ಟ್‌ ಆಡಲಿಳಿಯುವುದು ಖಚಿತ.

ರಾಹುಲ್‌ ಫಾರ್ಮ್ ನಿರ್ಣಾಯಕ
ಇನ್ನು ಕೆ.ಎಲ್‌. ರಾಹುಲ್‌ ಕತೆ. ಆಸ್ಟ್ರೇಲಿಯ ವಿರುದ್ಧ ಆಡಿದ ಸತತ 7 ಇನ್ನಿಂಗ್ಸ್‌ಗಳಲ್ಲಿ 6 ಅರ್ಧ ಶತಕ ಬಾರಿಸಿದ ರಾಹುಲ್‌, ಬಳಿಕ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದರು. ಹೀಗಾಗಿ ಐಪಿಎಲ್‌, ಚಾಂಪಿಯನ್ಸ್‌ ಟ್ರೋಫಿ ಮತ್ತು ವೆಸ್ಟ್‌ ಇಂಡೀಸ್‌ ಪ್ರವಾಸದಿಂದ ಹೊರಗುಳಿದರು. ಆದ್ದರಿಂದ ರಾಹುಲ್‌ ಫಾರ್ಮ್ ಬಗ್ಗೆ ಖಚಿತವಾಗಿ ಏನನ್ನೂ ಹೇಳುವ ಹಾಗಿಲ್ಲ. ಇದಕ್ಕೆ ಅಭ್ಯಾಸ ಪಂದ್ಯವೇ ಉತ್ತರ ನೀಡಲಿದೆ.

Advertisement

ಕೊಲಂಬೋದ “ಬಿಆರ್‌ಸಿ ಗ್ರೌಂಡ್‌’ ನಲ್ಲಿ ನಡೆಯುವ ಈ ಪಂದ್ಯ ಕೇವಲ 2 ದಿನಗಳದ್ದಾದ್ದ ರಿಂದ ಎಲ್ಲ ಆಟಗಾರರನ್ನೂ “ಟೆಸ್ಟ್‌’ ಮಾಡುವುದು ಸಾಧ್ಯವಿಲ್ಲ. ಆದರೆ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಾಣಿಸಿಕೊಳ್ಳಲಿರುವ ಸಂಭಾವ್ಯ ಆಟಗಾರರಿಗೆ ಈ ಪಂದ್ಯದಲ್ಲಿ ಅವಕಾಶ ಲಭಿಸುವುದರಲ್ಲಿ ಅನುಮಾನವಿಲ್ಲ. 

ಟೆಸ್ಟ್‌ ಸರಣಿಗೂ ಮುನ್ನ ಬೌಲಿಂಗ್‌ ವಿಭಾಗವನ್ನೂ ಭಾರತ ಪರೀಕ್ಷಿಸಬೇಕಿದೆ. ಲಂಕಾ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವುದರಿಂದ ತಂಡದ ತ್ರಿವಳಿ ಸ್ಪಿನ್ನರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ವೇಗದ ಬೌಲಿಂಗ್‌ ವಿಭಾಗದ ಇಶಾಂತ್‌, ಯಾದವ್‌, ಶಮಿ, ಭುವನೇಶ್ವರ್‌ ಫಾರ್ಮ್ ಕೂಡ ಭಾರತಕ್ಕೆ ನಿರ್ಣಾಯಕ ವಾಗಬೇಕಿದೆ. ಹಾಗೆಯೇ ಭುಜದ ನೋವಿನಿಂದ ಆಸ್ಟ್ರೇಲಿಯ ವಿರುದ್ಧದ ಕೊನೆಯ 2 ಟೆಸ್ಟ್‌ಗಳಿಂದ ಹೊರಗುಳಿದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮೇಲೂ ಒಂದು ಕಣ್ಣಿಡಲಾಗಿದೆ. ಸರಣಿಯ ಮೊದಲ ಟೆಸ್ಟ್‌ ಜು. 26ರಿಂದ ಗಾಲೆಯಲ್ಲಿ ಆರಂಭವಾಗಲಿದೆ.

ಹಿಂದಿನ  ಪ್ರವಾಸದ ಯಶಸ್ಸು:  ಕೊಹ್ಲಿ ಮೆಲುಕು
ಕೊಲಂಬೊ: ಕೊಲಂಬೋದಲ್ಲಿ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಕಳೆದ ಸಲದ ಶ್ರೀಲಂಕಾ ಪ್ರವಾಸದ ವೇಳೆ ಸಾಧಿಸಿದ ಯಶಸ್ಸನ್ನು ಸ್ಮರಿಸಿಕೊಂಡಿದ್ದಾರೆ. 2015ರ ಟೆಸ್ಟ್‌ ಸರಣಿಯ ವೇಳೆ ಮೊದಲ ಟೆಸ್ಟ್‌ ಕಳೆದುಕೊಂಡ ಬಳಿಕ ತಿರುಗೇಟು ನೀಡಿದ ಭಾರತ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು.

“ಒಂದು ತಂಡವಾಗಿ ಹೇಗೆ ಆಡಬೇಕು, ಹಿನ್ನಡೆಯ ಬಳಿಕ ಯಾವ ರೀತಿಯ ಪ್ರತಿಹೋರಾಟ ಸಂಘಟಿಸಬೇಕು ಎಂಬು ದಕ್ಕೆ 2015ರ ಶ್ರೀಲಂಕಾ ಪ್ರವಾಸ ನಮ್ಮ ಪಾಲಿಗೆ ಶ್ರೇಷ್ಠ ಉದಾ ಹರಣೆಯಾಗಿತ್ತು. ಒಂದು ತಂಡವಾಗಿ ಹೇಗೆ ಹೋರಾಟ ಸಂಘ ಟಿಸಬೇಕು ಎಂಬುದನ್ನು ನಮಗೆ ಈ ಸರಣಿ ಹೇಳಿಕೊಟ್ಟಿತ್ತು. ವಿದೇಶದಲ್ಲಿ ಸರಣಿಯೊಂದನ್ನು ಹೀಗೂ ಗೆಲ್ಲಬಹುದು ಎಂಬ ಪಾಠ ನಮಗೆ ಈ ಸರಣಿಯಿಂದ ಲಭಿಸಿತ್ತು. ಈ ಬಾರಿಯ ಸರಣಿಯೂ ಉತ್ತಮ ಹೋರಾಟದಿಂದ ಕೂಡಿರಲಿದೆ…’ ಎಂದರು.

ಮುರಳಿ ವಿಜಯ್‌ ಗಾಯಾಳಾಗಿ ತಂಡದಿಂದ ಬೇರ್ಪಟ್ಟ ಬಗ್ಗೆ ಕೊಹ್ಲಿ ವಿಷಾದಿಸಿದರು. “ಅಭಿನವ್‌ ಮುಕುಂದ್‌ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಶಿಖರ್‌ ಧವನ್‌ ಕಳೆದ ಸಲ ಲಂಕೆಗೆ ಬಂದಾಗ ಸೆಂಚುರಿ ಹೊಡೆದಿದ್ದರು. ಆದರೆ ಧವನ್‌ ಒಂದೆರಡು ಪಂದ್ಯಗಳಿಂದ ಹೊರಗುಳಿದಾಗ ಪೂಜಾರ ಇನ್ನಿಂಗ್ಸ್‌ ಆರಂಭಿಸಿದ್ದರು. ರಾಹುಲ್‌ ಓರ್ವ ಚಾಂಪಿಯನ್‌ ಓಪನರ್‌. ತಂಡದ ಎಲ್ಲ ಆಟಗಾರರೂ ಉತ್ತಮ ಪ್ರದರ್ಶನ ನೀಡುವ ಗುರಿ ಹೊತ್ತು ಇಲ್ಲಿಗೆ ಬಂದಿದ್ದಾರೆ…’ ಎಂದರು.

ಎಲ್ಲವೂ ಲಂಕಾದಿಂದಲೇ: ಶಾಸ್ತ್ರಿ
ಟೀಮ್‌ ಇಂಡಿಯಾದ ನೂತನ ಕೋಚ್‌ ರವಿಶಾಸ್ತ್ರಿ ಮಾತನಾಡಿ, ತಮ್ಮ ಮೊದಲ ಕ್ರಿಕೆಟ್‌ ಪ್ರವಾಸವನ್ನು ನೆನಪಿಸಿಕೊಂಡರು. “ನನ್ನ ಕ್ರಿಕೆಟ್‌ ಪ್ರವಾಸಕ್ಕೆ ನಾಂದಿ ಹಾಡಿದ್ದೇ ಶ್ರೀಲಂಕಾ. ಆಗ ನನಗೆ 18ರ ಹರೆಯ, ಅಂಡರ್‌-19 ತಂಡದ ಸದಸ್ಯ. ನಾನು ಮೊದಲ ಸಲ ವೀಕ್ಷಕ ವಿವರಣೆ ನೀಡಿದ್ದೂ ಶ್ರೀಲಂಕಾದಿಂದಲೇ, 1992ರಲ್ಲಿ. ಈಗ ಭಾರತ ತಂಡದ ಕೋಚ್‌ ಹುದ್ದೆಯನ್ನೂ ಇಲ್ಲಿಂದಲೇ ಆರಂಭಿಸುತ್ತಿದ್ದೇನೆ. ಶ್ರೀಲಂಕಾ ತವರಿನಲ್ಲಿ ಉತ್ತಮ ದಾಖಲೆ ಹೊಂದಿರುವಂಥ ತಂಡ. ಇವರ ವಿರುದ್ಧ ಉತ್ತಮ ಪ್ರದರ್ಶನ ನೀಡಿ ನಂಬರ್‌ ವನ್‌ ಟೆಸ್ಟ್‌ ಸ್ಥಾನವನ್ನು ಉಳಿಸಿ ಕೊಳ್ಳುವುದು ನಮ್ಮ ಗುರಿಯಾಗಿದೆ…’ ಎಂದು ಶಾಸ್ತ್ರಿ ಹೇಳಿದರು.

ಶ್ರೀಲಂಕಾದ ಟೆಸ್ಟ್‌ ನಾಯಕ ದಿನೇಶ್‌ ಚಂಡಿಮಾಲ್‌ ಗೈರಲ್ಲಿ ಏಕದಿನ ತಂಡದ ನಾಯಕ ಉಪುಲ್‌ ತರಂಗ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next