Advertisement

IND vs ZIM; ಟೀಮ್‌ ಇಂಡಿಯಾ ಹೆಚ್ಚು ಬಲಿಷ್ಠ: ಜೈಸ್ವಾಲ್‌, ಸ್ಯಾಮ್ಸನ್‌, ದುಬೆ ಆಗಮನ

11:59 PM Jul 09, 2024 | Team Udayavani |

ಹರಾರೆ: ಆತಿಥೇಯ ಜಿಂಬಾಬ್ವೆ ಮೇಲೆ ಒಂದೇ ದಿನದಲ್ಲಿ ತಿರುಗಿ ಬಿದ್ದು ಸರಣಿಯನ್ನು ಸಮಬಲಕ್ಕೆ ತಂದ ಭಾರತ, ಬುಧವಾರ 3ನೇ ಟಿ20 ಪಂದ್ಯದಲ್ಲಿ ಹೆಚ್ಚು ಬಲಿಷ್ಠವಾಗಿ ಕಣಕ್ಕಿಳಿಯಲಿದೆ.

Advertisement

ಟಿ20 ವಿಶ್ವಕಪ್‌ ಕೂಟದ ಪ್ರಮುಖ ಆಟಗಾರರಾದ ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌ ಮತ್ತು ಶಿವಂ ದುಬೆ ತಂಡವನ್ನು ಸೇರಿಕೊಂಡಿರುವುದೇ ಇದಕ್ಕೆ ಕಾರಣ. ಇದರಿಂದ ಗೆಲುವಿನ ಲಯದಲ್ಲಿ ಸಾಗಿ ಸರಣಿ ಮುನ್ನಡೆ ಸಾಧಿಸುವ ಭಾರತದ ಯೋಜನೆಗೆ ಹೆಚ್ಚಿನ ಬಲ ಬಂದಿದೆ.

ಈ ಮೂವರಲ್ಲಿ ಶಿವಂ ದುಬೆ ಹೊರತುಪಡಿಸಿ ಉಳಿದಿಬ್ಬರಿಗೆ ಟಿ20 ವಿಶ್ವಕಪ್‌ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಜಿಂಬಾಬ್ವೆಯಲ್ಲಿ ಇವರು ತಮ್ಮ ಸಾಮರ್ಥ್ಯವನ್ನು ತೆರೆದಿಡಲು ಹಾತೊರೆಯುವುದು ಖಂಡಿತ.

ಬ್ಯಾಟಿಂಗ್‌ ಕ್ರಮಾಂಕ ಹೇಗೆ?
ಈ ಮೂವರ ಆಗಮನದಿಂದ ತಂಡದ ಕಾಂಬಿನೇ ಶನ್‌ನಲ್ಲಿ, ಮುಖ್ಯವಾಗಿ ಅಗ್ರ ಕ್ರಮಾಂಕದಲ್ಲಿ ಬದಲಾ ವಣೆ ಅನಿವಾರ್ಯವಾಗಿದೆ. ಹಾಗೆಯೇ ಇದು ತುಸು ಜಟಿಲವೂ ಹೌದು. ಏಕೆಂದರೆ, ಟೀಮ್‌ ಇಂಡಿಯಾ ದಲ್ಲೀಗ ಬರೋಬ್ಬರಿ ನಾಲ್ವರು ಓಪನರ್ ಇದ್ದಾರೆ!

ಮೊದಲ ಆಯ್ಕೆಯ ಓಪನರ್‌ ಆಗಿರುವ ಯಶಸ್ವಿ ಜೈಸ್ವಾಲ್‌ ಮತ್ತು 2ನೇ ಪಂದ್ಯದಲ್ಲಿ ಸೆಂಚುರಿ ಬಾರಿಸಿ ಭಾರೀ ಸಂಚಲನ ಮೂಡಿಸಿದ ಅಭಿಷೇಕ್‌ ಶರ್ಮ ನಡುವೆ ಪೈಪೋಟಿ ಇದೆ. ಜೈಸ್ವಾಲ್‌ ಅವರನ್ನು ಓಪನಿಂಗ್‌ ಸ್ಥಾನಕ್ಕೆ ತಂದರೆ ನಾಯಕ ಶುಭಮನ್‌ ಗಿಲ್‌ ವನ್‌ಡೌನ್‌ನಲ್ಲಿ ಬರಬಹುದು. ಜೈಸ್ವಾಲ್‌-ಅಭಿಷೇಕ್‌, ಇಬ್ಬರೂ ಸ್ಫೋಟಕ ಹಾಗೂ ಎಡಗೈ ಬ್ಯಾಟರ್. ಇವರನ್ನು ಒಟ್ಟಿಗೆ ಕಳುಹಿಸಬಹುದೇ ಎಂಬ ಪ್ರಶ್ನೆಯೂ ಇದೆ.

Advertisement

ಹೀಗೆ ಜೈಸ್ವಾಲ್‌, ಅಭಿಷೇಕ್‌ ಮತ್ತು ಗಿಲ್‌ ಅವರಿಂದ ಮೊದಲ 3 ಸ್ಥಾನ ಭರ್ತಿಯಾದ ಬಳಿಕ ಋತುರಾಜ್‌ ಗಾಯಕ್ವಾಡ್‌ 4ನೇ ಕ್ರಮಾಂಕಕ್ಕೆ ಇಳಿಯಬೇಕಾಗುತ್ತದೆ. ಸಾಮಾನ್ಯವಾಗಿ ರಾಜಸ್ಥಾನ್‌ ರಾಯಲ್ಸ್‌ ಪರ 3ನೇ ಕ್ರಮಾಂಕದಲ್ಲಿ ಬರುವ ಸಂಜು ಸ್ಯಾಮ್ಸನ್‌ ಇಲ್ಲಿ 5ನೇ ಸ್ಥಾನದಲ್ಲಿ ಆಗಮಿಸಬೇಕಾಗುತ್ತದೆ. ಜೈಸ್ವಾಲ್‌ ಮತ್ತು ಸ್ಯಾಮ್ಸನ್‌ಗಾಗಿ ಬಿ. ಸಾಯಿ ಸುದರ್ಶನ್‌ ಮತ್ತು ಧ್ರುವ ಜುರೆಲ್‌ ಹೊರಗುಳಿಯಬೇಕಾಗುತ್ತದೆ. ಇವರಲ್ಲಿ ಸಾಯಿ ಸುದರ್ಶನ್‌ ಮೊದಲೆರಡು ಪಂದ್ಯಗಳಿಗಷ್ಟೇ ಆಯ್ಕೆಯಾಗಿದ್ದರು. ಶಿವಂ ದುಬೆ ಅವರನ್ನು ಹನ್ನೊಂದರ ಬಳಗಕ್ಕೆ ಸೇರಿಸಬೇಕಾದರೆ ರಿಯಾನ್‌ ಪರಾಗ್‌ ಅವರನ್ನು ಕೈಬಿಡಬೇಕಾಗುತ್ತದೆ.

ಅಭಿಷೇಕ್‌ ಹೊರಗೆ?
ಇದೇ ವೇಳೆ ಅನುಭವಿ ಜೈಸ್ವಾಲ್‌ಗಾಗಿ ಅಭಿಷೇಕ್‌ ಶರ್ಮ ಅವರನ್ನು ಕೈಬಿಡಲಾಗುತ್ತದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಶತಕ ಬಾರಿಸಿ, ಪಂದ್ಯಶ್ರೇಷ್ಠರೆನಿಸಿದ ಮರುಪಂದ್ಯದಲ್ಲೇ ಆಡಳಿತ ಮಂಡಳಿ ಇಂಥದೊಂದೊಂದು ಕಠಿನ ನಿರ್ಧಾರ ತೆಗೆದುಕೊಂಡೀತೇ ಎಂಬುದೊಂದು ಪ್ರಶ್ನೆ.

ಭಾರತದಲ್ಲಿ ಹಿಂದೆ ಇಂಥ ನಿದರ್ಶನ ಕಂಡುಬಂದದ್ದಿದೆ. 2011ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಮನೋಜ್‌ ತಿವಾರಿ ಚೊಚ್ಚಲ ಏಕದಿನ ಶತಕ ಬಾರಿಸಿದ ಬೆನ್ನಲ್ಲೇ ತಂಡದಿಂದ ಬೇರ್ಪಟ್ಟಿದ್ದರು. ಇಂಗ್ಲೆಂಡ್‌ ವಿರುದ್ಧ 2016ರ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ ಮರು ಪಂದ್ಯದಲ್ಲೇ ಕರುಣ್‌ ನಾಯರ್‌ ಅವರನ್ನು ಹೊರಗಿರಿಸಲಾಗಿತ್ತು. ಆದರೆ ಅಂಡರ್‌-14 ಕಾಲದಿಂದಲೂ ಶುಭಮನ್‌ ಗಿಲ್‌ ಅವರ ದೋಸ್ತಿ ಆಗಿರುವುದು ಅಭಿಷೇಕ್‌ಗೆ ಲಾಭವಾಗುವ ಎಲ್ಲ ಸಾಧ್ಯತೆ ಇದೆ.

ಬೌಲಿಂಗ್‌ ಬದಲಾವಣೆ ಅಸಂಭವ
ಭಾರತದ ಬೌಲಿಂಗ್‌ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಯ ಸಾಧ್ಯತೆ ಕಾಣಿಸದು. ಮಧ್ಯಮ ವೇಗಿ ತುಷಾರ್‌ ದೇಶಪಾಂಡೆ ಒಬ್ಬರು ಆಡಲು ಬಾಕಿ ಇದೆ. ಆದರೆ ಹರಾರೆ ಟ್ರ್ಯಾಕ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದೆ. ಬಿಷ್ಣೋಯಿ, ವಾಷಿಂಗ್ಟನ್‌ ಇದರ ಪ್ರಯೋಜನ ಪಡೆಯುತ್ತ ಬಂದಿದ್ದಾರೆ. ಬಿಷ್ಣೋಯಿ ತಮ್ಮ 4 ಓವರ್‌ಗಳ ಕೋಟಾದಲ್ಲಿ 20-22 ಗೂಗ್ಲಿ ಎಸೆಯುವುದು ಉತ್ತಮ ಪರಿಣಾಮ ಬೀರುತ್ತಿದೆ.

13 ರನ್‌ ಸೋಲನ್ನು ಸವಾಲು ಹಾಗೂ ಎಚ್ಚರಿಕೆಯ ಗಂಟೆಯಾಗಿ ಸ್ವೀಕರಿಸಿದ ಭಾರತವನ್ನು ಇನ್ನು ನಿಯಂತ್ರಿಸುವುದು ಸುಲಭವಲ್ಲ. ಜಿಂಬಾಬ್ವೆ ಮೇಲುಗೈ ಸಾಧಿಸಬೇಕಾದರೆ ಎಲ್ಲ ವಿಭಾಗಗಳಲ್ಲಿ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next