Advertisement

Team India ; ಆಸ್ಟ್ರೇಲಿಯ ವಿರುದ್ಧ ವನಿತಾ ಟಿ20 ಸರಣಿ ಕಳೆದುಕೊಂಡ ಭಾರತ

11:12 PM Jan 09, 2024 | Team Udayavani |

ನವಿ ಮುಂಬಯಿ: ನಿರ್ಣಾ ಯಕ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಕ್ಕೆ 7 ವಿಕೆಟ್‌ಗಳಿಂದ ಶರಣಾದ ಭಾರತದ ವನಿತೆಯರು ತವರಲ್ಲಿ ಸರಣಿ ಗೆಲ್ಲುವ ಅಪೂರ್ವ ಅವಕಾಶವನ್ನು ಕಳೆದುಕೊಂಡರು. ಮೊದಲ ಪಂದ್ಯವನ್ನು ಗೆದ್ದು ಭರವಸೆ ಮೂಡಿಸಿದ್ದ ಕೌರ್‌ ಪಡೆ, ಅನಂತರದ ಎರಡೂ ಪಂದ್ಯಗಳನ್ನು ಸೋತು ನಿರಾಸೆ ಮೂಡಿಸಿತು.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 147 ರನ್‌ ಗಳಿಸಿದರೆ, ಆಸ್ಟ್ರೇಲಿಯ 18.4 ಓವರ್‌ಗಳಲ್ಲಿ 3 ವಿಕೆಟಿಗೆ 149 ರನ್‌ ಗಳಿಸಿ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿತು.ಆರಂಭಿಕರಾದ ಅಲಿಸ್ಸಾ ಹೀಲಿ ಮತ್ತು ಬೆತ್‌ ಮೂನಿ ಭರ್ತಿ 10 ಓವರ್‌ ನಿಭಾಯಿಸಿ ಭಾರತವನ್ನು ಕಾಡಿದರು. ಮೊದಲ ವಿಕೆಟಿಗೆ 85 ರನ್‌ ಒಟ್ಟುಗೂಡಿತು. ಆಗಲೇ ಆಸೀಸ್‌ ಗೆಲುವು ಖಚಿತಗೊಂಡಿತು. ಹೀಲಿ 38 ಎಸೆತ ನಿಭಾಯಿಸಿ 55 ರನ್‌ ಬಾರಿಸಿದರೆ (9 ಬೌಂಡರಿ, 1 ಸಿಕ್ಸರ್‌), ಮೂನಿ ಔಟಾಗದೆ 52 ರನ್‌ ಹೊಡೆ ದರು (45 ಎಸೆತ, 5 ಬೌಂಡರಿ).

ಭಾರತ ಆರಂಭ ಮತ್ತು ಕೊನೆಯ ಹಂತದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಮೊದಲು ಶಫಾಲಿ ವರ್ಮ, ಸ್ಮತಿ ಮಂಧನಾ, ಬಳಿಕ ರಿಚಾ ಘೋಷ್‌ ರನ್‌ಗತಿ ಏರಿಸುವಲ್ಲಿ ಯಶಸ್ವಿಯಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕುಸಿತಕ್ಕೊಳಗಾಯಿತು. ಕಾರಣ, ಜೆಮಿಮಾ ರೋಡ್ರಿಗಸ್‌ (2), ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (3) ಅವರ ವೈಫ‌ಲ್ಯ.
ಶಫಾಲಿ-ಮಂಧನಾ 4.4 ಓವರ್‌ ನಿಭಾಯಿಸಿ ಮೊದಲ ವಿಕೆಟಿಗೆ 39 ರನ್‌ ಪೇರಿಸಿದರು. ಶಫಾಲಿ 17 ಎಸೆತ ಗಳಿಂದ 26 ರನ್‌ (6 ಬೌಂಡರಿ), ಮಂಧನಾ 28 ಎಸೆತಗಳಿಂದ 29 ರನ್‌ (2 ಬೌಂಡರಿ, 1 ಸಿಕ್ಸರ್‌) ಹೊಡೆದರು.

ಒಂದು ಹಂತದಲ್ಲಿ ಒಂದಕ್ಕೆ 60 ರನ್‌ ಮಾಡಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ 99ಕ್ಕೆ 5 ವಿಕೆಟ್‌ ಕಳೆದುಕೊಂಡಿತು. ಜೆಮಿಮಾ, ಕೌರ್‌ ಮತ್ತು ದೀಪ್ತಿ ಬೇಗನೇ ಪೆವಿಲಿಯನ್‌ ಸೇರಿಕೊಂಡರು.ಕೊನೆಯಲ್ಲಿ ರಿಚಾ ಘೋಷ್‌ ಸಿಡಿದು ನಿಂತ ಪರಿಣಾಮ ಸ್ಕೋರ್‌ 140ರ ಗಡಿ ದಾಟಿತು. ಆಕ್ರಮಣಕಾರಿ ಯಾಗಿ ಬ್ಯಾಟ್‌ ಬೀಸಿದ ರಿಚಾ 28 ಎಸೆತಗಳಿಂದ 34 ರನ್‌ ಮಾಡಿದರು. 3 ಸಿಕ್ಸರ್‌, 2 ಬೌಂಡರಿ ಸಿಡಿಸಿದರು. ಅಮನ್‌ಜೋತ್‌ ಅವರದು ಅಜೇಯ 17 ರನ್‌ ಗಳಿಕೆ.
ಆಸ್ಟ್ರೇಲಿಯ ಪರ ಮಧ್ಯಮ ವೇಗಿ ಅನ್ನಾಬೆಲ್‌ ಸದರ್‌ಲ್ಯಾಂಡ್‌ ಮತ್ತು ಲೆಗ್‌ ಸ್ಪಿನ್ನರ್‌ ಜಾರ್ಜಿಯಾ ವೇರ್‌ಹ್ಯಾಮ್‌ ತಲಾ 2 ವಿಕೆಟ್‌ ಕೆಡವಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-6 ವಿಕೆಟಿಗೆ 147 (ರಿಚಾ 34, ಮಂಧನಾ 29, ಶಫಾಲಿ 26, ಅಮನ್‌ಜೋತ್‌ ಔಟಾಗದೆ 17, ಸದರ್‌ಲ್ಯಾಂಡ್‌ 12ಕ್ಕೆ 2, ವೇರ್‌ಹ್ಯಾಮ್‌ 24ಕ್ಕೆ 2). ಆಸ್ಟ್ರೇಲಿಯ-18.4 ಓವರ್‌ಗಳಲ್ಲಿ 3 ವಿಕೆಟಿಗೆ 149 (ಹೀಲಿ 55, ಮೂನಿ ಔಟಾಗದೆ 52, ಪೂಜಾ 26ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next