ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗಾಗಿ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಭಾರತೀಯ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬೀಸು ಹೊಡೆತಗಳ ಕ್ರಿಕೆಟಿಗನಾಗಿರುವ ಪಂತ್ ಭಾರತದ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಇವರಿಗಾಗಿ ದಿನೇಶ್ ಕಾರ್ತಿಕ್ ಅವರನ್ನು ಹೊರಗಿರಿಸಲಾಯಿತು.
ಪಂತ್ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಕಾಯ್ದುಕೊಂಡು ಬಂದುದರಿಂದ ಹಾಗೂ ಇವರ ಬ್ಯಾಟಿಂಗ್ ಶೈಲಿ ಏಕದಿನಕ್ಕೆ ಹೆಚ್ಚು ಹೊಂದಿಕೊಳ್ಳುವುದರಿಂದ ಈ ಆಯ್ಕೆ ನಿರೀಕ್ಷಿತವೇ ಆಗಿತ್ತು. ಆದರೆ ಕೀಪಿಂಗಿಗೆ ಧೋನಿ ಇರುವುದರಿಂದ ಪಂತ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಬೇಕಾಗುತ್ತದೆ.
ಏಶ್ಯ ಕಪ್ ವೇಳೆ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ನಾಯಕನಾಗಿ ಮುಂದುವರಿಯಲಿ ದ್ದಾರೆ. ಇನ್ನೂ ಚೇತರಿಸಿಕೊಳ್ಳದ ಪಾಂಡ್ಯ ಮತ್ತು ಜಾಧವ್ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಹಾಗೆಯೇ ಸ್ಟ್ರೈಕ್ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ ಅವರ ವಿಶ್ರಾಂತಿಯನ್ನು ಮುಂದುವರಿಸಲಾಗಿದೆ. ಶಮಿ ಒಂದು ವರ್ಷದ ಬಳಿಕ ತಂಡಕ್ಕೆ ಮರಳಿದ್ದಾರೆ.
ಏಶ್ಯ ಕಪ್‌ನಲ್ಲಿ ವನ್‌ಡೌನ್ ಕ್ರಮಾಂಕದಲ್ಲಿ ಆಡಿದ ಅಂಬಾಟಿ ರಾಯುಡು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ, ಎಡಗೈ ಪೇಸ್ ಬೌಲರ್ ಖಲೀಲ್ ಅಹ್ಮದ್ ಸ್ಥಾನ ಉಳಿಸಿಕೊಂಡಿದ್ದಾರೆ. ಹೆಚ್ಚುವರಿ ಓಪನರ್ ಕೆ.ಎಲ್. ರಾಹುಲ್ ಕೂಡ ತಂಡದಲ್ಲಿ ಮುಂದುವರಿದಿದ್ದಾರೆ. ಸರಣಿಯ ಮೊದಲೆರಡು ಪಂದ್ಯ ಗಳು ಗುವಾಹಾಟಿ (ಅ. 21) ಹಾಗೂ ವಿಶಾಖಪಟ್ಟಣದಲ್ಲಿ (ಅ. 24) ನಡೆಯಲಿವೆ.
ಭಾರತ ತಂಡ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಕೆ.ಎಲ್. ರಾಹುಲ್, ಅಂಬಾಟಿ ರಾಯುಡು, ಮನೀಷ್ ಪಾಂಡೆ, ಮಹೇಂದ್ರ ಸಿಂಗ್ ಧೋನಿ, ರಿಷಬ್ ಪಂತ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹ್ಮದ್, ಶಾದೂಲ್ ಠಾಕೂರ್.