Advertisement

ಎರಡನೇ ಟಿ20: ಕೊಹ್ಲಿ – ಅಯ್ಯರ್ ಸೂಪರ್ ಬ್ಯಾಟಿಂಗ್ ; ಭಾರತಕ್ಕೆ 07 ವಿಕೆಟ್ ಜಯ

09:57 AM Jan 08, 2020 | Team Udayavani |

ಇಂದೋರ್: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಇಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ಭಾರತ 07 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಶ್ರೀಲಂಕಾ ನೀಡಿದ 142 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕೆ.ಎಲ್. ರಾಹುಲ್ (45) ಮತ್ತು ಶಿಖರ್ ಧವನ್ (32) ಅವರ ಉತ್ತಮ ಜೊತೆಯಾಟದ ನೆರವಿನಿಂದ 17.3 ಓವರುಗಳಲ್ಲಿ 03 ವಿಕೆಟ್ ಗಳ ನಷ್ಟದಲ್ಲಿ ಗೆಲುವಿನ ಗುರಿಯನ್ನು ತಲುಪಿತು.

Advertisement

ಉತ್ತಮ ಬೌಲಿಂಗ್ ದಾಳಿ ನಡೆಸಿ 04 ಓವರ್ ಗಳಲ್ಲಿ 18 ರನ್ ನೀಡಿ 02 ವಿಕೆಟ್ ಪಡೆದ ವೇಗಿ ನವದೀಪ್ ಸೈನಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಗುಹವಾಟಿಯಲ್ಲಿ ರವಿವಾರದಂದು ನಡೆಯಬೇಕಿದ್ದ ಮೊದಲನೇ ಟಿ20 ಪಂದ್ಯ ಮಳೆಯ ಕಾರಣದಿಂದಾಗಿ ಒಂದೂ ಎಸೆತವನ್ನು ಕಾಣದೆ ರದ್ದುಗೊಂಡಿತ್ತು.


ರಾಹುಲ್ ಮತ್ತು ಧವನ್ ಅವರ ಬಳಿಕ ಉತ್ತಮ ಜೊತೆಯಾಟ ಕಟ್ಟಿದ ಕ್ಯಾಪ್ಟನ್ ಕೊಹ್ಲಿ (ಅಜೇಯ 30) ಮತ್ತು ಶ್ರೇಯಸ್ ಅಯ್ಯರ್ (34) ತಂಡದ ಗೆಲುವನ್ನು ಸರಾಗಗೊಳಿಸಿದರು. ಅದರಲ್ಲೂ ಸ್ಪೋಟಕ ಬ್ಯಾಟಿಂಗ್ ನಡೆಸಿದ ಕ್ಯಾಪ್ಟನ್ ಕೊಹ್ಲಿ ಕೇವಲ 17 ಎಸೆತಗಳಿಂದ 30 ರನ್ ಸಿಡಿಸಿ ಅಜೇಯರಾಗಿ ಉಳಿದರು. ಮಾತ್ರವಲ್ಲದೇ ತನ್ನ ಈ ಸ್ಪೋಟಕ ಇನ್ನಿಂಗ್ಸ್ ವೇಳೆ ವಿರಾಟ್ ಕೊಹ್ಲಿ ಅವರು ನಾಯಕನಾಗಿ ಅಂತಾರಾಷ್ಟ್ರೀಯ ಟಿ20ಯಲ್ಲಿ 1000 ರನ್ ಗಳಿಸಿದ ದಾಖಲೆಯನ್ನೂ ಬರೆದರು.


ಟಾಸ್ ಗೆದ್ದ ಭಾರತ ಶ್ರೀಲಂಕಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಭಾರತದ ಬಿಗು ದಾಳಿಯ ಎದುರು ಲಂಕಾ ಬ್ಯಾಟ್ಸ್ ಮನ್ ಗಳು ಸಿಡಿಯಲು ವಿಫಲರಾದರು. ತಂಡದ ಮೊತ್ತ 104 ಆಗುವಷ್ಟರಲ್ಲಿ 5 ಜನ ಬ್ಯಾಟ್ಸ್ ಮನ್ ಗಳು ಔಟಾಗಿದ್ದರು.

ವಿಕೆಟ್ ಕೀಪರ್ ಕುಸಲ್ ಪೆರೆರಾ (34) ಅವರದ್ದೇ ಗರಿಷ್ಠ ಗಳಿಕೆ. ಉಳಿದಂತೆ ಧನುಷ್ಕ ಗುಣತಿಲಕ (20), ಅವಿಷ್ಕ ಫೆರ್ನಾಂಡೋ (22) ಮತ್ತು ಕೊನೇ ಹಂತದಲ್ಲಿ ಧನಂಜಯ ಡಿಸಿಲ್ವಾ (13 ಎಸೆತೆಗಳಲ್ಲಿ 17) ಮತ್ತು ಹಸ್ ರಂಗ ಡಿಸಿಲ್ವಾ (10 ಎಸೆತಗಳಲ್ಲಿ ಅಜೇಯ 16) ಸಿಡಿದ ಕಾರಣ ಲಂಕಾ ನಿಗದಿತ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳನ್ನು ಕಲೆ ಹಾಕಿತು.


ಭಾರತದ ಪರ ವೇಗಿ ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್ ದಾಳಿ ನಡೆಸಿ 03 ವಿಕೆಟ್ ಪಡೆದರೆ ಇನ್ನೊಬ್ಬ ವೇಗಿ ನವದೀಪ್ ಸೈನಿ 02 ವಿಕೆಟ್ ಪಡೆದರು. ದುಬಾರಿಯೆಣಿಸಿದರೂ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಸಹ 02 ವಿಕೆಟ್ ಪಡೆದು ಮಿಂಚಿದರು. ಬುಮ್ರಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ 01 ವಿಕೆಟ್ ಪಡೆದರು.


Advertisement

Udayavani is now on Telegram. Click here to join our channel and stay updated with the latest news.

Next