ಡರ್ಬಿ: ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಮೊದಲು ಭಾರತ ತಂಡ ಅಭ್ಯಾಸ ಪಂದ್ಯವಾಡುತ್ತಿದ್ದು, ಡರ್ಬಿಶೈರ್ ವಿರುದ್ಧ ಭಾರತ ತಂಡ ಏಳು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಭಾರತ ತಂಡವನ್ನು ದಿನೇಶ್ ಕಾರ್ತಿಕ್ ಮುನ್ನಡೆಸಿದರೆ, ಡರ್ಬಿಶೈರ್ ತಂಡವನ್ನು ಶಾನ್ ಮಸೂದ್ ಮುನ್ನಡೆಸಿದರು. ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಭಾರತ ತಂಡದ ನಿಖರ ದಾಳಿಗೆ ಸಿಲುಕಿದ ಡರ್ಬಿಶೈರ್ ತಂಡ 20 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 150 ರನ್ ಗಳಿಸಿತು. ಗುರಿ ಬೆನ್ನತ್ತಿದ ಭಾರತ ತಂಡ 16.4 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಜಯಿಸಿತು.
ಡರ್ಬಿಶೈರ್ ಪರ 28 ರನ್ ಗಳಿಸಿದ ಮ್ಯಾಡ್ಸೆನ್ ಅವರದ್ದೇ ಹೆಚ್ಚಿನ ಗಳಿಕೆ. ಕ್ಯಾಟ್ ರೈಟ್ 27 ರನ್, ಅಲೆಕ್ಸ್ ಹ್ಯೂಸ್ 24 ರನ್ ಗಳಿಸಿದರು. ಭಾರತದ ಪರ ಅರ್ಷದೀಪ್ ಮತ್ತು ಉಮ್ರಾನ್ ಮಲಿಕ್ ತಲಾ ಎರಡು ವಿಕೆಟ್ ಪಡೆದರು. ಅಕ್ಸರ್ ಮತ್ತು ವೆಂಕಟೇಶ್ ಅಯ್ಯರ್ ತಲಾ ಒಂದು ವಿಕೆಟ್ ಕಿತ್ತರು.
ಇದನ್ನೂ ಓದಿ:ಇಂಗ್ಲೆಂಡ್ ಅಂಗಳದಲ್ಲಿ ದಾಖಲೆ ಬರೆದ ಪಂತ್- ಜಡ್ಡು; ಕಂಗಾಲಾದ ಆ್ಯಂಡರ್ಸನ್
ಗುರಿ ಬೆನ್ನತ್ತಿದ ಭಾರತದ ಪರ ದೀಪಕ್ ಹೂಡಾ ತನ್ನ ಫಾರ್ಮ್ ಮುಂದುವರಿಸಿದರು. ಮತ್ತೊಂದು ಅರ್ಧಶತಕ ಬಾರಿಸಿದ ಹೂಡಾ 59 ರನ್ ಗಳಿಸದರು. ಉಳಿದಂತೆ ಸಂಜು ಸ್ಯಾಮ್ಸನ್ 38 ರನ್, ಸೂರ್ಯಕುಮಾರ್ ಯಾದವ್ 38 ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.
ಭಾರತದ ತಂಡ ಎರಡನೇ ಅಭ್ಯಾಸ ಪಂದ್ಯವನ್ನು ರವಿವಾರ ನಾರ್ಥಂಪ್ಟನ್ ಶೈರ್ ವಿರುದ್ಧ ಆಡಲಿದೆ.