Advertisement

ನಕಲಿ ವೈದ್ಯರ ಪತ್ತೆಗೆ ತಂಡ

10:17 AM Sep 17, 2019 | Suhan S |

ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಅಧಿಕಾರ ವಹಿಸಿಕೊಂಡ ನಂತರ ಸೋಮವಾರ ನಡೆಸಿದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ 16ಕ್ಕೂ ಹೆಚ್ಚು ಅರ್ಜಿದಾರರಿಗೆ ಸಮಸ್ಯೆ, ಬೇಡಿಕೆ ಬಗೆಹರಿಸುವ ಭರಪೂರ ವಿಶ್ವಾಸ ತುಂಬುವ ಮೂಲಕ ಸೂಕ್ತವಾಗಿ ಸ್ಪಂದಿಸಿದರು.

Advertisement

ದಾವಣಗೆರೆ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಇದೆ. ಹೋಮಿಯೋಪಥಿ ಹೆಸರಲ್ಲಿ ನೋಂದಣಿಯಾದ ಕೆಲ ಆಸ್ಪತ್ರೆಯಲ್ಲಿ ಅಲೋಪಥಿ ಚಿಕಿತ್ಸೆ ನೀಡಲಾಗುತ್ತಿದೆ, ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌ ದೂರಿದರು.

ನಕಲಿ ವೈದ್ಯರ ಪತ್ತೆಗಾಗಿ ಅಧಿಕಾರಿಗಳ ತಂಡ ರಚನೆ ಮಾಡಲಾಗುವುದು. ದಾವಣಗೆರೆ ನಗರ ನಂತರ ತಾಲೂಕು ಕೇಂದ್ರಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಎಲ್ಲಾ ಅಧಿಕಾರಿಗಳ ಕಣ್ಮುಂದೆ ಎಲ್ಲವೂ ನಡೆಯುತ್ತಿದೆಯಾದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ಶ್ರೀಕಾಂತ್‌ ಹೇಳಿದಾಗ, ಹೌದು ಮಾರಾಯ ಈಗ ನಾನು ಬಂದಿದಿನೀ.. ಸಮಯಾವಕಾಶ ಬೇಕು ಅಲ್ವ. ಖಂಡಿತವಾಗಿಯೂ ನಕಲಿ ವೈದ್ಯರ ಹಾವಳಿ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಹರಿಹರದ ಅಮರಾವತಿ- ಜೈ ಭೀಮ ನಗರ ಮಧ್ಯೆ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಟ್ಟಲಾಗಿರುವ ಕಟ್ಟಡ ತೆರವು ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ನ್ಯಾಯಾಲಯದಲ್ಲಿನ ಅಮೀನ್‌ ಒಬ್ಬರು ಮನವಿ ಸಲ್ಲಿಸಿದರು. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ಹಳೆ ಪಿಬಿ ರಸ್ತೆ ಅಗಲೀಕರಣದ ನಂತರ ಒಳ ಚರಂಡಿ ವ್ಯವಸ್ಥೆ ಇಲ್ಲದೆ ಆಗುತ್ತಿರುವ ತೊಂದರೆ ನಿವಾರಿಸುವಂತೆ ವರ್ತಕರು, ಉದ್ದಿಮೆದಾರರು ಮನವಿ ಮಾಡಿದರು. ಒಳ ಚರಂಡಿ ವ್ಯವಸ್ಥೆಗೆ ಸಾಕಷ್ಟು ಅನುದಾನ ಬೇಕಾಗುತ್ತದೆ. ಎಲ್ಲಾ ಜನಪ್ರತಿನಿಧಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ನಗರ ಪ್ರದೇಶದ ಹೊರಭಾಗದಲ್ಲಿರುವ ಶ್ರೀರಾಮ ನಗರ, ಎಸ್‌ಒಜಿ ಕಾಲೋನಿಯಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸುತ್ತಲೇ ಬರಲಾಗುತ್ತಿದೆ. ಕೆ. ಶಿವರಾಮು ನಂತರ ಯಾವುದೇ ಜಿಲ್ಲಾಧಿಕಾರಿ ಅಲ್ಲಿಗೆ ಭೇಟಿ ನೀಡಿಲ್ಲ, ಸ್ಮಶಾನ ಒಳಗೊಂಡಂತೆ ಅನೇಕ ಕಡೆ ಬೀದಿ ದೀಪದ ವ್ಯವಸ್ಥೆಯೇ ಇಲ್ಲ . ಮಠಾಧೀಶರ ನೇತೃತ್ವದಲ್ಲಿ ಭಿಕ್ಷಾಟನೆ ಮಾಡಿ, ಮೂಲಭೂತ ಸೌಲಭ್ಯ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ನಗರಪಾಲಿಕೆಯ ಕೇಸ್‌ ವರ್ಕರ್‌ ಬರೀ ದುಡ್ಡು… ದುಡ್ಡು ಎನ್ನುತ್ತಾರೆ. ಕೂಡಲೇ ಬದಲಾವಣೆ ಮಾಡಬೇಕು ಎಂದು ತಿಮ್ಮಣ್ಣ ಇತರರು ಮನವಿ ಮಾಡಿದರು. ಎಸ್‌ಒಜಿ ಕಾಲೋನಿಗೆ ಭೇಟಿ ನೀಡುವ ಜೊತೆಗೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದ ಕೆ.ಹನುಮಂತಪ್ಪ ಎಂಬುವವರು ಹರಲಿಪುರ ಕೆನರಾ ಬ್ಯಾಂಕ್‌ನಲ್ಲಿ ಚಿನ್ನಾಭರಣ ಮತ್ತು ಬೆಳೆ ಸಾಲ ತೆಗೆದುಕೊಂಡಿದ್ದು, ಬೆಳೆಸಾಲ ಮನ್ನಾ ಆಗಿರುವುದಿಲ್ಲ. ಚಿನ್ನಾಭರಣದ ಸಾಲದ ಮೊತ್ತ ಕಟ್ಟುವುದಾಗಿ ತಿಳಿಸಿದರೂ ಸಹ ಬ್ಯಾಂಕ್‌ನವರು ಚಿನ್ನಾಭರಣ ನೀಡುತ್ತಿಲ್ಲ. ಸದ್ಯದಲ್ಲೆ ಮನೆಯಲ್ಲಿ ಮದುವೆ ಕಾರ್ಯವಿದ್ದು, ಚಿನ್ನಾಭರಣ ಬಿಡಿಸಿಕೊಡಬೇಕು ಎಂದು ಮನವಿ ಮಾಡಿದರು.

ದಾವಣಗೆರೆಯ ಬಾಷಾನಗರದ ಅಸಾದುಲ್ಲ ಎಂಬುವರು ಆಶ್ರಯ ಮನೆಗೆ ಅರ್ಜಿ ಸಲ್ಲಿಸಿದರು. ತಮಗೆ ಸೇರಿದ ಜಾಗದಲ್ಲಿ ಬೀರಲಿಂಗೇಶ್ವರ ದೇವಸ್ಥಾನದವರು ಅಕ್ರಮವಾಗಿ ಮಳಿಗೆ ಕಟ್ಟಿ, ದಿನಕ್ಕೆ 40 ಸಾವಿರ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ, ಬೆಳವನೂರು ಬಳಿ ಹಳ್ಳದ ಅಳತೆ, ಮಲ್ಲಿಕಾರ್ಜುನ ಇಂಗಳೇಶ್ವರ್‌, ಎಂಸಿಸಿ ಎ ಬ್ಲಾಕ್‌ನಲ್ಲಿ ಅಕ್ರಮ ಕಟ್ಟಡ ತೆರವು, ಕೆ.ಟಿ. ಗೋಪಾಲಗೌಡ್ರು, ತುಂಗಭದ್ರಾ ಬಡಾವಣೆಗೆ ನಗರ ಸಾರಿಗೆ ಬಸ್‌, ಬೀದಿ ದೀಪ ಸೌಲಭ್ಯಕ್ಕೆ ಇತರರು ಮನವಿ ಸಲ್ಲಿಸಿದರು.

ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ನಗರಪಾಲಿಕೆ ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಜಿ. ನಜ್ಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್‌ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ ಕುಂಬಾರ್‌ ಇತರರು ಇದ್ದರು.

ಗಂಭೀರ ಆರೋಪ:

ಇ-ಸ್ವತ್ತು ದಾಖಲೆ ನೀಡಲು ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮ ಪಂಚಾಯತಿ ಕಾರ್ಯದರ್ಶಿ, ಒಂದು ದಿನದ ಮಟ್ಟಿಗೆ ನಾನು ಹೇಳಿದಂತೆ ಕೇಳಬೇಕು ಎನ್ನುತ್ತಾರೆ ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದರು. ಕೆಲ ಸಮಯದ ನಂತರ ಸಭೆಗೆ ಆಗಮಿಸಿದ ಕಾರ್ಯದರ್ಶಿ ವಿರುದ್ಧ ಕೆಂಡಾಮಂಡಲರಾದ ಜಿಲ್ಲಾಧಿಕಾರಿ, ಸಾರ್ವಜನಿಕರ ಹತ್ತಿರ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲವೆ. ನಿನ್ನನ್ನು ನೋಡಿದರೆ ಹಾಗೆಯೇ ಅನಿಸುತ್ತದೆ. ನೀನು ಏನಾದರೂ ಆ ರೀತಿ ಹೇಳಿದ್ದು ನಿಜವೇ ಆಗಿದ್ದರೆ ಖಂಡಿತವಾಗಿಯೂ ಕೆಲಸ ಕಳೆದುಕೊಳ್ಳುತ್ತಿಯಾ. ಮುಂದೆ ಎಲ್ಲಿಯೂ ಕೆಲಸ ಸಿಗದಂತೆ ಮಾಡಲಾಗುವುದು. ಕಾನೂನು ಪ್ರಕಾರ ಆ ಮಹಿಳೆಯ ಕೆಲಸ ಮಾಡಿಕೊಡಬೇಕು ಎಂದು ಸೂಚಿಸಿದ ಅವರು ಇಲ್ಲಿ ನಿಲ್ಲಬೇಡ… ಹೊರಗೆ ಹೊರಡು ಎಂದು ಗದರಿದರು.
ಬೈಕ್‌ನಲ್ಲಿ ಸುತ್ತಾಡ್ತೀನಿ:

ಭಾನುವಾರ ದಾವಣಗೆರೆಯ ಅನೇಕ ಭಾಗದಲ್ಲಿ ಬೈಕ್‌ನಲ್ಲೇ ಸುತ್ತಾಡಿದಿನಿ. ಇನ್ನು ಮುಂದೆಯು ಬೈಕ್‌ನಲ್ಲೇ ಓಡಾಡಿ, ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತೇನೆ. ಕಾರಿನಲ್ಲಿ ಹೋದರೆ ಗನ್‌ಮ್ಯಾನ್‌ ಬೇಕು. ಡಿಸಿ ಬಂದಿದಾರೆ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ಅದೇ ಬೈಕ್‌ನಲ್ಲಿ ಓಡಾಡಿದರೆ ಯಾರಿಗೂ ಗೊತ್ತಾಗುವುದೇ ಇಲ್ಲ. ನಾನು ನೋಡಿದಂತೆ ದಾವಣಗೆರೆಯ ಅನೇಕ ಭಾಗದಲ್ಲಿ ಸ್ವಚ್ಛತೆಯೇ ಇಲ್ಲ. ಇಂತದ್ದಲ್ಲ ನೋಡೋಕೆ ನಾವು ಇರಬೇಕಾ ಎನಿಸುತ್ತದೆ. ಕೆ.ಬಿ. ಬಡಾವಣೆಯ ಗುಳ್ಳಮ್ಮನ ದೇವಸ್ಥಾನದ ಬಳಿ ಬಹಳ ದಿನದಿಂದ ಕಸ ಇದೆ. ಕೂಡಲೇ ಸ್ವಚ್ಛ ಮಾಡಬೇಕು. ಇಲ್ಲದೇ ಹೋದಲ್ಲಿ ಅನಿವಾರ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರಪಾಲಿಕೆ ಆಯುಕ್ತರಿಗೆ ಎಚ್ಚರಿಕೆ ನೀಡಿದರು.
ದೇಹದಾನಕ್ಕೆ ಸಿದ್ಧ:

ಪ್ರತಿ ಕ್ಷಣ ತೀವ್ರ ಸಂಕಷ್ಟ ಎದುರಿಸುತ್ತಿದ್ದೇನೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ನನಗೆ ಯಾವ ಸಮಸ್ಯೆ ಇದೆ ಎಂದು ಯಾರೂ ಸಹ ಪತ್ತೆ ಹಚ್ಚುತ್ತಿಲ್ಲ. ನನಗಂತೂ ಬದುಕುವ ಆಸೆಯೇ ಇಲ್ಲ. ಏನಾದರೂ ನನ್ನ ಸಾವಾದರೆ ದೇಹದ ಭಾಗಗಳನ್ನು ಅನಾಥ ಮಕ್ಕಳಿಗೆ ದಾನ ಮಾಡಲೂ ಸಿದ್ಧನಿದ್ದೇನೆ ಎಂದು ದಾವಣಗೆರೆಯ ರಾಜೀವಗಾಂಧಿ ಬಡಾವಣೆಯ ಬಸವರಾಜ್‌ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಎಲ್ಲಾ ರೀತಿಯ ತಪಾಸಣೆ ನಡೆಸಿ, ವರದಿ ನೀಡುವಂತೆ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next