ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲೂ ಇಂಗ್ಲಿಷ್ ಸಾಂಸ್ಕೃತಿಕ ಸ್ವರೂಪ ಪಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮಾನವ ಹಕ್ಕುಗಳ ವೇದಿಕೆ ಜಿಲ್ಲಾಧ್ಯಕ್ಷ ಬಿ.ಎಂ. ಹನುಮಂತಪ್ಪ ಹೇಳಿದ್ದಾರೆ.
ಇಂಗ್ಲಿಷ್ ಭಾಷೆಯ ನಾಟಕ, ಪಾತ್ರಾಭಿನಯ, ವಾಚನಾಭಿನಯ, ಕಥಾಭಿನಯ, ಮತ್ತಿತರ ಅಭಿನಯ ಪ್ರಕಾರಗಳು ಮತ್ತು ಕಾರ್ಯಕ್ರಮಗಳು ಬೆಂಗಳೂರು, ಮೈಸೂರು ಮತ್ತು ಧಾರವಾಡಗಳಂಥ ಅಕಾಡೆಮಿಕ್ ಹಾಗೂ ರಾಷ್ಟ್ರಮಟ್ಟದಲ್ಲಿ ಮನ್ನಣೆಗಳಿಸಿದ ವಿಶ್ವವಿದ್ಯಾಲಯಗಳಿಗೆ ಸೀಮಿತವಾಗಿವೆ. ಅಂಥಹ ಕಾರ್ಯಕ್ರಮ ನರಗನಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲೂ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಇಂಗ್ಲಿಷ್ ಅಷ್ಟು ಸುಲಭವಾದ ಭಾಷೆಯಲ್ಲ. ಇದು ಪಟ್ಟಣದ ಶ್ರೀಮಂತರ ಮತ್ತು ಬಂಡವಾಳಶಾಹಿಗಳ ಸ್ವತ್ತಾಗಿತ್ತು. ಆ ಭಾಷೆಯನ್ನು ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ರೂಪದಲ್ಲಿ ತರುವುದು ತುಂಬಾ ಕಷ್ಟಕರ. ಆದರೂ ಅದನ್ನು ಗ್ರಾಮೀಣ ಮಕ್ಕಳಿಂದ ಸಾಧ್ಯವಾಗಿಸಿರುವ ಶಿಕ್ಷಕ ಪ್ರಕಾಶ್ ಕೊಡಗನೂರ್ ಕಾರ್ಯ ಸ್ತುತ್ಯಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಿಕೆಗೆ ಚೌಕಟ್ಟಿಲ್ಲ. ಚೆನ್ನಾಗಿ ಬರೆಯುವ, ಮಾತನಾಡುವ ವಿದ್ಯಾರ್ಥಿಗಳಿಗೆ ಇದೇ ವ್ಯಾಕರಣವೆಂದು ಹಿಂದೆ ಶಿಕ್ಷಕರು ಕಲಿಸುತ್ತಿದ್ದರು. ಡೈರೆಕ್ಟ್ ಮೆಥಡ್ ಪ್ರಯೋಜನಕಾರಿಯಲ್ಲ , ಬದಲಿಗೆ ಭಾಷಿಕ ಪರಿಸರವನ್ನು ವಿವಿಧ ಪ್ರಕಾರಗಳಲ್ಲಿ ಕಟ್ಟಿ ಕೊಡುವ ಕ್ರಮ ಅತ್ಯಂತ ಪರಿಣಾಮಕಾರಿಯಾದದ್ದು. ಇದಕ್ಕೆ ಭಾಷಾ ಶಿಕ್ಷಕರೇ ಆಗಲಿ ಇಲ್ಲವೇ ವಿಷಯ ಶಿಕ್ಷಕರೇ ಆಗಲಿ ಆಳವಾದ ಜ್ಞಾನ ಹೊಂದಿರಲೇಬೇಕು.
ಕೂದಲಿದ್ದವನು ಹೇಗೆ ಬೇಕಾದರೂ ತಲೆ ಬಾಚಿಕೊಳ್ಳುವಂತೆ ಭಾಷೆಯಲ್ಲಿ ಪ್ರೌಢಿಮೆ ಹೊಂದಿದವರಿಗೆ ಕಲಿಸುವ ಕ್ರಮ ಕಷ್ಟಕರವೇನಲ್ಲ ಎಂದರು. ವಿಶೇಷ ಆಹ್ವಾನಿತರಾಗಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್. ಎಚ್. ಅರುಣ್‌ಕುಮಾರ್ ಮಾತನಾಡಿ, ಉತ್ತಮ ಚಟುವಟಿಕೆ ಮತ್ತು ಕಾರ್ಯದ ಹಿಂದೆ ಬಹಳಷ್ಟು ಶ್ರಮ ಬೇಕಿದೆ. ಇಂದು ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಪ್ರಪಂಚ ಬಹಳ ಚಿಕ್ಕದಾಗಿದೆ. ನಮ್ಮದಲ್ಲದ ಭಾಷೆಯಾದ ಇಂಗ್ಲಿಷ್ ಅರ್ಥ ಮಾಡಿಕೊಂಡು ಭಾಷೆಯ ಏರಿಳಿತ, ಉಚ್ಚಾರಣೆ, ಹಾವ-ಭಾವದಿಂದ ಮಕ್ಕಳು ನಟಿಸುತ್ತಿರುವುದು ಅದ್ಭುತ ಎಂದು ಬಣ್ಣಿಸಿದರು. ಆನಗೋಡು ಶಾಲೆ ಮುಖ್ಯ ಶಿಕ್ಷಕ ಲೋಕಣ್ಣ ಮಾಗೋಡ್ರ ಮಾತನಾಡಿ, ನಾವು ಮಾಡಬೇಕಾದ ಕಾರ್ಯದ ಬಗ್ಗೆ ದೃಢತೆ ಹೊಂದಿದ್ದರೆ ಬಂಜರು ಭೂಮಿಯಲ್ಲೂ ಸಹ ಬೆಳೆ ತೆಗೆಯಬಹುದು ಎಂದರು.
4 ಮತ್ತು 5ನೇ ತರಗತಿ ಮಕ್ಕಳಿಂದ ವಸಿಷ್ಟ ಮತ್ತು ಶಬಲೆ ಪಾಠಗಳ ವಾಚನಾಭಿನಯ, 6ನೇ ತರಗತಿ ಮಕ್ಕಳಿಂದ ಎ ಚಾಟ್ ವಿತ್ ದ ಗ್ರಾಸ್ ಹಾಪರ್ ಪಾಠದ ಪಾತ್ರಾಭಿನಯ ಮತ್ತು 7ನೇ ತರಗತಿ ಮಕ್ಕಳಿಂದ ದ ವಂಡರ್ ಬೌಲ್ ಪಾಠದ ಕಥಾಭಿನಯ ಸಭಿಕರ ಮನಸೂರೆಗೊಂಡಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಆರ್. ಅಣ್ಣೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕ ಯಲ್ಲಪ್ಪ ಕಡೇಮನಿ, ಎನ್ .ಪಿ.ನಾಗರಾಜ್, ನಿವೃತ್ತ ಮುಖ್ಯ ಶಿಕ್ಷಕ ಎಚ್. ಚಿನ್ನಪ್ಪ, ಎನ್.ಜಿ.ಸುಲೋಚನಮ್ಮ, ಇತರರು ಈ ಸಂದರ್ಭದಲ್ಲಿದ್ದರು.