ರಾಯಚೂರು: ಸಂಪೂರ್ಣ ಕಳಚಿ ಬಿದ್ದ ಛಾವಣಿ ಸಿಮೆಂಟ್ ಪ್ಲಾಸ್ಟರ್, ಬಿರುಕು ಬಿಟ್ಟ ಗೋಡೆಗಳು, ಕಿಷ್ಕಿಂದೆಯಂಥ ಪ್ರದೇಶ, ಮುಗಿಯದ ಹೊಸ ಕಟ್ಟಡ ಕೆಲಸ. ಇದು ನಗರದ ತಿಮ್ಮಾಪುರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ. ಶಿಥಿಲಗೊಂಡ ಹಳೆ ಕಟ್ಟಡದಲ್ಲಿಯೇ ಶಾಲೆ ನಡೆಸಲಾಗುತ್ತಿದೆ. ಕಟ್ಟಡ ಯಾವ ಮಟ್ಟದಲ್ಲಿ ಶಿಥಿಲಗೊಂಡಿದೆ ಎಂದರೆ ತಲೆ ಎತ್ತಿ ಛಾವಣಿ ನೋಡಿದರೆ ಕಾಣುವುದು ಬರೀ ರಾಡ್‌ಗಳೇ. ಇನ್ನು ಗೋಡೆಗಳು ಕೂಡ ಬಿರುಕು ಬಿಟ್ಟು ಯಾವಾಗ ಏನಾಗವುದೋ ಎಂಬ ಭೀತಿ ಬೇರೆ.
ಒಂದರಿಂದ ಏಳನೇ ತರಗತಿವರೆಗೂ ಮಕ್ಕಳು ಓದುತ್ತಿದ್ದು, 287 ವಿದ್ಯಾರ್ಥಿಗಳಿದ್ದಾರೆ. ಈಚೆಗೆ ಒಂದೆರಡು ಕಟ್ಟಡಗಳನ್ನು ನಿರ್ಮಿಸಿದ್ದು, ಕೆಲ ವಿದ್ಯಾರ್ಥಿಗಳನ್ನು ಆ ಕೋಣೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ, ಉಳಿದ ತರಗತಿಗಳನ್ನು ವಿಧಿ ಇಲ್ಲದೇ ಶಿಥಿಲಗೊಂಡ ಕಟ್ಟಡಗಳಲ್ಲೇ ನಡೆಸಲಾಗುತ್ತಿದೆ. ಮಳೆಗಾಲ ಬೇರೆ ಶುರುವಾಗುತ್ತಿದ್ದು, ಯಾವಾಗ ಏನು ಅನಾಹುತ ಸಂಭವಿಸುವುದೋ ಎಂಬ ಆತಂಕದಲ್ಲಿ ಬೋಧಕರು, ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರ ಎದೆ ಢವ ಢವ ಎನ್ನುವಂತಿದೆ ಸನ್ನಿವೇಶ.
ನಿರ್ಮಾಣ ಹಂತದಲ್ಲಿ ಕಟ್ಟಡ: ಶಾಲೆ ಮುಖ್ಯ ಶಿಕ್ಷಕರ ಬೇಡಿಕೆಯನುಸಾರವಾಗಿ ಕಳೆದ ವರ್ಷವೇ ನಾಲ್ಕು ಕೋಣೆಗಳು ಮಂಜೂರಾಗಿದ್ದು, ಈಗ ಛತ್ತು ಹಾಕಲಾಗಿದೆ. ಕಾಮಗಾರಿಯನ್ನು ಲ್ಯಾಂಡ್ ಆರ್ಮಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಇನ್ನೂ ಕಾಮಗಾರಿ ಮುಗಿಸಿಲ್ಲ. ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕೋಣೆ ನಿರ್ಮಾಣ ನಡೆದಿದೆ ಎನ್ನಲಾಗುತ್ತಿದೆ. ಮಾತಿನ ಪ್ರಕಾರ ಪ್ರಸಕ್ತ ಸಾಲಿನ ಶೈಕ್ಷಣಿಕ ವ್ಯಾಸಂಗಕ್ಕೆ ಕೋಣೆಗಳನ್ನು ಲೋಕಾರ್ಪಣೆ ಮಾಡಬೇಕಿತ್ತು. ಆದರೆ, ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಇದರಿಂದ ಈ ವರ್ಷದ ಮಳೆಗಾಲವನ್ನು ಮಕ್ಕಳು ಶಿಥಿಲಗೊಂಡ ಕಟ್ಟಡದಲ್ಲೇ ಕಳೆಯಬೇಕಿದೆ.
ಕಿಷ್ಕಿಂದೆಯಂಥ ಸ್ಥಳ: ಶಾಲೆ ಸುತ್ತಲೂ ಎರಡು ಕಡೆ ಮನೆಗಳಿದ್ದರೆ ಇನ್ನೆರಡು ಕಡೆ ಪ್ರಮುಖ ರಸ್ತೆಗಳಿವೆ. ಅಲ್ಲದೇ ಇಕ್ಕಟ್ಟಿನ ಕಿಷ್ಕಿಂದೆಯಂಥ ಪ್ರದೇಶದಲ್ಲಿ ಶಾಲೆ ನಿರ್ಮಿಸಿದ್ದು, ಮಕ್ಕಳಿಗೆ ಆಡಲು ಸೂಕ್ತ ಸ್ಥಳವಿಲ್ಲ. ಆಚೆಗೆ ಬಂದರೆ ವಾಹನಗಳ ಹಾವಳಿಯಿದ್ದು, ಪಾಲಕರೇ ಶಿಕ್ಷಕರಿಗೆ ಮಕ್ಕಳನ್ನು ಹೊರಗೆ ಬಿಡಬೇಡಿ ಎಂದು ಮನವಿ ಮಾಡಿ ಹೋಗುತ್ತಾರೆ. ಹೀಗಾಗಿ ಮಕ್ಕಳನ್ನು ಮಧ್ಯಾಹ್ನವೂ ಶಾಲೆಯಲ್ಲೇ ಕೂಡಿ ಹಾಕದೆ ವಿಧಿಯಿಲ್ಲ ಎನ್ನುವಂತಾಗಿದೆ. ಈಗ ನಿರ್ಮಿಸುತ್ತಿರುವ ನಾಲ್ಕು ಕೋಣೆಗಳ ಕೆಲಸ ತ್ವರಿತಗತಿಯಲ್ಲಿ ಮುಗಿದರೆ ಹಳೇ ಕಟ್ಟಡವನ್ನು ಸಂಪೂರ್ಣ ತೆರವು ಮಾಡಬಹುದು. ಇದರಿಂದ ಮಕ್ಕಳಿಗೆ ಕನಿಷ್ಠ ಆಟಕ್ಕೆ ಸ್ಥಳ ಸಿಕ್ಕಂತಾಗುತ್ತದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಮುಖ್ಯ ಶಿಕ್ಷಕರಿಗಾಗಿ ಕಟ್ಟಿಸಿದ ಕೋಣೆಯನ್ನು ತರಗತಿಗೆ ಬಿಟ್ಟುಕೊಟ್ಟು ಪಕ್ಕದಲ್ಲಿ ಇರುವ ಸ್ಥಳವನ್ನು ಕಚೇರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಹೊಸ ಕೋಣೆಗಳ ಕೆಲಸ ಮುಗಿದರೆ ಕೊಠಡಿಗಳ ಸಮಸ್ಯೆ ನೀಗಲಿದೆ. ಇಷ್ಟೊತ್ತಿಗಾಗಲೇ ಕಾಮಗಾರಿ ಮುಗಿದಿದ್ದರೆ ಅನುಕೂಲವಾಗುತ್ತಿತ್ತು.
ಗೂಳಪ್ಪ, ಮುಖ್ಯ ಶಿಕ್ಷಕ
ತಿಮ್ಮಾಪುರ ಪೇಟೆ ಶಾಲೆಯ ಹಳೇ ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವುದು ಗಮನಕ್ಕಿದೆ. ಈಗಾಗಲೇ ಅಲ್ಲಿ ಹೊಸ
ಕೋಣೆಗಳ ನಿರ್ಮಾಣ ಕಾರ್ಯ ನಡೆದಿದೆ. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಕಡೆ ಕೆಲಸಗಳು ಸ್ಥಗಿತಗೊಂಡಿವೆ. ಈ ಕೂಡಲೇ ಲ್ಯಾಂಡ್ ಆರ್ಮಿ ಅಧಿಕಾರಿಗಳ ಜತೆ ಚರ್ಚಿಸಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಲು ಕ್ರಮ ವಹಿಸಲಾಗುವುದು.
ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ, ರಾಯಚೂರು
ಸಿದ್ಧಯ್ಯಸ್ವಾಮಿ ಕುಕನೂರು