Advertisement

ಶಿಕ್ಷಕರ ವರ್ಗಾವಣೆ ಚೆಂಡು ಚುನಾವಣ ಆಯೋಗದ ಅಂಗಣಕ್ಕೆ

12:00 AM Mar 30, 2023 | Team Udayavani |

ಬೆಂಗಳೂರು: ರಾಜ್ಯದ ಸುಮಾರು 88 ಸಾವಿರ ಹೆಚ್ಚುವರಿ ಮತ್ತು ಸಾಮಾನ್ಯ ಶಿಕ್ಷಕರ ವರ್ಗಾವಣೆಯ ಚೆಂಡು ರಾಜ್ಯ ಸರಕಾರದ ಅಂಗಣದಿಂದ ಚುನಾವಣ ಆಯೋಗದ ಅಂಗಣಕ್ಕೆ ತಲುಪಿದೆ. ಚುನಾವಣ ಪ್ರಕ್ರಿಯೆಗಳ ಚಟುವಟಿಕೆಗಳ ಮಧ್ಯೆ ಕಳೆದ 4 ತಿಂಗಳಿನಿಂದ ಸ್ಥಗಿತವಾಗಿರುವ ವರ್ಗಾವಣೆ ಪ್ರಕ್ರಿಯೆ ಈ ವರ್ಷ ನಡೆಯಬಹುದೇ ಎಂಬ ಪ್ರಶ್ನೆ ಶಿಕ್ಷಕ ವರ್ಗವನ್ನು ಕಾಡುತ್ತಿದೆ.

Advertisement

ವರ್ಗಾವಣೆ ಪ್ರಕ್ರಿಯೆಗಳನ್ನು ತನ್ನ ಗಮನಕ್ಕೆ ತಂದ ಬಳಿಕವೇ ನಡೆಸುವಂತೆ ಆಯೋಗ ಸೂಚಿಸಿದ್ದ ಹಿನ್ನೆಲೆಯಲ್ಲಿ ಮತ್ತು ಯಾವುದೇ ಕ್ಷಣದಲ್ಲಿ ಚುನಾವಣ ನೀತಿ ಸಂಹಿತೆ ಜಾರಿ ಆಗಬಹುದು ಎಂಬ ಕಾರಣದಿಂದ ಸೋಮವಾರವೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಅವರು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲು ಅನುಮತಿ ನೀಡಿ ಎಂದು ಚುನಾವಣ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.

ಆದರೆ ಆಯೋಗ ಬುಧವಾರದ ತನಕವೂ ತನ್ನ ನಿರ್ಧಾರ ಪ್ರಕಟಿಸಿಲ್ಲ. ಈಗ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿರುವ ಹಿನ್ನೆಲೆ ಯಲ್ಲಿ ಇಷ್ಟೊಂದು ಬೃಹತ್‌ ಪ್ರಮಾ ಣದ ವರ್ಗಾವಣೆ ಕಸರತ್ತು ನಡೆಸಲು ಆಯೋಗ ಅನುಮತಿ ನೀಡುವುದೇ ಎಂಬ ಕುತೂಹಲ ಮನೆ ಮಾಡಿದೆ. ಒಂದು ವೇಳೆ ಅನುಮತಿ ಸಿಕ್ಕಿದರೆ ಚುನಾವಣೆ ಮತ್ತು ವರ್ಗಾವಣೆ ಪ್ರಕ್ರಿಯೆ ಜತೆಜತೆಯಾಗಿ ಸಾಗಲಿದೆ.

2019ರಲ್ಲಿ ಲೋಕಸಭಾ ಚುನಾ ವಣೆಯ ನೀತಿ ಸಂಹಿತೆ ಜಾರಿ ಯಲ್ಲಿದ್ದರೂ ವರ್ಗಾವಣೆ ಪ್ರಕ್ರಿಯೆ ನಡೆಸಲು ಆಯೋಗ ಅನುಮತಿ ನೀಡಿತ್ತು. ಈಗಲೂ ಚುನಾವಣೆ ಪ್ರಕ್ರಿಯೆಗೆ ತೊಂದರೆ ಆಗದಂತೆ ವರ್ಗಾವಣೆ ಪ್ರಕ್ರಿಯೆಗೆ ಆಯೋಗ ಅವಕಾಶ ನೀಡಬಹುದು ಎಂಬ ವಿಶ್ವಾಸವಿದೆ. ನಾವು ಕೂಡ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಅವರಿಗೆ ಮನವೊಲಿಸಲು ಪ್ರಯತ್ನಿಸುತ್ತೇವೆ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್‌ ನುಗ್ಗಲಿ ಹೇಳಿದ್ದಾರೆ.

ವರ್ಗಾವಣೆಗೆ 88,324 ಶಿಕ್ಷಕರು ಅರ್ಜಿ
ನೀತಿ ಸಂಹಿತೆ ಜಾರಿಗೆ ಬಂದರೂ ಹೆಚ್ಚುವರಿ ಮತ್ತು ಸಾಮಾನ್ಯ ಶಿಕ್ಷಕರ ವರ್ಗಾವಣೆಯನ್ನು ನಡೆಸಲು ಅನುಮತಿ ನೀಡಬೇಕು. ಈಗಾಗಲೇ ವರ್ಗಾವಣೆ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿದ್ದರೂ ತಾಂತ್ರಿಕ ಕಾರಣದಿಂದ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು. 88,324 ಶಿಕ್ಷಕರು ವರ್ಗಾವಣೆಗೆ ಅರ್ಜಿ ಹಾಕಿದ್ದಾರೆ. ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ ಮತ್ತು ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಲು ಸಕ್ಷಮ ಪ್ರಾಧಿಕಾರ ಸಹ ಅನುಮತಿ ನೀಡಿದೆ ಎಂದು ಶಾಲಾ ಶಿಕ್ಷಣ ಇಲಾಖೆಯು ಆಯೋಗಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದೆ.
ಹಾಗೆಯೇ ಚುನಾವಣೆ ಪ್ರಕ್ರಿಯೆಗೆ ಅಡ್ಡಿ ಆಗಬಾರದು ಎಂದು ವರ್ಗಾವಣೆಗೊಂಡ ಶಿಕ್ಷಕರಿಗೆ ಜೂನ್‌ 1ರ ಬಳಿಕ ನಂತರ ನಿಯುಕ್ತಿಗೊಂಡ ಸ್ಥಳಕ್ಕೆ ಹಾಜರಾಗುವ ಷರತ್ತು ವಿಧಿಸುತ್ತೇವೆ ಎಂಬ ಭರವಸೆಯನ್ನು ಶಾಲಾ ಶಿಕ್ಷಣ ಇಲಾಖೆ ಆಯೋಗಕ್ಕೆ ನೀಡಿದೆ.

Advertisement

ರಾಜ್ಯ ಸರಕಾರ 2022ರ ಡಿಸೆಂಬರ್‌ನಲ್ಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಮಾರ್ಚ್‌ನೊಳಗೆ ವರ್ಗಾವಣೆ ಪಕ್ರಿಯೆ ಮುಕ್ತಾಯಗೊಳಿಸುವಂತೆ ವೇಳಾಪಟ್ಟಿ ಪ್ರಕಟಿಸಿತ್ತು. ಆದರೆ ಆ ಬಳಿಕ ಎರಡು ಬಾರಿ ಈ ಪ್ರಕ್ರಿಯೆ ಕಾರಣಾಂತರಗಳಿಂದ ಮುಂದೂಡಿಕೆ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next