ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆ (ತಿದ್ದು ಪಡಿ) ಕಾಯ್ದೆಗೆ ಸರ್ಕಾರ ಮತ್ತೊಮ್ಮೆ ತಿದ್ದುಪಡಿ ತಂದರೂ, ಈ ವರ್ಷ ಅನುಷ್ಠಾನ ಅಸಾಧ್ಯ. ಕಡ್ಡಾಯ ವರ್ಗಾವಣೆ ಅಂಶವನ್ನು ತೆಗೆದು ಹಾಕಲು ಸದ್ಯ ಸಾಧ್ಯವಿಲ್ಲ. ಸರ್ಕಾರ ನಿಯಮಕ್ಕೆ ತಿದ್ದುಪಡಿ ತರದೇ ನಾವೇನೂ ಮಾಡಲು ಸಾಧ್ಯ ವಿಲ್ಲ. ಹೀಗಾಗಿ ಹಳೇ ನಿಯಮದಂತೆ ಕಡ್ಡಾಯ ವರ್ಗಾವಣೆ ಸಹಿತವಾಗಿ ಎಲ್ಲ ವರ್ಗಾವಣೆ ನಡೆ ಸಲು ಇಲಾಖೆ ನಿರ್ಧರಿಸಿದ್ದೇವೆ ಎಂದು ಇಲಾಖೆಯ ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
“2017ರ ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆಯಂತೆ ಕಡ್ಡಾಯ ವರ್ಗಾವಣೆ ಸೇರಿದಂತೆ ಎಲ್ಲ ಮಾದರಿಯ ವರ್ಗಾವಣೆ ಪ್ರಕ್ರಿಯೆ ಸಲೀಸಾಗಿ ನಡೆಯುತ್ತಿದೆ. ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಆರಂಭವಾಗಿದೆ. ವರ್ಗಾ ವಣೆ ನಿಯಮದಂತೆ ಕಡ್ಡಾಯ ವರ್ಗಾವಣೆಯೂ ನಡೆಸಲಿದ್ದೇವೆ. ಗಂಭೀರ ಆರೋಗ್ಯ ಸಮಸ್ಯೆಗೆ ಕಾನೂನು ಬದ್ಧವಾಗಿ ವಿನಾಯತಿ ನೀಡುತ್ತಿದ್ದೇವೆ. ಹೀಗಾಗಿ ವರ್ಗಾವಣೆಯಲ್ಲಿ ಗೊಂದಲವಿಲ್ಲ,’ ಎಂದು ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್
“ಉದಯವಾಣಿ’ಗೆ ತಿಳಿಸಿದ್ದಾರೆ.
“ಶಾಲೆಗಳಿರುವಲ್ಲಿ ಶಿಕ್ಷಕರು ಸೇವೆ ಸಲ್ಲಿಸಬೇಕೇ ವಿನಾ, ಶಿಕ್ಷಕರಿರುವಲ್ಲಿ ಶಾಲೆಗಳನ್ನು ತೆರೆಯಲು ಸಾಧ್ಯವಿಲ್ಲ. ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 2017ರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವವರೆಗೂ ಹಳೇ ನಿಯಮದಂತೆ ವರ್ಗಾವಣೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು. ಕಡ್ಡಾಯ ವರ್ಗಾವಣೆ ರದ್ದು ಸಂಬಂಧ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ. ಒಂದು ವೇಳೆ ಶೀಘ್ರವಾಗಿ ತಿದ್ದುಪಡಿಯಾದರೂ, ಈಗಾಗಾಲೇ ವರ್ಗಾವಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂ ಡಿರುವ ಕಾರಣ ಹೊಸ ನಿಯಮವನ್ನು ಮುಂದಿನ ಸಾಲಿನಿಂದ ಅಳವಡಿಸಿಕೊಳ್ಳಲಾಗುವುದು. ಹೀಗಾಗಿ, ಈ ಬಾರಿಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಗೊಂದಲವಿಲ್ಲ ಎಂದಿದ್ದಾರೆ.
ಶಿಕ್ಷಕರು ನಿವೃತ್ತಿಗೆ 2 ವರ್ಷ ಬಾಕಿಯಿರುವ ಮತ್ತು ತೀವ್ರ ತೆರವಾದ ಆರೋಗ್ಯದ ಸಮಸ್ಯೆಯಿ ರುವ ನೈಜ್ಯ ಪ್ರಕರಣಗಳಿಗೆ ನಿಯಮಾನುಸಾರ ವರ್ಗಾವಣೆಯಲ್ಲಿ ವಿನಾಯತಿ ನೀಡಲಾಗಿದೆ. ಇದನ್ನು ಹೊರತುಪಡಿಸಿ ರಕ್ತದೊತ್ತಡ (ಬಿಪಿ), ಮಧುಮೇಹ ಮೊದಲಾದ ಕಾಯಿಲೆಗಳಿಗೆ ವಿನಾ ಯತಿ ನೀಡಲು ಸಾಧ್ಯವಿಲ್ಲ. ಪ್ರತಿ ವ್ಯಕ್ತಿಗೆ ಒಂದಲ್ಲ ಒಂದು ರೀತಿಯ ಕಾಯಿಲೆಗಳಿರುತ್ತದೆ. ಈ ರೀತಿಯ ಕಾರಣಗಳನ್ನು ನೀಡುತಿದ್ದರೆ, ವರ್ಗಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಹಳ್ಳಹಿಡಿಯಲಿದೆ. ಇದರಿಂದಾಗಿ ಸಾವಿರಾರು ಅರ್ಹ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಹೀಗಾಗಿ ಈ ಬಾರಿಯ ವರ್ಗಾವಣೆ ಸದ್ಯ ಜಾರಿಯಲ್ಲಿರುವ ವರ್ಗಾವಣೆ ನಿಯಮಾನುಸಾರ ಮಾಡಲಾಗುತ್ತದೆ ಎನ್ನುತ್ತಾರೆ ಇಲಾಖೆ ಆಯುಕ್ತರು.
ಗೊಂದಲ ಇನ್ನು ಬಗೆಹರಿದಿಲ್ಲ!: ಇಲಾಖೆಯ ಆಯಕ್ತರು ಶಿಕ್ಷಕರ ವರ್ಗಾವಣೆಯಲ್ಲಿ ಗೊಂದಲ ವಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ. ಆದರೆ, ವರ್ಗಾವಣೆ ಪ್ರಕ್ರಿಯೆಯಲ್ಲಿ ಅರ್ಹರಿಗೆ ಅವಕಾಶ ಸಿಗುತ್ತಿಲ್ಲ. ದಂಪತಿ ಶಿಕ್ಷಕರು ಸಾಮಾನ್ಯ ಶಿಕ್ಷಕರ ಪಟ್ಟಿ ಯಲ್ಲಿ ಬರುವುದರಿಂದ ಅವರ ಹೆಸರು ಅಗ್ರಸ್ಥಾನಕ್ಕೆ ಬಂದು ಬಿಡುತ್ತದೆ. ಹೀಗಾಗಿ ಸೇವಾ ಜೇಷ್ಠತೆ ಯಿದ್ದರೂ ವರ್ಗಾವಣೆ ಸಿಗುತ್ತಿಲ್ಲ. ಹಾಗೆಯೇ ಕಡ್ಡಾಯ ವರ್ಗಾವಣೆಯಲ್ಲಿ ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನೇ ಮತ್ತೇ ಗ್ರಾಮೀಣ ಪ್ರದೇಶಕ್ಕೆ ಕಳುಹಿಸಲು ಪ್ರಯತ್ನ ನಡೆ ಸುತ್ತಿದ್ದಾರೆ. ಕಡ್ಡಾಯ ವರ್ಗಾವಣೆ ನಿಯಮವೇ ಸರಿ ಇಲ್ಲ. ಕೌನ್ಸೆಲಿಂಗ್ ವೇಳೆ ನಾನಾ ರೀತಿಯ ಸಮಸ್ಯೆ ಎದುರಾಗುತ್ತಿದೆ. ಶಿಕ್ಷಕರು ಎಷ್ಟೇ ಕೋರಿ ಕೊಂಡರೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿ ಸುತ್ತಿಲ್ಲ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಗಾವಣೆ ಪ್ರಕ್ರಿಯೆ ಬಗ್ಗೆ ಅರ್ಹ ಶಿಕ್ಷಕರಲ್ಲಿ ಗೊಂದಲ ಬೇಡ. 2017ರ ಶಿಕ್ಷಕರ ವರ್ಗಾವಣೆ ನಿಯಮಾನುಸಾರ ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಕಾಯ್ದೆ ತಿದ್ದುಪಡಿ ವಿಚಾರ ಸರ್ಕಾರಕ್ಕೆ ಬಿಟ್ಟ ವಿಷಯ. ಸಾರ್ವಜನಿಕ ಶಿಕ್ಷಣ ಇಲಾಖೆ ಸದ್ಯ ಜಾರಿಯಲ್ಲಿರುವ ಕಾಯ್ದೆ ಅನ್ವಯ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಿದೆ.
-ಕೆ.ಜಿ.ಜಗದೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ
ಕಳೆದ 3 ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಸಾವಿರಾರು ಅರ್ಹ ಶಿಕ್ಷಕರು ವರ್ಗಾವಣೆಗಾಗಿ ಕಾದು ಕುಳಿತಿದ್ದಾರೆ. ಸರ್ಕಾರಗಳು ಬದಲಾಗುತಿದ್ದಂತೆ ಸರ್ಕಾರಗಳ ನಿಲುವುಗಳು ಬದಲಾಗುತ್ತಿವೆ. ಇದರಿಂದಾಗಿ ಶಿಕ್ಷಕರು ಹೆಣಗಾಡು ವಂತಾಗಿದ್ದಾರೆ. ಸರ್ಕಾರ ಮತ್ತು ಇಲಾಖೆ ನಡುವೆ ಸರಿಯಾದ ಹೊಂದಾಣಿಕೆ ಇಲ್ಲದ ಕಾರಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಗೊಂದಲಗಳು ಹಾಗೇ ಉಳಿದಿವೆ.
-ಶಿಕ್ಷಕ, ವರ್ಗಾವಣೆ ಆಕಾಂಕ್ಷಿ
* ಲೋಕೇಶ್ ರಾಮ್