Advertisement

ಜೂ. 30ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ : ಸುರೇಶ್‌ ಕುಮಾರ್‌

06:30 PM Jun 28, 2021 | Team Udayavani |

ಬೆಂಗಳೂರು: ಕಳೆದ ಎರಡು ಮೂರು ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಮಹೂರ್ತ ಕೂಡಿಬಂದಿದ್ದು, ಜೂ. 30ರಿಂದಲೇ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ವರ್ಗಾವಣೆ ಪ್ರಕ್ರಿಯೆ ವಿವರಗಳನ್ನು ಪ್ರಕಟಿಸಿದ ಅವರು, ಅಧಿಕೃತ ವೇಳಾಪಟ್ಟಿ ಹಾಗೂ ಅಧಿಸೂಚನೆ ಜೂ. 30ಕ್ಕೆ ಪ್ರಕಟಗೊಳ್ಳಲಿದ್ದು, ಅಂದಿನಿಂದಲೇ ವರ್ಗಾವಣಾ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎಂದರು.

2019-20ನೇ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೆ ಒಳಗಾಗಿದ್ದ ಶಿಕ್ಷಕರಿಗೆ ನ್ಯಾಯ ದೊರಕಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ವಿಧಾನ ಮಂಡಲದಲ್ಲಿ ಉಭಯ ಸದನಗಳಲ್ಲಿ ಅನುಮೋದನೆ ಪಡೆದು ಕಾಯ್ದೆ ಅಧಿಸೂಚಿಸಿದ ಸಂದರ್ಭದಲ್ಲಿ ಕೆಲವು ಶಿಕ್ಷಕರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು. ಅದಕ್ಕಾಗಿ ಸಚಿವ ಸಂಪುಟದ ಅನುಮೋದನೆ ಪಡೆದು ರಾಜ್ಯಪಾಲರು ಒಪ್ಪಿದ ಬಳಿಕ ಸುಗ್ರೀವಾಜ್ಞೆ ಹೊರತಂದಿದ್ದೇವೆ. ಪೂರಕ ನಿಯಮಗಳನ್ನು ಸಹ ಅಂತಿಮಗೊಳಿಸಿ, ವರ್ಗಾವಣಾ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ :ಜಮ್ಮು: ಹಲವು ದಾಳಿ, ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದ ಲಷ್ಕರ್ ಕಮಾಂಡರ್ ನದೀಮ್ ಬಂಧನ

2019-2020ರಲ್ಲಿ ಕಡ್ಡಾಯ, ಹೆಚ್ಚುವರಿ ವರ್ಗಾವಣೆಗೊಂಡ ಶಿಕ್ಷಕರಿಗೆ ಮೊದಲ ಆದ್ಯತೆ ದೊರೆಯಲಿದೆ. ಈ ಬಾರಿಗೆ ಸಂಬಂಧಿಸಿದಂತೆ ವಲಯ ಅಥವಾ ಹೆಚ್ಚುವರಿ ವರ್ಗಾವಣೆ ಯಾವುದೂ ಇರುವುದಿಲ್ಲ. 2019-20ರಲ್ಲಿ ಕಡ್ಡಾಯ, ಹೆಚ್ಚುವರಿ ವರ್ಗಾವಣೆಗೊಳಗಾಗಿದ್ದ ಶಿಕ್ಷಕರಿಗೆ ಮೊದಲ ಆದ್ಯತೆಯ ಕೌನ್ಸೆಲಿಂಗ್‌ ಇರಲಿದೆ. ಈಗಾಗಲೇ ಸ್ವೀಕೃತಗೊಂಡಿರುವ 75000 ಅರ್ಜಿಗಳಿಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್‌ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ. ಈ ಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಅರ್ಹರಾಗುವ ಶಿಕ್ಷಕರಿಗೂ ಸಹ ಎರಡನೇ ಹಂತದ ಅವಕಾಶ ಕಲ್ಪಿಸಲಾಗುವುದು ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

Advertisement

ಸರಳ ಪ್ರಕ್ರಿಯೆ:
ಈ ಬಾರಿ ವರ್ಗಾವಣಾ ಪ್ರಕ್ರಿಯೆಯೂ ಅತ್ಯಂತ ಪಾರದರ್ಶಕವಾಗಿರಲಿದೆ. ಶಿಕ್ಷಕ ಮಿತ್ರ ಆಪ್‌ ಮೂಲಕ ಶಿಕ್ಷಕರು ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಸ್ಥಳ ಆಯ್ಕೆಯನ್ನೂ ಮಾಡಿಕೊಳ್ಳಬಹುದು. ಹಾಗಾಗಿ ಇಂತಹುದೊಂದು ಶಿಕ್ಷಕರ ಪರವಾದ ಸಂಪೂರ್ಣ ಪಾರದರ್ಶಕವಾದ ವ್ಯವಸ್ಥೆಯನ್ನು ಪ್ರತಿಯೊಬ್ಬರೂ ಸ್ವಾಗತಿಸಿ, ಬಳಸಿ ಪ್ರಯೋಜನ ಪಡೆಯಬೇಕೆಂದು ಸುರೇಶ್‌ ಕುಮಾರ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next