ಕಾಸರಗೋಡು: ಸಾಮಾನ್ಯರನ್ನು ಅಸಾಮಾನ್ಯಗೊಳಿಸುವ ಶಕ್ತಿ ಶಿಕ್ಷಣಕ್ಕಿದೆ. ಅಂಧಕಾರವನ್ನು ನೀಗಿಸಿ ಅರಿವಿನ ಬೆಳಕನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದಾಗಿದ್ದು, ಶಿಕ್ಷಕ ಸೇವೆ ಶ್ರೇಷ್ಠ ಸೇವೆಯೆಂದು ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕ ದಿನಾಚರಣೆಯ ಅಂಗವಾಗಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ವ್ಯಕ್ತಿಯೊಬ್ಬ ಮೂಡಿ ಬರುವಲ್ಲಿ ವ್ಯಕ್ತಿತ್ವ ನಿರೂಪಕನಾಗಿ ರೂಪಿಸುವ ಶಿಕ್ಷಕನ ಹೊಣೆ ಸ್ತುತ್ಯರ್ಹ, ತಾಳ್ಮೆಯ, ಜಾಣ್ಮೆಯ ಕಾಯಕವಾಗಿದ್ದು, ಪ್ರತಿಯೊಬ್ಬ ಶಿಕ್ಷಿತನೂ ತಮ್ಮ ಶಿಕ್ಷಕನ ಬಗ್ಗೆ ಮರೆಯಬಾರದ ಸ್ಥಾನವನ್ನು ಹೃದಯ ದಲ್ಲಿ ನೀಡಬೇಕೆಂದು ಅವರು ತಿಳಿಸಿದರು. ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯ ಮಧ್ಯೆ ಶಿಕ್ಷಕರೂ ಹೊರತಾಗಿರದೆ, ಹೊಸತನ್ನು ವಿದ್ಯಾರ್ಥಿಗಳಿಗೆ ಕಲಿಸುವ ನಿಟ್ಟಿನಲ್ಲಿ ಕಾರ್ಯವೆಸಗಿದಾಗ ಮಾದರಿ ಶಿಕ್ಷಕರಾಗಿ ಸ್ಥಾನ ಪಡೆಯುವರು ಎಂದು ತಿಳಿಸಿದ ಶಾಸಕರು, ಶಿಕ್ಷಕ ಮತ್ತು ವಿದ್ಯಾರ್ಥಿ ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ತಿಳಿಸಿದರು.
ಕುಂಬಳೆ ಗ್ರಾ. ಪಂ. ಅಧ್ಯಕ್ಷ ಪುಂಡರೀ ಕಾಕ್ಷ ಕೆ.ಎಲ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿರುವ ಸಂತೃಪ್ತಿ ಬೇರೆಡೆ ಲಭಿಸದು. ಸಮಾಜ, ರಾಷ್ಟ್ರ ಕಟ್ಟುವ ಕಾಯಕ ನಿಜಾರ್ಥದಲ್ಲಿ ಶಿಕ್ಷಕನಲ್ಲೇ ನಿಕ್ಷಿಪ್ತವಾಗಿದೆ ಎಂದು ತಿಳಿಸಿದರು.ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್, ಕುಂಬಳೆ ಉಪಜಿಲ್ಲಾ ವಿದ್ಯಾಧಿ ಕಾರಿ ಕೈಲಾಸಮೂರ್ತಿ ಕೆ., ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ನಂದಿಕೇಶ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಜಿಲ್ಲಾ ಪ್ರಭಾರ ವಿದ್ಯಾಧಿಕಾರಿ ನಾಗವೇಣಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ವರ್ಷದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮುಖ್ಯೋಪಾಧ್ಯಾಯಿನಿ ಶಿಖಾ ಅವರ ಸೇವೆಯನ್ನು ಶ್ಲಾ ಸಿದರು. ಬಳಿಕ ಜಿಲ್ಲಾ ಮಟ್ಟದ ಅತ್ಯುತ್ತಮ ರಕ್ಷಕ-ಶಿಕ್ಷಕ ಸಂಘಗಳನ್ನು ಘೋಷಿಸಿ, ಸ್ವಾಗತಿಸಿದರು. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲೆ ಉದಯಕುಮಾರಿ ವಂದಿಸಿದರು.
ಜಿಲ್ಲಾ ಮಟ್ಟದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಬಂದಡ್ಕ ಸರಕಾರಿ ಹೆ„ಸ್ಕೂಲ್, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಅಂದ್ರು ಕುಳಿ ಸರಕಾರಿ ಹಿರಿಯ ಮಾಧ್ಯ ಮಿಕ ಶಾಲೆ ಮತ್ತು ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕುಳೂರು ಕಿರಿಯ ಪ್ರಾಥಮಿಕ ಶಾಲೆಗಳ ರಕ್ಷಕ-ಶಿಕ್ಷಕ ಸಂಘಗಳಿಗೆ ಅತ್ಯುತ್ತಮ ಸೇವೆಗಿರುವ ಪ್ರಶಸ್ತಿ ವಿತರಿಸಲಾಯಿತು. ಬಳಿಕ ಶಿಕ್ಷಕ-ಶಿಕ್ಷಕಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡವು.
ಮುಳ್ಳೇರಿಯಾದ ಪ್ರತಿಭಾವಂತ ವಿದ್ಯಾರ್ಥಿನಿ ವಿಷ್ಣುಪ್ರಿಯಾಳನ್ನು ಈ ಸಂದರ್ಭ ಗೌರವಿಸಲಾಯಿತು. ಬಳಿಕ ವಿಷ್ಣುಪ್ರಿಯಾಳಿಂದ ಗಾಯನ ಕಾರ್ಯಕ್ರಮ ನಡೆಯಿತು.