ಕೊಪ್ಪಳ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಶಾಲೆಗಳ ಬಂದ್ ಮಾಡಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರ ನಮ್ಮ ಬಗ್ಗೆ ಕಾಳಜಿ ತೋರುತ್ತಿಲ್ಲ. ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರತ ಶಿಕ್ಷಕರನ್ನು ಹಾಲಿ ಪದವಿ ಶಿಕ್ಷಕರು ಎಂದು ಪರಿಗಣನೆ ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು. ಕಳೆದ ಮೂರು ವರ್ಷದಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಿಲ್ಲ. ಈಗಷ್ಟೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಮತ್ತೂಮ್ಮೆ ಅಕ್ಟೋಬರ್ ತಿಂಗಳಲ್ಲಿ ಕೋರಿಕೆಯ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು. ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಬೇಕು. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನ್ಯತೆ ಸರಿಪಡಿಸಿ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರೆಂದು ಪರಿಗಣನೆ ಮಾಡಬೇಕು. ಶಿಕ್ಷಕ ಹಾಗೂ ವಿದ್ಯಾರ್ಥಿ ಅನುಪಾತ ಗುರುತಿಸುವಾಗ ಮುಖ್ಯೋಪಾಧ್ಯಾಯ, ದೈಹಿಕ ಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿ ಪ್ರಕ್ರಿಯೆ ಆರಂಭಿಸಬೇಕೆಂದು ಒತ್ತಾಯಿಸಿದರು.
6ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸ್ಸಿನಂತೆ ಮುಖ್ಯ ಗುರುಗಳಿಗೆ 10, 15, 20, 25 ಹಾಗೂ 30 ವರ್ಷದ ಬಡ್ತಿ ನೀಡಬೇಕು. ಗ್ರಾಮೀಣ ಕೃಪಾಂಕದಿಂದ ವಜಾಗೊಂಡ ಶಿಕ್ಷಕರಿಗೂ ಇತರೆ ಸೇವೆ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯಲ್ಲಿ 23 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುರು ಭವನ ನಿರ್ಮಾಣಕ್ಕೆ ಒತ್ತು ನೀಡಬೇಕು. ಗುರು ಭವನಕ್ಕೆ ನಿವೇಶನ ಮಂಜೂರು ಮಾಡಬೇಕು. ಜಿಲ್ಲೆಯಲ್ಲಿ ಶಿಕ್ಷಕರು ವೈದ್ಯಕೀಯ ವೆಚ್ಚ ಮರುಪಾವತಿಗೆ ರಚಿಸಲಾಗಿರುವ ಸಮಿತಿಯನ್ನು ರದ್ದುಪಡಿಸಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಈ ವರೆಗೂ ಸಮಿತಿ ರದ್ದುಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ವಿವಿಧ ಬೇಡಿಕೆ ಈಡೇರಿಕೆಗೆ ಮೂರು ಹಂತದಲ್ಲಿ ಹೋರಾಟ ಮಾಡುವ ಕುರಿತು ರಾಜ್ಯ ಸಂಘವು ನಿರ್ಣಯ ಮಾಡಿದ್ದು, ಎರಡು ಹಂತದ ಪ್ರಕ್ರಿಯೆ ಮುಗಿದಿದೆ. ಮೂರನೇ ಹಂತಕ್ಕೆ ಪ್ರಸಕ್ತ ವರ್ಷದ ಸೆ.5 ರಂದು ಶಿಕ್ಷಕರ ದಿನಾಚರಣೆಯ ಬಹಿಷ್ಕರಿಸಿ ವಿಧಾನಸೌಧ ಚಲೋ ಚಳವಳಿ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಎಚ್ಚರಿಸಿದರು.
ನೌಕರ ವರ್ಗದ ಶಂಭುಲಿಂಗನಗೌಡ ಪಾಟೀಲ, ನಾಗರಾಜ ಜುಮ್ಮನ್ನವರ್, ಸುಶೀಲೆಂದ್ರರಾವ್ ದೇಶಪಾಂಡೆ, ಶರಣಬಸವನಗೌಡ ಪಾಟೀಲ, ನಿಂಗಪ್ಪ ಗುನ್ನಾಳ, ಬೀರಪ್ಪ ಅಂಡಗಿ, ಸರ್ದಾರ ಅಲಿ, ತಿಮ್ಮಣ್ಣ ನಾಯ್ಕ, ರಾಮು ನಾಯ್ಕ, ಮಹೇಶ ಸಬರದ, ಶರಣೇಗೌಡ, ಮಾರುತಿ ಆರೇರ, ಬಾಲನಾಗಮ್ಮ, ಸುರೇಶ ಅರಕೇರಿ, ಪ್ರಾಣೇಶ ಪೂಜಾರ, ಪೂರ್ಣಿಮಾ ತುಪ್ಪದ, ಹೋಳಿಬಸಯ್ನಾ, ಬಾಳಪ್ಪ ಕಾಳೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.