Advertisement

ಸರಕಾರದ ನೀತಿ ವಿರೋಧಿಸಿ ಶಿಕ್ಷಕರ ಪ್ರತಿಭಟನೆ

10:32 PM Jun 01, 2019 | mahesh |

ನಗರ: ಆರರಿಂದ ಎಂಟನೇ ತರಗತಿ ತನಕ ಬೋಧಿಸಲು ನೇರ ಶಿಕ್ಷಕರ ನೇಮಕಾತಿ ನಡೆಸುತ್ತಿರುವ ಸರಕಾರದ ನೀತಿಯನ್ನು ವಿರೋಧಿಸಿ ತಾಲೂಕಿನ ಹಿ.ಪ್ರಾ. ಶಾಲೆಯ ಪದವೀಧರ ಶಿಕ್ಷಕರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಶನಿವಾರ ಸಂಜೆ ಧರಣಿ ನಡೆಸಿದರು.

Advertisement

ತಾಲೂಕು ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಹೊಂದಿರುವ ಸೇವಾನಿರತ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರನ್ನು ಮುಂಭಡ್ತಿಗೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಅನ್ಯಾಯವಾಗಿದೆ
ತಾಲೂಕು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇದಿಕೆಯ ಅಧ್ಯಕ್ಷ ವಿಮಲ್‌ ಕುಮಾರ್‌ ನೆಲ್ಯಾಡಿ ಮಾತನಾಡಿ, ಸೇವಾನುಭವ ಹೊಂದಿರುವ ಶಿಕ್ಷಕರು 6ರಿಂದ 8ನೇ ತರಗತಿಗಳಿಗೆ 14 ವರ್ಷಗಳಿಂದ ಬೋಧಿಸುತ್ತಾ ಬಂದಿದ್ದಾರೆ. ಆದರೆ ಅವರನ್ನು ಮುಂಭಡ್ತಿಗೆ ಪರಿಗಣಿಸದೆ ಒಂದರಿಂದ 5ನೇ ತರಗತಿ ತನಕ ಬೋಧಿಸುವ ಶಿಕ್ಷಕರೆಂದು ಆದೇಶ ಹೊರಡಿಸಿರುವುದು ಹಾಗೂ 6ರಿಂದ 8ನೇ ತರಗತಿ ಬೋಧನೆಗಾಗಿ ನೇರ ನೇಮಕಾತಿ ನಡೆಸುತ್ತಿರುವುದರಿಂದ ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಹೊಂದಿರುವವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಈ ಕುರಿತು ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೆ ಹಾಗೂ ಸಚಿವರಿಗೆ ಮನವರಿಕೆ ಮಾಡಲಾಗಿದ್ದರೂ ಉಪವಾಸ ಸತ್ಯಾಗ್ರಹ ನಡೆಸಿ ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದರೂ ಈ ತನಕ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು.

ತಾಲೂಕು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇದಿಕೆಯ ಸಂಚಾಲಕ ದಿನೇಶ್‌ ಮಾಚಾರ್‌, ಕಾರ್ಯದರ್ಶಿ ಮಹಮ್ಮದ್‌ ಅಶ್ರಫ್‌, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪುರಂದರ ಗೌಡ, ಸಂಘದ ಕೋಶಾಧಿಕಾರಿ ಸ್ಟೇನಿ ಪ್ರವೀಣ್‌ ಮಸ್ಕರೇನ್ಹಸ್‌, ಶ್ರೀಗುರು ಯೋಗ ಕೇಂದ್ರದ ಜಿಲ್ಲಾಧ್ಯಕ್ಷ ರಾಮಣ್ಣ ರೈ, ಸಂಘಟನೆಯ ಪ್ರಮುಖರಾದ ಮಲ್ಲಿಕಾ, ತೇಜಸ್ವಿನಿ ಅಂಬೆಕಲ್ಲು, ಕುಮಾರ್‌ ಕೆ.ಜೆ., ಪ್ರಶಾಂತ್‌ ಪಿ.ಎಲ್‌. ಮುಂತಾದವರು ಪಾಲ್ಗೊಂಡರು.

Advertisement

ಮುಖ್ಯಮಂತ್ರಿಗೆ ಮನವಿ
ಸೇವೆಯಲ್ಲಿರುವ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು. ಇಲ್ಲವಾದಲ್ಲಿ ನಾವು ಜೂ. 2ರಿಂದ 1ರಿಂದ 5ನೇ ತರಗತಿ ತನಕ ಮಾತ್ರ ಬೋಧಿಸುತ್ತೇವೆ. 6ರಿಂದ 8ರ ತನಕದ ತರಗತಿ ಬೋಧನೆಯನ್ನು ಬಹಿಷ್ಕರಿಸುತ್ತೇವೆ ಎಂಬ ಉಲ್ಲೇಖವಿರುವ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮೂಲಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next