ಕುದೂರು: ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಹಾಗೂ ಒಂದೇ ಸೂರಿನಡಿ ಎಲ್ ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಉದ್ದೇಶ ಇನ್ನೂ ಈಡೇರಿಲ್ಲ. ಸರ್ಕಾರ ಒಂದೆಡೆ ಶಿಕ್ಷಣ ಮಕ್ಕಳ ಹಕ್ಕು ಎಂದು ಹೇಳುತ್ತಾ, ಇನ್ನೊಂದೆಡೆ ಅಗತ್ಯಕ್ಕೆ ತಕ್ಕಂತೆ ಶಾಲೆಗೆ ಶಿಕ್ಷಕರನ್ನು ನೇಮಿಸದಿರುವುದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ.
ಈ ಶಾಲೆಗೆ ಶಿಕ್ಷಕರ ಸಮಸ್ಯೆ ಇದ್ದರೂ ಎಚ್ಚೆತ್ತುಕೊಳ್ಳದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳ ಜೊತೆ ಚಲ್ಲಾಟ ಆಡುತ್ತಿದ್ದಾರೆ. ಹಾಗೂ ಕುದೂರು ಕೆಪಿಎಸ್ ಶಾಲೆಯಲ್ಲಿ ದಕ್ಷ ಪ್ರಾಂಶು ಪಾಲರಿಲ್ಲದೇ, ನಾನಾ ಮೂಲಭೂತ ಸಮಸ್ಯೆಗಳಿಂದ ಶಾಲೆ ಸೊರಗುವಂತಾಗಿದೆ. ಕಾಲೇಜು ವಿಭಾಗದಲ್ಲಿ ಶಾಲಾ ಅವರಣವನ್ನು ಸ್ವಚ್ಛಗೊಳಿಸದೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಗಿದೆ. ಶಿಕ್ಷಕರ ಕೊರತೆ, ನೆಲಕುರುಳಿರುವ ಶಾಲಾ ಕಾಂಪೌಂಡ್, ಅರೆಬರೆ ಶೌಚಾಲಯ ಕಾಮಾಗಾರಿ, ಅರ್ಧಕ್ಕೆ ನಿಂತ ನರೇಗಾ ಕಾಮಗಾರಿಗಳು, ಸ್ವತ್ಛತೆ ಇಲ್ಲದ ಶಾಲಾ ಆವರಣ, ಈಗೆ ಹಲವಾರು ಮೂಲಭೂತ ಸಮಸ್ಯೆಗಳನ್ನು ಶಾಲೆ ಎದುರಿಸುವಂತಾಗಿದೆ.
ಬೇಜವಾಬ್ದಾರಿ ಅಧಿಕಾರಿಗಳು: 1600ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಶಿಕ್ಷಕರ ಕೊರತೆ, ಮೂಲಭೂತ ಸೌಲಭ್ಯಗಳು ಕೊರತೆ ಒಳಗೊಂಡಂತೆ ನಾನಾ ಸಮಸ್ಯೆಗಳಿದ್ದು, ಈ ಸಂಬಂಧ ಕೆಪಿಎಸ್‌ನ ಎಸ್‌ಡಿಎಂಸಿ ಸಮಿತಿಯೂ ಇಲಾಖೆಯ ಗಮನಕ್ಕೆ ಹಲವು ಬಾರೀ ತಂದರೂ ಇದುವರೆಗೆ ಸಿಆರ್‌ಪಿ, ಕ್ಷೇತ್ರಶಿಕ್ಷಣಾಧಿಕಾರಿ, ಡಿಡಿಪಿಐ, ಕಾಲೇಜು ಉಪನಿರ್ದೇಶಕರು, ಹಾಗೂ ಕೆಪಿಎಸ್ ಶಾಲೆಯ ನೋಡೆಲ್ ಅಧಿಕಾರಿಗಳು ಶಾಲೆಯಲ್ಲಿನ ಸಮಸ್ಯೆ ಯನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಲೆಯಲ್ಲಿನ ಎಸ್ ಡಿಎಂಸಿ ಹಾಗೂ ಶಿಕ್ಷಕರನೊಳಗೊಂಡಂತೆ ಒಂದೇಒಂದು ಸಭೆ ನಡೆಸದಿರುವುದು ಅಧಿಕಾರಿಗಳ ಬೇಜಾವಾªರಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ಪ್ರಭಾರಿಗಳ ವೈಫಲ್ಯ: ಕುದೂರು ಕೆಪಿಎಸ್ ಶಾಲೆ ಯಲ್ಲಿ ಪ್ರಾಂಶುಪಾಲ ಹಾಗೂ ಉಪಪ್ರಾಂಶುಪಾಲ ಹುದ್ದೆಗೆ ನೇಮಕವಾಗದ ಕಾರಣ ವಿಷಯ ಶಿಕ್ಷಕರೇ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿ ದ್ದು, ಇವರು ತಮ್ಮ ವಿಷಯ ತರಗತಿಗಳ ಜೊತೆಗೆ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಪುಣ ಶಿಕ್ಷಕರನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದು, ಶಾಲೆಯಲ್ಲಿನ ಮೂಲಭೂತ ಸೌಲಭ್ಯಗಳನ್ನು ಬಗೆಹರಿಸುವಲ್ಲಿ ಹಾಗೂ ಶಾಲೆಯ ಆಡಳಿತ ಮಂಡಳಿಯನ್ನು ನಿಭಾಯಿಸುವಲ್ಲಿ ವಿಫಲವಾದ ಪರಿಣಾಮ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ, ಶಾಲೆಯೂ ನಾನಾ ಸಮಸ್ಯೆಯನ್ನು ಎದುರಿಸುವಂತಾಗಿದೆ.
ನಡಾವಳಿ ಪುಸ್ತಕ ನಾಪತ್ತೆ: ಈ ಹಿಂದೆ ಇದ್ದ ಶಾಸಕರು ಮಾಧ್ಯಮಗಳ ಒತ್ತಡಕ್ಕೆ ಮಣಿದು ಎಸ್ ಡಿಎಂಸಿ ಸಮತಿ ರಚಿಸಿ ಹೋದವರು, ಮತ್ತೆ ಶಾಲೆಯತ್ತ ಮುಖ ಮಾಡಲಿಲ್ಲ. ಎಸ್‌ಡಿಎಂಸಿ ಸದಸ್ಯರ ಒತ್ತಡಕ್ಕೆ ಮಣಿದ ಪ್ರಾಂಶುಪಾಲ ಹಾಗೂ ಉಪಪ್ರಾಂಶುಪಾಲರು ಒಂದೆರೆಡು ಸಭೆಯನ್ನು ನಡೆಸಿದರಾದರೂ, ನಂತರ ಎಸ್‌ಡಿಎಂಸಿ ನಡಾವಳಿ ಪುಸ್ತಕವೇ ಕಳೆದು ಹೋಗಿದೆ ಎಂದು ಸಭೆ ಕರೆಯಲಿಲ್ಲ. ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಪಿಯು ಪರೀಕ್ಷೆ, ಚುನಾವಣೆ ಕಾರಣಗಳನ್ನು ಹೇಳಿ ತಮ್ಮ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ್ದಾರೆ ಎನ್ನುತ್ತಾರೆ ಎಲ್ಲಾ ಎಸ್‌ಡಿಎಂಸಿ ಸದಸ್ಯರು.
ಶಾಸಕರೇ ಗಮನಹರಿಸಿ: ಶಾಲೆಯಲ್ಲಿ ವಿದ್ಯಾರ್ಥಿಗಳ ಅನುಪಾತಕನುಗುಣವಾಗಿ ಶಿಕ್ಷಕರ ಕೊರತೆ ಇದೆ. ಪ್ರಾಥಮಿಕ, ಫ್ರೌಢಶಾಲೆ, ಕಾಲೇಜು ವಿಭಾಗಗಳಲ್ಲಿ ಡಿ ಗ್ರೂಪ್ ನೌಕರರಿಲ್ಲ. ಕಾಲೇಜು ವಿಭಾಗ ದಲ್ಲಿ ಎಫ್‌ಡಿಎ, ಎಸ್‌ಡಿಎ ಸಿಬ್ಬಂದಿಗಳಿಲ್ಲದೆ ಪ್ರಾಧ್ಯಪಕರೇ ಕಾರ್ಯನಿರ್ವಹಿಸುತ್ತಿದ್ದಾರೆ. ಕುದೂರು ಕೆಪಿಎಸ್ ಶಾಲೆಯಲ್ಲಿ ಇಲಾಖೆ ಆದೇಶದ ಪ್ರಕಾರ ಈಗಾಗಲೇ 3 ವರ್ಷದ ಅವಗೆ ಎಸ್‌ಡಿಎಂಸಿ ಸದಸ್ಯರು ಆಯ್ಕೆಯಾಗಿದ್ದು, ಕೂಡಲೇ ಎಸ್‌ಡಿಎಂಸಿ ಸಭೆ ಕರೆದು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವತ್ತ ಶಾಸಕ ಬಾಲಕೃಷ್ಣ ಆವರು ಹೆಚ್ಚಿನ ಗಮನಹರಿಸಬೇಕಿದೆ.
ಕುದೂರು ಕೆಪಿಎಸ್ ಶಾಲೆಯಲ್ಲಿನ ಸಮಸ್ಯೆಗಳ ಕುರಿತಂತೆ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಖುದ್ದು ನಾನೇ ಶಾಲೆಗೆ ಭೇಟಿ ನೀಡಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ.
– ಎಚ್.ಸಿ. ಬಾಲಕೃಷ್ಣ, ಶಾಸಕ
ಪ್ರಾಂಶುಪಾಲರು ಹಾಗೂ ಉಪಪ್ರಾಂಶುಪಾಲರು ಪ್ರಭಾರಿಗಳೇ ಒಬ್ಬರಿಗೆ ಒಬ್ಬರು ಹೊಂದಾಣಿಕೆ ಇಲ್ಲ. ಪ್ರಾಂಶುಪಾಲರು ಹಾಗೂ ಉಪಪ್ರಾಂಶುಪಾಲರು ಎಸ್‌ಡಿಎಂಸಿ ಸದಸ್ಯರಿಗೆ ಸ್ಪಂದಿಸುತ್ತಿರಲಿಲ್ಲ. ಕೊನೆಗೆ ಎಸ್‌ಡಿಎಂಸಿ ನಡಾವಳಿ ಪುಸ್ತಕವೇ ಕಳೆದುಹೋಗಿದೆ ಎಂದು ಎಸ್‌ಡಿಎಂಸಿ ಸಭೆ ಮಾಡುವುದನ್ನೇ ನಿಲ್ಲಿಸಿದರು.
– ಪದ್ಮನಾಭ್, ಎಸ್‌ಡಿಎಂಸಿ ಉಪಾಧ್ಯಕ್ಷ