Advertisement
ಬೆಳಗ್ಗೆ ಆಗುವುದೇ ತಡ, ಮಕ್ಕಳನ್ನು ಶಾಲೆಗೆ ಕಳಿಸುವ ಧಾವಂತ. “ಹಾಸಿಗೆ ಬಿಟ್ಟು ಏಳೋ’ ಎಂಬ ಸುಪ್ರಭಾತದಿಂದ ಶುರುವಾಗಿ “ಬೇಗ ಬೇಗ ಸ್ನಾನ ಮುಗಿಸ್ರೋ’, “ತಿಂಡಿ ತಿನ್ರೊ’, “ಹಾಲು ಕುಡೀರೋ’… ಹೀಗೆ ನಿರಂತರ ಮಂತ್ರಪಠನೆ ಸಾಗುತ್ತಲೇ ಇರುತ್ತದೆ.
Related Articles
Advertisement
ಸಣ್ಣ ಮಕ್ಕಳೆಲ್ಲ ಮನೆ ಬಿಟ್ಟ ಮೇಲೆ ಈ ದೊಡ್ಡ ಮಗನನ್ನು ಸುಧಾರಿಸುವುದೇ ಆಗುತ್ತದೆ. ಹಿಂದಿನ ರಾತ್ರಿ ಎಲ್ಲಾ ಕೆಲಸ ಮುಗಿಸಿ ತೂಕಡಿಸುತ್ತಲೇ ಗರಿಮುರಿಯಾಗಿ ಇಸ್ತ್ರಿ ಮಾಡಿಟ್ಟ ಪ್ಯಾಂಟ್-ಶರ್ಟ್ ಏರಿಸಿಕೊಳ್ಳುವಾಗಲೂ ಕೀಟಲೆಯೇ. “ಈ ಪ್ಯಾಂಟಿನ ಹುಕ್ ಲೂಸ್ ಆಗಿದ್ಯಲ್ಲೇ’ ಅಂತಲೋ “ಶರ್ಟ್ ನ ಬಟನ್ ಬಿದ್ದು ಹೋಗಿದೆ ಕಣೇ’ ಅಂತಲೋ ಕರೆಯೋದು. ಸೂಜಿ-ದಾರ ಹಿಡ್ಕೊಂಡು ಬಂದ್ರೆ, “ಈಗಾಗಲೇ ಅರ್ಧ ಹಾಕ್ಕೊಂಡು ಬಿಟ್ಟಿದ್ದೀನಿ, ಇಲ್ಲೇ ಹೊಲಿದು ಬಿಡೇ’ ಅಂತ ಕಾಡುವುದು!
ದೊಡ್ಡವರಿಂದ ಸಣ್ಣವರು ಕಲಿಯುತ್ತಾರೋ, ಸಣ್ಣವರನ್ನು ನೋಡಿ ದೊಡ್ಡವರು ಕಲಿಯುತ್ತಾರೊ ಅರ್ಥವೇ ಆಗದು. ಶಾಲೆಗೆ ಕಳಿಸಿಕೊಡುವಾಗ ಮಕ್ಕಳ ಹಣೆಗೆ ನಾ ಕೊಡುವ ಸಿಹಿಮುತ್ತು ಇವನ ಎದೆಯಲ್ಲೂ ಅಸೂಯೆ ಹುಟ್ಟಿಸಿಬಿಟ್ಟಿದೆ. ಟಿಫಿನ್ ಬಾಕ್ಸ್ ಮತ್ತು ವಾಟರ್ ಬಾಟಲ್ ಹಾಕಿಕೊಂಡ ಬ್ಯಾಕ್ ಪ್ಯಾಕ್‌ನ್ನು ಸ್ಕೂಲ್ ಬ್ಯಾಗ್ ಶೈಲಿಯಲ್ಲೇ ಹೆಗಲಿಗೇರಿಸಿಕೊಂಡು ಹೊರಡುವಾಗ ತನ್ನ ಕೆನ್ನೆಯನ್ನು ನನ್ನ ಮುಖದ ಮುಂದೆ ತರುತ್ತಾನೆ. ಅದಕ್ಕೆ ಮೆಲ್ಲನೆ ಒಂದು ಪೆಟ್ಟು ಕೊಟ್ಟೋ, ಚಿವುಟಿಯೋ ಅಥವಾ ಅಪೇಕ್ಷಿತ “ಮಾಮೂಲಿ’ ಕೊಟ್ಟೋ ಈ ದೊಡ್ಡ ಮಗನನ್ನು ಸಾಗಹಾಕಿ ನಿರಾಳತೆಯ ಉಸಿರನ್ನು ಒಳಗೆಳೆದುಕೊಳ್ಳುತ್ತೇನೆ ಸೋಫಾದಲ್ಲಿ ಕುಳಿತು. ಮುಂದಿನ ಕೆಲಸ ನೆನಪಾಗುವಲ್ಲಿಯವರೆಗೆ ಮಾತ್ರ…
ಶರ್ವಾಣಿ ಭಟ್, ಗೋವಾ