Advertisement

ಶಿಕ್ಷಕರ ಕೊರತೆ: ಹೊನ್ನನಾಯಕನಹಳ್ಳಿ ಮಕ್ಕಳಿಗಿಲ್ಲ ಶಿಕ್ಷಣ ಭಾಗ್ಯ

12:39 PM Jan 06, 2018 | Team Udayavani |

ಚನ್ನಗಿರಿ: ಮಕ್ಕಳಿಲ್ಲ ಎಂದು ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿಯಿದೆ. ಆದರೆ ಇಲ್ಲೊಂದು ಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಕ್ಕಳು ಪರಿತಪಿಸುವಂತಾಗಿದೆ. ತಾಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಿಕ್ಷಕರು 
ಇಲ್ಲದೆ ಶಾಲೆಯ ಅವರಣದಲ್ಲಿಯೇ ಮಕ್ಕಳು ಕಾಲ ಕಳೆಯುವಂತೆ ಆಗಿದೆ.

Advertisement

ಹೊನ್ನನಾಯಕನಹಳ್ಳಿ ಗ್ರಾಮದ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ 62 ವಿದ್ಯಾರ್ಥಿಗಳಿದ್ದಾರೆ. ಒಬ್ಬ ಪ್ರಭಾರಿ ಮುಖ್ಯ ಶಿಕ್ಷಕ ಸೇರಿ ಮೂವರು ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯ ಶಿಕ್ಷಕರು ದಿನನಿತ್ಯ ಬಿಸಿಯೂಟ, ಶಾಲೆಯ ಆಡಳಿತ, ಬಿಇಒ ಕಚೇರಿ
ಮೀಟಿಂಗ್‌ ಎಂದು ಹೊರಟರೆ ಉಳಿಯುವುದು ಕೇವಲ ಇಬ್ಬರು ಶಿಕ್ಷಕರು ಮಾತ್ರ. ಅವರೂ ರಜೆ ಅಥವಾ ಮತ್ತಿತರ ಕೆಲಸಗಳಿಗೆ ತೆರಳಿದರೆ ಮಕ್ಕಳ
ಪಠ್ಯವಿಲ್ಲದೇ ಕಾಲ ಕಳೆಯುವಂತಾಗುತ್ತಿದೆ. ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. 

ಇಲ್ಲಿಯ ಸರ್ಕಾರಿ ಶಾಲೆಯಲ್ಲಿ 62ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಆದರೂ ಶಿಕ್ಷಣ ಇಲಾಖೆಯು ಶಿಕ್ಷಕರನ್ನು ನೇಮಿಸದೆ ಮಕ್ಕಳ ಶೈಕ್ಷಣಿಕ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಗೆ ಐವರು ಕಾಯಂ ಶಿಕ್ಷಕರನ್ನು ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮಕ್ಕಳೊಂದಿಗೆ ಜ.1 ಮತ್ತು 2ರಂದು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಈ ಮೊದಲು ಕೂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸದ್ಯ ಓರ್ವ ಶಿಕ್ಷಕರನ್ನು ಬೇರೊಂದು ಶಾಲೆಯಿಂದ ಪ್ರತಿದಿನ ಕಳುಹಿಸುತ್ತಿದ್ದು, ಜ. 4ರಿಂದ ಶಿಕ್ಷಕರು ಆಗಮಿಸುತ್ತಿದ್ದಾರೆ. ಆದರೆ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಐವರು ಕಾಯಂ ಶಿಕ್ಷಕರನ್ನು ನೀಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. ಇದಲ್ಲದೇ ಶಾಲೆ ಮೂಲಭೂತ ಸಮಸ್ಯೆಗಳಿಂದ ನರಳುತ್ತಿದ್ದು, ಶೌಚಾಲಯ ಪಾಳುಬಿದ್ದಿದೆ. ಮಕ್ಕಳು ನಿರ್ವಾಹವಿಲ್ಲದೇ ಬಯಲುಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ. ಅಧಿಕಾರಿಗಳು ಇತ್ತಲೂ ಗಮನಹರಿಸಿ ಶೌಚಾಲಯ ಸೇರಿದಂತೆ ಇತರ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಶಾಲೆಯಲ್ಲಿ ನಾಲ್ವರು ಶಿಕ್ಷಕರ ನೇಮಕಾತಿಗೆ ಅವಕಾಶವಿದೆ. ಮುಖ್ಯ ಶಿಕ್ಷಕರೊಬ್ಬರು ನಿವೃತ್ತರಾಗಿದ್ದಾರೆ. ಇನ್ನು ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೊಬ್ಬರನ್ನು ಬೇರೊಂದು ಶಾಲೆಯಿಂದ ಪ್ರತಿನಿತ್ಯ ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಕಾಯಂ ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು.
ಬಿಇಒ ಪರಮೇಶ್ವರಪ್ಪ.

Advertisement

ಶಿಕ್ಷಕರ ಕೊರತೆಯಿಂದಾಗಿ ಗುಣ್ಣಮಟ್ಟದ ಶಿಕ್ಷಣ ಶಾಲಾ ಮಕ್ಕಳಿಗೆ ಸಿಗುತ್ತಿಲ್ಲ. ಶಿಕ್ಷಕರ ಕೊರತೆ ಬಗ್ಗೆ ಸಾಕಷ್ಟು ಬಾರಿ ಕ್ಷೇತ್ರ ಶಿಕ್ಷಣ ಅಧಿಕಾರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ತಕ್ಷಣ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕು. ಇಲ್ಲವಾದರೆ ಶಿಕ್ಷಣ ಇಲಾಖೆ ವಿರುದ್ಧ ಧರಣಿ ನಡೆಸಲಾಗುವುದು.
ಯೋಗೇಶ್‌. ಎಸ್‌ಡಿಎಂಸಿ ಅಧ್ಯಕ್ಷ

ಶಾಲೆಗೆ ಶಿಕ್ಷಕರನ್ನು ನೇಮಿಸಲು ಶಿಕ್ಷಣ ಇಲಾಖೆ ನಿರ್ಲಕ್ಷ ತೋರುತ್ತಿದೆ. ಈಗಾಗಲೇ ಶೈಕ್ಷಣಿಕವಾಗಿ ಮಕ್ಕಳಿಗೆ ತೊಂದರೆಯಾಗಿದೆ. ಈ ಶಾಲೆಗೆ ಶಿಕ್ಷಕರನ್ನು  ನೇಮಿಸುವವರೆಗೂ ನಿರಂತರವಾಗಿ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು.
ತಿಪ್ಪೇಸ್ವಾಮಿ. ಗ್ರಾಮಸ್ಥರು.

ಚನ್ನಗಿರಿ: ಕಾಯಂ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಶಾಲೆಯ ಮಕ್ಕಳು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next