ರಾಮದುರ್ಗ: ಶಿಕ್ಷಕ ವೃತ್ತಿ ಅತ್ಯಂತ ಪ್ರಾಮುಖ್ಯತೆ ಹೊಂದಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹರ್ಲಾಪುರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಸರಕಾರಿ ನೌಕರರ ಸಭಾಭವನದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ನೂತನ ಸಂಘದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನೂತನ ಸಂಘ ಉದ್ಘಾಟಿಸಿದ ಯುವ ಮುಖಂಡ ಮಲ್ಲಣ್ಣ ಯಾದವಾಡ ಮಾತನಾಡಿ, ಗ್ರಾಮೀಣ ಶಿಕ್ಷಕರು ಅನೇಕ ಸಮಸ್ಯೆಗಳಲ್ಲಿ ಬಳಲುತ್ತಿದ್ದಾರೆ. ಸಮಸ್ಯೆಗಳ ನಿವಾರಣೆಗಾಗಿ ಸಂಘಟನೆ ಅವಶ್ಯಕತೆ ಅವಶ್ಯವಾಗಿತ್ತು. ಆ ನಿಟ್ಟಿನಲ್ಲಿ ಈಗ ಹುಟ್ಟು ಹಾಕಿದ ಸಂಘಟನೆ ಶಿಕ್ಷಕರ ಸಮಸ್ಯೆಗಳ ಪರಿಹಾರ ಕಂಡು ಕೊಳ್ಳುವತ್ತ ಬೆಳೆಯಲಿ ಎಂದರು.
ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋರಾಟ ನಿಂತ ನೀರಲ್ಲ. ನಿರಂತರ ಹರಿಯುವಂತೆ ನಮ್ಮ ಹೋರಾಟ ನಿರಂತರವಾಗಿರಬೇಕು. ಶಿಕ್ಷಕರ ಏನೆ ಸಮಸ್ಯೆಗಳಿದ್ದರು ಅವುಗಳನ್ನು ಪರಿಹರಿಸುವಲ್ಲಿ ಸಂಘದ ಪದಾಧಿಕಾರಿಗಳು ಶ್ರಮಿಸಬೇಕು. ಜತೆಗೆ ಸಂಘಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.
ಸಂಘಟನೆ ತಾಲೂಕಾಧ್ಯಕ್ಷರನ್ನಾಗಿ ಶಿಕ್ಷಕ ಆರ್.ವಿ.ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಎಸ್.ವಿ. ಗಣಾಚಾರಿ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಎಂ.ಐ. ಮುನವಳ್ಳಿ, ಶರಣಪ್ಪಗೌಡ ಆರ್.ಕೆ, ಮಲ್ಲಿಕಾರ್ಜುನ ಉಪ್ಪಿನ, ಸಂಗಮೇಶ ಕಣಿನಾಯ್ಕರ, ಎಂ.ಎಸ್. ಪಾಟೀಲ, ಮಹಾಂತೇಶ ಮುಂಡರಗಿ, ವಿಠಲ ಯಲಗೋಡ, ಎಚ್.ಬಿ. ಸಿದ್ರಾಮಪ್ಪಗೋಳ ಇತರರಿದ್ದರು.