ಹುನಗುಂದ: ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಪವಿತ್ರವಾದುದು. ಭಾರತ ದೇಶದ ಭವಿಷ್ಯದ ಪೀಳಿಗೆಯನ್ನು ಬೆಳೆಸುವ ಮಹಾನ್ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶದ ತತ್ವಜ್ಞಾನಿ,ಶಿಕ್ಷಣ ತಜ್ಞ ಮಹಾನ್ ಮೇಧಾವಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು. ಇಂದು ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಕುಸಿಯುತ್ತಿದೆ. ಗುರುಗಳಿಗೆ ಸಿಗುವ ಗೌರವ ಕಡಿಮೆಯಾಗುತ್ತಿದೆ.ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಗುಣಮಟ್ಟದ ಶಿಕ್ಷಣ ಜೊತೆಗೆ ಮಾನವೀಯ ಮೌಲ್ಯಗಳ ಬೆಳೆಸುವ ಕಾರ್ಯವಾಗಬೇಕು ಎಂದರು.
ಚಿತ್ತರಗಿ ಸಂಸ್ಥಾನಮಠ ಇಲಕಲ್ಲದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಸುಖ ಶಾಂತಿ ನೆಮ್ಮದಿ, ಸೌಖ್ಯ ಅನುಭವಿಸಲು ಶಿಕ್ಷಕನಾಗಬೇಕು. ಜಗತ್ತಿನಲ್ಲಿ ಆದರ್ಶ ಮತ್ತು ಮಾದರಿಯ ವೃತ್ತಿಯೇ ಶಿಕ್ಷಕ ವೃತ್ತಿಯಾಗಿದೆ ಎಂದರು.
ಮಕ್ಕಳ ಉತ್ತಮ ಬೆಳವಣಿಗೆಗೆ ಶಾಲಾ ವಾತಾವರಣ ಪೂರಕವಾಗಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಬೆಳೆಸುವುದರ ಮೂಲಕ ದುಶ್ಚಟಗಳಿಂದ ದೂರ ಮಾಡುವ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು. ನಿವೃತ್ತ ಶಿಕ್ಷಕರಾದ ಎಸ್.ಎಸ್.ಬಳೂಟಗಿ, ಬಿ.ಎ. ಬೆಳ್ಳಿಹಾಳ, ಎಸ್.ಜಿ.ಎಮ್ಮಿ, ಎಸ್.ಎಸ್. ಬಿರಾದಾರ, ಎಂ.ಪಿ. ಗೋಳಸಂಗಿ, ಎಂ.ಎಚ್. ಪಾಟೀಲ, ಎಸ್.ಎಲ್. ಸಂಗಮದ, ಎಲ್.ಎಚ್.ಮುಕ್ಕಣ್ಣವರ ಸೇರಿದಂತೆ 48 ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಯಿಕುಮಾರ ಪೂಜಾರಿ, ಸುಶ್ಮಿತಾ ವಸ್ತ್ರದ, ರಾಣಿ ಹಾದಿಮನಿ, ವಿಜಯಲಕ್ಷ್ಮೀ ಭಾಪರೆ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು. ನಿವೃತ್ತ ಶಿಕ್ಷಕರಾದ ರಾಚಪ್ಪ ಮಿಟ್ಟಲಕೋಡ, ವಿ.ಜಿ. ಅಂಗಡಿ, ತಾಪಂ ಅಧ್ಯಕ್ಷ ಮಹಾಂತೇಶ ಕಡಿವಾಲ. ಸದಸ್ಯರಾದ ಮಂಜುನಾಥ ಗೌಡರ, ಹುಲ್ಲಪ್ಪ ಹುಲ್ಲೂರ, ರಾಮಣ್ಣ ಹೊಸಮನಿ, ಅಮೀನಗಡ ಪಪಂ ಉಪಾಧ್ಯಕ್ಷೆ ಸೋನುಬಾಯಿ ಲಮಾಣಿ, ತಹಶೀಲ್ದಾರ್ ಆನಂದ ಕೋಲಾØರ, ಅರುಣೋದಯ ದುದ್ಗಿ, ಮಹಾಂತೇಶ ರೇವಡಿ, ಅಪ್ಪು ಆಲೂರ, ಸಂಗಮೇಶ ಚೂರಿ ವೇದಿಕೆಯಲ್ಲಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ. ಕುಂದರಗಿ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಚ್. ತಿಳಿಗೋಳ ಸ್ವಾಗತಿಸಿದರು. ಡಾ| ಶಿವಗಂಗಾ ರಂಜನಗಿ ಹಾಗೂ ಆನಂದ ಗದ್ದನಕೇರಿ ನಿರೂಪಿಸಿದರು. ಸಿದ್ದು ಪಾಟೀಲ ವಂದಿಸಿದರು.