Advertisement

ಶಿಕ್ಷಕರಲ್ಲಿ ಕನ್ನಡ ಭಾಷಾ ಪ್ರಭುತ್ವ ಇರಲಿ

10:19 PM Sep 01, 2019 | Lakshmi GovindaRaj |

ಮೈಸೂರು: ಇಂದು ನಮ್ಮ ಶಿಕ್ಷಕರಿಗೆ ಭಾಷೆ ಮೇಲೆ ಪ್ರಭುತ್ವ ಇಲ್ಲವಾಗಿದ್ದು, ಬೆರಳಚ್ಚುಗಾರರಲ್ಲಿ ಭಾಷಾ ಪ್ರಭುತ್ವ ಕಾಣಲು ಹೇಗೆ ಸಾಧ್ಯ ಎಂದು ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್‌ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಅವಧೂತ ದತ್ತಪೀಠ ದತ್ತಾತ್ರೇಯ ದೇವಸ್ಥಾನದ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಚೇತನ ಬುಕ್‌ ಹೌಸ್‌ ವತಿಯಿಂದ ಆಯೋಜಿಸಿದ್ದ “ಕನ್ನಡ-ಕನ್ನಡ-ಇಂಗ್ಲಿಷ್‌ ನಿಘಂಟು ಬಿಡುಗಡೆ ಹಾಗೂ ಡಾ.ಸಿಪಿಕೆ ಅವರ ಚಿಂತನ-ಚೇತನ ಸಂಪುಟಗಳ ಕುರಿತು ಸಮಾಲೋಚನಾ ಸಮಾರಂಭ’ದಲ್ಲಿ ನಿಘಂಟು ಬಿಡುಗಡೆ ಮಾಡಿ ಮಾತನಾಡಿದರು.

2 ಲಕ್ಷ ಪದಗಳ ಶಬ್ಧಕೋಶ: ನಿಘಂಟು ಸುಮಾರು 2 ಲಕ್ಷ ಪದಗಳ ಶಬ್ಧಕೋಶವಾಗಿದ್ದು, ಎರಡು ಹಿರಿಯ ಜೀವಗಳು ಈ ನಿಘಂಟನ್ನು ರಚಿಸಿರುವುದು ಶ್ಲಾಘನೀಯ. ಕನ್ನಡ, ಕನ್ನಡೇತರ ಶಬ್ಧಗಳು, ದ್ರಾವಿಡ ಮೂಲದ ಶಬ್ಧಗಳು ಹಾಗೂ ಕೆಲವು ಅಪರೂಪದ ಶಬ್ಧಗಳನ್ನು ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಸ ಕಾರ್ಯ: ಕನ್ನಡ ಭಾಷೆ ಸುಮಾರು 25 ಲಕ್ಷ ಪದಗಳನ್ನು ಹೊಂದಿರುವ ಶ್ರೀಮಂತ ಭಾಷೆಯಾಗಿದ್ದು, ಎಲ್ಲಾ ಪದಗಳನ್ನು ನಿಘಂಟಿನಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ಕೆಲವು ಶಬ್ಧಗಳು ಇಲ್ಲವೆನ್ನುವುದು ಕುತೂಹಲದ ವಿಷಯ. ಇರಲೇಬೇಕು ಎಂದೇನಿಲ್ಲ. ಹಿರಿಯರು ಈ ಸಾಹಸ ಕಾರ್ಯ ಮಾಡಿರುವುದರಿಂದ ಕೆಲವೆಡೆ ಕಣ್ತಪ್ಪಿನ ಕಾರ್ಯವಾಗಿದೆ. ಅದು ಸಂಪಾದಕರ ತಪ್ಪು ಎಂದು ಹೇಳಲಾಗದು. ಬೆರಳಚ್ಚುಗಾರರ ತಪ್ಪಿನಿಂದಾಗಿ ಅನೇಕ ಪದಗಳ ಅರ್ಥ ಬೇರೆಯ ಅರ್ಥ ಸೂಚಿಸುತ್ತದೆ. ಈ ನಿಟ್ಟಿನಲ್ಲಿ ತಾಂತ್ರಿಕ ದೋಷಗಳನ್ನು ಗುರುತಿಸಲು ಒಬ್ಬರು ಅಗತ್ಯ ಎನಿಸುತ್ತದೆ ಎಂದು ಹೇಳಿದರು.

ಅಪಾಯವಿದೆ: ನಿಘಂಟು ಎಂದರೆ ಸ್ಪಷ್ಟ ಎಂಬುದಾಗಿದ್ದು, ಜ್ಞಾನದ ಸಂಕೇತ, ಸರಸ್ವತಿ ಪೂಜಾ ಕಾರ್ಯವಾಗಿದೆ. ನಿಘಂಟನ್ನು ವಿದ್ಯಾರ್ಥಿಗಳು ಓದುವುದರಿಂದ ಹಾಗೂ ಗೂಗಲ್‌ ಸ್ವಯಂ ಸೃಷ್ಟಿಕರ್ತರು ನಿಘಂಟಿನ ಪದಗಳನ್ನು ಗೂಗಲ್‌ನಲ್ಲಿ ದಾಖಲಿಸುವುದರಿಂದ ಹಲವು ಶತಮಾನಗಳ ಕಾಲ ಇದು ಹೀಗೆಯೇ ಮುಂದುವರಿಯುವ ಅಪಾಯವಿದೆ. ಉದ್ಯಮದ ಜೊತೆಗೆ ಗುಣಮಟ್ಟದ ಕುರಿತು ಆಲೋಚಿಸುವುದು ಮುಖ್ಯವಾಗಿದೆ ಎಂದರು.

Advertisement

ಶಾಸಕ ಎಂದು ಹೇಳಲು ಬರಲ್ಲ: ಹಿರಿಯರು ಭಾಷೆ ಗೊತ್ತಿಲ್ಲ, ಸಂಸ್ಕೃತಿ ಗೊತ್ತಿಲ್ಲ ಎಂದು ಬೈಯ್ಯುತ್ತಿದ್ದರು. ಮಾಧ್ಯಮಗಳಲ್ಲಿ ತಪ್ಪು, ತಪ್ಪು ಪ್ರಯೋಗ ಮಾಡುತ್ತಾರೆ. ಇದೆಲ್ಲವನ್ನೂ ನೋಡಿದರೆ ಭಾಷೆ ಬಾರದ, ಸಂಸ್ಕೃತಿ ಗೊತ್ತಿಲ್ಲದ ಸಮಾಜದಲ್ಲಿದ್ದೇವೆ ಎನಿಸುತ್ತದೆ. ಕನ್ನಡದ ಬಗ್ಗೆ ದೊಡ್ಡದಾಗಿ ಮಾತನಾಡುತ್ತೇವೆ. ಆದರೆ, ಎಷ್ಟೊ ಶಾಸಕರಿಗೆ ಶಾಸಕ ಎಂದು ಹೇಳಲು ಬರುವುದಿಲ್ಲ. ಶಾ ಕಾರಕ್ಕೂ, ಸ ಕಾರಕ್ಕೂ ವ್ಯತ್ಯಾಸವೇ ಗೊತ್ತಿಲ್ಲದಂತೆ ಪದಗಳ ಬಳಸುತ್ತಾರೆ. ಶಬ್ಧದ ಬೇರು, ಸಂಸ್ಕೃತಿಯ ಕುರಿತು ಆಲೋಚಿಸಬೇಕಿದೆ ಎಂದು ತಿಳಿಸಿದರು.

ಹುತ್ತಕ್ಕೆ ಕೈ ಹಾಕಿದಂತೆ: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ದತ್ತಪೀಠ ಉತ್ತರಾಧಿಪತಿ ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ನಿಘಂಟು ರಚನೆ ಹುತ್ತಕ್ಕೆ ಕೈಹಾಕಿದಂತೆ. ಸಮುದ್ರವನ್ನು ಈಜಿದಂತೆ ಅದಕ್ಕೆ ಆದಿ, ಅಂತ್ಯವಿಲ್ಲ. ನಿಘಂಟಿನ ಪದಗಳನ್ನು ಗಮನಿಸಿದರೆ ನಮ್ಮ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿದೆ ಎನಿಸುತ್ತದೆ ಎಂದರು.

ಭವಿಷ್ಯದಲ್ಲಿ ಫ‌ಲ: ಇಂಗ್ಲಿಷ್‌ ಬಳಕೆ ನಡುವೆ ಕನ್ನಡ ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ. ಮಕ್ಕಳಿಗೆ ಕನ್ನಡ ಸಾಹಿತ್ಯ ಓದಿಸುವ ಕಾರ್ಯವನ್ನು ಪೋಷಕರು ಮಾಡಬೇಕಿದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಭಾಷಾ ಸಂಪತ್ತು ಒದಗಿಸಿದರೆ ಭವಿಷ್ಯದಲ್ಲಿ ಫ‌ಲ ನೀಡುತ್ತದೆ ಎಂದು ಹೇಳಿದರು. ಸಾಹಿತಿ ಡಾ.ಸಿಪಿಕೆ, ಕಾಲೇಜು ಶಿಕ್ಷಣ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಡಾ.ಮೊರಬದ ಮಲ್ಲಿಕಾರ್ಜುನ, ವಿದೂಷಿ ಡಾ.ಕೆ.ಲೀಲಾ ಪ್ರಕಾಶ್‌, ಸಾಹಿತಿ ಪ್ರೊ.ಕೆ.ಭೈರವಮೂರ್ತಿ, ಗ್ರಂಥಕರ್ತ ಎಸ್‌.ಪ್ರಕಾಶ್‌ಬಾಬು, ಲೇಖಕ ಡಾ.ಬೆ.ಗೋ.ರಮೇಶ್‌ ಇದ್ದರು.

ಇಂದಿನ ಮಕ್ಕಳಿಗೆ ಕನ್ನಡ ಪದಗಳನ್ನು ಪರಿಚಯಿಸುವುದು ಅಗತ್ಯ. ಪ್ರತಿಯೊಬ್ಬರು ನಿಘಂಟುನ್ನು ಕೊಂಡು ಓದಬೇಕು ಮಕ್ಕಳಿಗೂ ಓದಿಸಬೇಕು. ನಿಘಂಟಿನಲ್ಲಿ ಜಟಿಲ ಸಂಸ್ಕೃತ ಪದಕ್ಕೂ ಅರ್ಥ ತಿಳಿಸಲಾಗಿದೆ. ವಯಸ್ಸು ಲೆಕ್ಕಿಸದೇ ಮನಸ್ಸು ಮಾಡಿ ನಿಘಂಟು ರಚಿಸಿರುವುದು ಸಂತೋಷದ ವಿಷಯ.
-ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್‌, ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next