Advertisement

ಕರಡು ನಿಯಮಕ್ಕೆ ಆಕ್ಷೇಪಣೆ ಸಲ್ಲಿಸಲು ಸಜ್ಜಾದ ಶಿಕ್ಷಕರು

07:50 AM Sep 10, 2017 | Team Udayavani |

ಬೆಂಗಳೂರು: ಶಾಲಾ ಶಿಕ್ಷಕರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಎರಡು ತಿಂಗಳ ವಿಳಂಬದ ನಂತರ ಪ್ರಕಟಿಸಿರುವ ವರ್ಗಾವಣೆ ಕರಡು ಪ್ರತಿಗೆ ಆಕ್ಷೇಪಣೆ ಸಲ್ಲಿಸಲು ಶಿಕ್ಷಕರು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.

Advertisement

ಶಿಕ್ಷಕರು ತಮ್ಮಲ್ಲಿನ ಮಾಹಿತಿ ವಿನಿಯಮಕ್ಕಾಗಿ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಸಕ್ರಿಯರಾಗಿದ್ದಾರೆ. ತಮ್ಮಲ್ಲಿರುವ ಸಂದೇಶವನ್ನು ಈ ಮೂಲಕವೇ ಇನ್ನೊಬ್ಬ ಶಿಕ್ಷಕರಿಗೆ, ಶಿಕ್ಷಕರ ಗ್ರೂಪ್‌ಗೆ ರವಾನೆ ಮಾಡುತ್ತಿದ್ದಾರೆ. ವರ್ಗಾವಣೆ ಕರಡು ಪ್ರಕಟವಾಗುತ್ತಿದ್ದಂತೆ ಶಿಕ್ಷಕರೂ ಚುರುಕಾಗಿದ್ದು, ಆಕ್ಷೇಪಣೆಗೆ ಅರ್ಹವಾಗಿರುವ ಅಂಶಗಳನ್ನು ಪಟ್ಟಿಮಾಡಿ, ಶಿಕ್ಷಕರ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಿಗೆ ರವಾನೆ ಮಾಡಿ ಎಲ್ಲರಿಂದಲೂ ಅಭಿಪ್ರಾಯ ಮತ್ತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಎ ವಲಯದ ಶಿಕ್ಷಕರ ಪಟ್ಟಿಯಲ್ಲಿರುವ ಆಕ್ಷೇಪಣೆಯ ಹಲವು ಅಂಶಗಳು ಬಿ ಮತ್ತು ಸಿ ವಲಯದ ಶಿಕ್ಷಕರ ಆಕ್ಷೇಪಣೆಯ ಪಟ್ಟಿಯಲ್ಲಿ ಇಲ್ಲ. ಎಸ್‌ಎಸ್‌ಎ ಶಿಕ್ಷಕರು ಹಾಗೂ ಬೇರೆ ಬೇರೆ ವರ್ಗದ ಶಿಕ್ಷಕರು, ವಿಷಯವಾರು ಶಿಕ್ಷಕರು ಪ್ರತ್ಯೇಕ ಗ್ರೂಪ್‌ಗ್ಳನ್ನು ಮಾಡಿಕೊಂಡಿದ್ದಾರೆ. ವರ್ಗಾವಣೆ ಕರಡು ಪ್ರತಿಗೆ ಸಲ್ಲಿಸಬೇಕಾದ ಆಕ್ಷೇಪಣೆಗೆ ಸಂಬಂಧಿಸಿದಂತೆ ಶಿಕ್ಷಕರು ಸಾಮಾಜಿಕ ಜಾಲತಾಣವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

ಕರಡು ಹುಟ್ಟಿಸಿದ ಗೊಂದಲ:
ಸರ್ಕಾರ ಪ್ರಕಟಿಸಿರುವ ವರ್ಗಾವಣೆಯ ಕರಡು ಪರಿಶೀಲಿಸಿದ ಶಿಕ್ಷಕರಲ್ಲಿ  ಹತ್ತಾರು ಗೊಂದಲ ಸೃಷ್ಟಿಯಾಗಿದೆ. ಎ ವಲಯದಲ್ಲಿ ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿರುವ (ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನು ಹೊರತುಪಡಿಸಿ) ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡುವುದಾಗಿ ಹೇಳಿದೆ. ಆದರೆ,  ಪ್ರಮಾಣ ಎಷ್ಟು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖೀಸಿಲ್ಲ. ಕಡ್ಡಾಯ ವರ್ಗಾವಣೆ ಶೇ.5ರಷ್ಟಿದೆ. ಅದು ಎ ವಲಯದ ಶಿಕ್ಷಕರಿಗೇ ಮಾತ್ರವೇ ಎಂಬುದು ಗೊಂದಲಮಯವಾಗಿದೆ.

ಶೇ.5ರಷ್ಟು ಕಡ್ಡಾಯ ವರ್ಗಾವಣೆ ಎ ವಲಯದ ಶಿಕ್ಷಕರಿಗೆ ಮಾತ್ರ ಎಂಬುದು ಖಚಿತವಾದರೆ ಸುಮಾರು 2 ಸಾವಿರ ಅಥವಾ 2500 ಶಿಕ್ಷಕರು ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹೋಗಲಿದ್ದಾರೆ. ಇದರಿಂದ ದೊಡ್ಡ ವ್ಯತ್ಯಾಸ ಏನೂ ಆಗುವುದಿಲ್ಲ. ಕಾರಣ, ಮಹಾನಗರ ಪಾಲಿಕೆ, ನಗರ ಪಾಲಿಕೆ, ನಗರಸಭೆ, ಪುರಸಭೆ ಇತ್ಯಾದಿ ಎ ವಲಯದ ವ್ಯಾಪ್ತಿಗೆ ಬರುತ್ತದೆ ಎಂದು ಶಿಕ್ಷಕರು ಮಾಹಿತಿ ನೀಡಿದ್ದಾರೆ. ಶಿಕ್ಷಕರ ವರ್ಗಾವಣೆಯನ್ನು ಶೇ.8ರಿಂದ ಶೇ.15ಕ್ಕೆ ಏರಿಸಲಾಗಿದೆ ಎಂಬುದನ್ನು ಕರಡು ಪ್ರತಿಯಲ್ಲಿ ಉಲ್ಲೇಖೀಸಲಾಗಿದೆ. ಅದರಲ್ಲಿ ಶೇ.5ರಷ್ಟು ಕಡ್ಡಾಯ ವರ್ಗಾವಣೆ, ಶೇ.5ರಷ್ಟು ಘಟಕದ ಹೊರಗೆ ಹಾಗೂ ಶೇ.5ರಷ್ಟು ಘಟಕದ ಒಳಗೆ ಎಂಬದನ್ನು ತಿಳಿಸಿ, ಘಟಕದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಇದರಿಂದ ಎಷ್ಟು ಶಿಕ್ಷಕರಿಗೆ ಉಪಯೋಗ ಆಗಲಿದೆ ಎಂಬುದು ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರವೇ ತಿಳಿಯಬೇಕಿದೆ.

Advertisement

ಅಂತರ್‌ ಘಟಕದಲ್ಲಿ ವ್ಯತ್ಯಾಸವಿಲ್ಲ
ಅಂತರ್‌ ಘಟಕ ವರ್ಗಾವಣೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಈ ಪ್ರಮಾಣ ಕಳೆದ ವರ್ಷದಂತೆ ಶೇ.3ರಷ್ಟೇ ಇದೆ. ಸರ್ವಶಿಕ್ಷಾ ಅಭಿಯಾನದ ಶಿಕ್ಷಕರು ಸಮಾನ ಹುದ್ದೆಯನ್ನು ವರ್ಗಾವಣೆಯಲ್ಲಿ ತೆಗೆದುಕೊಳ್ಳುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದರ ಜತೆಗೆ ಕಳೆದ ವರ್ಷ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಸಾರ್ವಜನಿಕ ವರ್ಗಾವಣೆಯಲ್ಲಿ ಖಾಲಿ ಹುದ್ದೆ ದೊರೆಯದೇ ವರ್ಗಾವಣೆಯಿಂದ ವಂಚಿತರಾಗಿರುವ ಶಿಕ್ಷಕರಿಗೆ ಮತ್ತೆ ಅವಕಾಶ ದೊರೆಯುವ ಬಗ್ಗೆಯೂ ಯಾವುದೇ ಉಲ್ಲೇಖ ಇಲ್ಲ ಎಂಬುದು ಶಿಕ್ಷಕರ ನೋವಾಗಿದ್ದು, ಈ ಬಗ್ಗೆ ದಾಖಲೆ ಸಹಿತ  ಆಕ್ಷೇಪಣೆ ಸಲ್ಲಿಸಲು ಶಿಕ್ಷಕ ವರ್ಗ ಮುಂದಾಗಿದೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next