Advertisement

ನೇಲ್ಯಡ್ಕ ಶಾಲೆಗೆ ಶಿಕ್ಷಕರ ನೇಮಕಕ್ಕೆ ಆಗ್ರಹ

12:14 AM Aug 03, 2019 | Team Udayavani |

ಕಡಬ: ಐತೂರು ಗ್ರಾಮದ ನೇಲ್ಯಡ್ಕ ಸರಕಾರಿ ಹಿ.ಪ್ರಾ. ಶಾಲೆಗೆ ಅಗತ್ಯ ಶಿಕ್ಷಕರನ್ನು ನೀಡುವಂತೆ ಆಗ್ರಹಿಸಿ ಶಾಲಾಭಿವೃದ್ಧಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶಾಲೆಯ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲಲಿತಾ, ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಸಿಗುತ್ತಿಲ್ಲ. ಶಾಲೆಗೆ ಶಿಕ್ಷಕರನ್ನು ಕೊಡುವಂತೆ ಗ್ರಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿ ಕೂಡಲೇ ಶಾಲೆಗೆ ಅಗತ್ಯ ಶಿಕ್ಷಕರನ್ನು ಕೊಡುವಂತೆ ಒತ್ತಾಯಿಸಿದ್ದೇವೆ. ನಮ್ಮ ಬೇಡಿಕೆ ಈಡೇರಿಲ್ಲ ಎಂದು ದೂರಿದರು.

ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕೆ. ಮಾತನಾಡಿ, ಶಿಕ್ಷಕರ ಕೊರತೆಯಿಂದ ಇಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಪ್ರತೀ ವರ್ಷವೂ ಶಾಲೆ ಆರಂಭವಾದ ಬಳಿಕ ನಾವು ಪ್ರತಿಭಟನೆ ಮಾಡಿಯೇ ಶಿಕ್ಷಕರನ್ನು ಪಡೆದುಕೊಳ್ಳುವ ಪರಿಸ್ಥಿತಿ ಇದೆ. ಶಿಕ್ಷಣಾಧಿಕಾರಿ ನಮಗೆ ಭರವಸೆ ನೀಡಿದಂತೆ ನಡೆದುಕೊಂಡಿಲ್ಲ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಲೇ ಶಾಲೆಗೆ ವಿದ್ಯಾರ್ಥಿಗಳು ಕಡಿಮೆಯಾಗಲು ಕಾರಣ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡದಿದ್ದರೆ ಹೆತ್ತವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ನೇಲ್ಯಡ್ಕ ಶಾಲೆಗೆ ಖಾಲಿ ಇರುವ ಹುದ್ದೆಗಳಿಗೆ ಖಾಯಂ ಶಿಕ್ಷಕರ ನೇಮಕವಾಗಬೇಕು. ಇಲ್ಲದೇ ಹೋದರೆ ನಿಯೋಜನೆ ಮೇಲಾದರೂ ಶಿಕ್ಷಕರನ್ನು ಕಳುಹಿಸಬೇಕು ಎಂದು ಆಗ್ರಹಿಸಿದರು.

ಗ್ರಾ.ಪಂ. ಸದಸ್ಯ ಶ್ರೀಧರ ಸುಳ್ಯ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರಿಲ್ಲದೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಜಿ.ಪಂ. ಸದಸ್ಯರು ಇಲ್ಲಿಗೆ ಭೇಟಿ ನೀಡದೆ ಸಮಸ್ಯೆಯ ಬಗ್ಗೆ ಹೆತ್ತವರೊಂದಿಗೆ ಚರ್ಚಿಸದೆ, ಏಕಾಏಕಿ ಪತ್ರಿಕಾ ಹೇಳಿಕೆ ನೇಲ್ಯಡ್ಕ ಶಾಲೆಯ ಶಿಕ್ಷಕರ ಕೊರತೆ ನೀಗಿಸಲಾಗಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ ಎಂದು ಆರೋಪಿಸಿದರು.

ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಪಿ. ಜಾನ್‌, ಗ್ರಾಮಾಭಿವೃದ್ಧಿ ಯೋಜನೆ ಐತೂರು ಎ. ಒಕ್ಕೂಟದ ಅಧ್ಯಕ್ಷ ರಘುರಾಮ್‌ ಭಟ್ ಮಾತನಾಡಿ, ಕೂಡಲೇ ಅಗತ್ಯ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚೆನ್ನಪ್ಪ, ಹಿರಿಯ ಮುಖಂಡರಾದ ನಾರಾಯಣ ರೈ ಅತ್ಯಡ್ಕ, ತಮ್ಮಯ್ಯ ಗೌಡ ಸುಳ್ಯ, ಎಸ್‌ಡಿಎಂಸಿ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು.

Advertisement

ಶಾಸಕ ಅಂಗಾರ ಭೇಟಿ
ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್‌. ಅಂಗಾರ ಪ್ರತಿಭಟನ ನಿರತರ ಜತೆಗೆ ಮಾತುಕತೆ ನಡೆಸಿದರು.
ವಿದ್ಯಾಂಗ ಉಪನಿರ್ದೇಶಕ (ಡಿಡಿಪಿಐ)ರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು. ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಎಪಿಎಂಸಿ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಸದಸ್ಯರಾದ ಪುಲಸ್ತಾ ರೈ, ಮೇದಪ್ಪ ಗೌಡ ಡೆಪ್ಪುಣಿ, ಪಿ.ಎಲ್‌.ಡಿ. ಬ್ಯಾಂಕಿನ ಅಧ್ಯಕ್ಷ ಎ.ಬಿ. ಮನೋಹರ್‌ ರೈ, ಕಡಬ ಸಿ.ಎ. ಬ್ಯಾಂಕ್‌ ಅಧ್ಯಕ್ಷ ರಮೇಶ್‌ ಕಲ್ಪುರೆ, ವಾಡ್ಯಪ್ಪ ಗೌಡ ಎರ್ಮಾಯಿಲ್‌ ಶಾಸಕರ ಜತೆಗಿದ್ದರು.

ಬಂಟ್ರ ಕ್ಲಸ್ಟರ್‌ ಮುಖ್ಯಸ್ಥ ಪೊಡಿಯ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನನಿರತರೊಂದಿಗೆ ಚರ್ಚಿಸಿ, ಇಲಾಖೆಯ ಮೇಲಧಿಕಾರಿಗಳಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಪ್ರತಿಭಟನೆ ಕೈಬಿಡಲು ವಿನಂತಿಸಿದರು. ಆದರೆ ಪ್ರತಿಭಟನಾನಿರತರು ಅದಕ್ಕೆ ಒಪ್ಪಲಿಲ್ಲ.

ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟನೆಗೆ ನಿರ್ಧಾರ
ಶಾಲೆಗೆ ಇನ್ನೊಬ್ಬ ಖಾಯಂ ಶಿಕ್ಷಕರನ್ನು ನೀಡುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಪ್ರತಿಭಟನಕಾರರು ಮಧ್ಯಾಹ್ನದ ಅಡುಗೆಯನ್ನೂ ಪ್ರತಿಭಟನ ಸ್ಥಳದಲ್ಲಿಯೇ ತಯಾರಿಸಿ ಊಟ ಮಾಡಿ, ದಿನವಿಡೀ ಪ್ರತಿಭಟನೆ ನಡೆಸಿದರು. ಶಾಲಾ ವಠಾರವಾದ ಕಾರಣ ಮಕ್ಕಳಿಗೆ ಪಾಠಕ್ಕೆ ತೊಂದರೆಯಾಗಬಾರದೆಂದು ಯಾವುದೇ ಘೋಷಣೆಗಳನ್ನು ಕೂಗದೇ ಮೌನವಾಗಿ ಪ್ರತಿಭಟನೆಯನ್ನು ನಡೆಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹ ವ್ಯಕ್ತಪಡಿಸಿದರು. ಸಂಜೆಯ ತನಕ ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಶನಿವಾರ (ಆ. 3) ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ಮುಂದುವರಿಸುವುದಾಗಿ ವಿದ್ಯಾರ್ಥಿಗಳ ಹೆತ್ತವರು ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next