ಶಿಕ್ಷಕರು ನಮ್ಮ ಜೀವನದ ಅವಿಭಾಜ್ಯ ಅಂಗ. ನಮಗೆ ತಂದೆತಾಯಿ ಜನ್ಮವನ್ನು ನೀಡಿದ್ದರೆ, ನಮ್ಮ ಜೀವನವನ್ನು ಸರಿಯಾಗಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಒಂದು ಕಲ್ಲು ಶಿಲೆಯಾಗಲು ಹೇಗೆ ಶಿಲ್ಪಿಯ ಸಹಾಯವಿರತ್ತೋ ಹಾಗೆಯೇ ಒಬ್ಬ ವಿದ್ಯಾರ್ಥಿಯು ಸನ್ನಡತೆಯ ಮಾರ್ಗದಲ್ಲಿ ನಡೆಯಬೇಕೆಂದರೆ ಶಿಕ್ಷಕರು ಇರಲೇಬೇಕು.
ಶಿಕ್ಷಕರು ಪಾಠ ಹೇಳುವುದಷ್ಟೇ ಅಲ್ಲದೆ ಮಕ್ಕಳ ದುಃಖಗಳಿಗೆ ಕಿವಿಗೊಟ್ಟು ಸಮಸ್ಯೆಯನ್ನು ಪರಿಹರಿಸುತ್ತಾರೆ. ಮಕ್ಕಳ ಸಂತೋಷಕ್ಕಾಗಿ ಸದಾ ಶ್ರಮಿಸುತ್ತಾರೆ. ಅಂತಹ ಶಿಕ್ಷಕರಿಗೆ ಮೀಸಲಾದ ದಿನವೇ ಶಿಕ್ಷಕರ ದಿನ. ಇಂತಹ ಸಂದರ್ಭದಲ್ಲಿ ನನ್ನ ಬಾಲ್ಯದ ದಿನದ ಶಿಕ್ಷಕರ ದಿನಾಚರಣೆಯ ಬಗ್ಗೆ ಹೇಳಲು ಬಯಸುತ್ತೇನೆ.
ಅಂದು ಶಿಕ್ಷಕರ ದಿನಾಚರಣೆ. ನಾವೆಲ್ಲರೂ ಗಡಿಬಿಡಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಓಡಾಡುತ್ತಿದ್ದೆವು. ಎಲ್ಲಾ ಕಡೆ ಝಗಝಗ ಮಿಂಚುವ ಬೆಳಕಿತ್ತು. ಹೂವಿನ ಅಲಂಕಾರ ತುಂಬಿತ್ತು. ನಾವೆಲ್ಲರೂ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ತಯಾರಿ ನಡೆಸಿದ್ದೆವು. ನೃತ್ಯಕ್ಕೆಲ್ಲ ಸಿದ್ಧರಾಗಿದ್ದೆವು.
ಶಿಕ್ಷಕರಿಗೆ ಶುಭಾಶಯ ತಿಳಿಸಿದ್ದೂ ಆಗಿದೆ. ಕಾರ್ಯಕ್ರಮ ಶುರುವಾಗುವ ಸಮಯ. ನಾವೆಲ್ಲಾ ಖುಷಿಯಿಂದ ಶಿಕ್ಷಕರನ್ನು ಸ್ವಾಗತಿಸಿದೆವು. ಎಲ್ಲರೂ ನೃತ್ಯ ಮಾಡಿದರು. ನಾವೂ ಅಷ್ಟೇ ಸಂತೋಷದಿಂದ ಕುಣಿದೆವು. ಇನ್ನೇನು ದಿನಾಚರಣೆಯ ಕಾರ್ಯಕ್ರಮ ಮುಗಿಯಬೇಕು ನಮಗೊಂದು ಆಶ್ಚರ್ಯ ಕಾದಿತ್ತು.
ಎಲ್ಲಾ ಶಿಕ್ಷಕರು ಒಬ್ಬರಾದ ಮೇಲೆ ಒಬ್ಬರು ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ವೇದಿಕೆಯ ಮೇಲೆ ಬರುತ್ತಿದ್ದರು. ಅದೂ ಪ್ಯಾಂಟು-ಶರ್ಟು, ತಲೆಗೊಂದು ಟೋಪಿ. ಅವರಲ್ಲೊಬ್ಬರು ಎಲ್ಲರಿಗಿಂತಲೂ ಹಿರಿಯ ಶಿಕ್ಷಕಿ ಇದ್ದರು. ಅವರೂ ಪ್ಯಾಂಟ್‌ಶರ್ಟ್ ಧರಿಸಿ ಬಂದಿದ್ದರು. ನೋಡ ನೋಡುತ್ತಿದ್ದಂತೆಯೇ ಅವರು ನಮಗೋಸ್ಕರ ನೃತ್ಯವನ್ನು ಮಾಡತೊಡಗಿದರು. ಹಾಡು ಹಾಡಿದರು. ನಾವೆಲ್ಲರೂ “ಒನ್ಸ್ ಮೋರ್’ ಎಂದು ಕಿರುಚಿದ್ದೇ ಕಿರುಚಿದ್ದು. ನಮ್ಮನ್ನೆಲ್ಲ ವೇದಿಕೆಯ ಮೇಲೆ ಬರುವಂತೆ ಹೇಳಿದರು. ಎಲ್ಲರೂ ವೇದಿಕೆಗೆ ಓಡಿಹೋಗಿ ಶಿಕ್ಷಕರೊಂದಿಗೆ ಜೊತೆಯಾಗಿ ಕುಣಿದೆವು. ನಮ್ಮ ಅಧ್ಯಾಪಕರು ನಮ್ಮೊಂದಿಗೆ ತಾವೂ ಚಿಕ್ಕ ಮಕ್ಕಳಾಗಿ ಬಿಟ್ಟರು. ಸಂತೋಷದಿಂದ ಎಲ್ಲರೂ ಒಟ್ಟಿಗೆ ನಲಿದೆವು.
ಆ ದಿನ ಒಂದು ಮರೆಯಲಾಗದ ಕ್ಷಣ. ಮಕ್ಕಳೂ ನೃತ್ಯ ಮಾಡಿದ್ದಲ್ಲದೆ ಒಂದು ಬದಲಾವಣೆ ಇರಲಿ, ಮಕ್ಕಳು ಸಂತೋಷವಾಗಿರಲಿ ಎಂದು ಬಯಸಿದ ನಮ್ಮ ಶಿಕ್ಷಕರು ತಾವು ದಿನಾ ಬಳಸುತ್ತಿದ್ದ ಉಡುಗೆತೊಡುಗೆಯನ್ನು ಬಿಟ್ಟು ಬರೀ ಮಕ್ಕಳ ಸಂತೋಷಕ್ಕೋಸ್ಕರ ಎಂದೂ ನೃತ್ಯ ಮಾಡದವರು ಆ ದಿನ ನೃತ್ಯ ಮಾಡಿದಾಗ ಕಣ್ತುಂಬಿ ಬಂತು. ನಾವೆಲ್ಲರೂ ಧನ್ಯರಾದೆವೆಂದು ಆಗ ಅನ್ನಿಸಿತು.
ಹೀಗೆ ಶಿಕ್ಷಕರು ಬರೀ ಪಾಠ ಮಾಡುವುದಲ್ಲದೆ ನಿಸ್ವಾರ್ಥ ಸೇವೆಯನ್ನು ಮಾಡುತ್ತಾರೆ. ಮಕ್ಕಳೆಲ್ಲರೂ ಗುರಿಮುಟ್ಟುವವರೆಗೆ ಅವರ ಜೊತೆಗಿದ್ದು, ಶಕ್ತಿ ತುಂಬುತ್ತಾರೆ. ಅವರ ಕೆಲಸ ಅಷ್ಟು ಸುಲಭವಲ್ಲ. ಇಡೀ ದಿನ ನಿಂತು ಪಾಠ ಮಾಡಿ ಮಕ್ಕಳ ಏಳಿಗೆಯನ್ನೇ ಸದಾ ಬಯಸುತ್ತಾರೆ. ಶಿಕ್ಷಕ ವೃತ್ತಿ ಎಲ್ಲದಕ್ಕಿಂತಲೂ ಶ್ರೇಷ್ಠವಾದದ್ದು. ಮಕ್ಕಳಾದವರು ಅವರನ್ನು ಸದಾ ಗೌರವಿಸಿದರೆ, ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ.
ಚೈತ್ರಾ
ದ್ವಿತೀಯ ಬಿ. ಕಾಂ. , ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು, ಕಟೀಲು