ಕೆಜಿಎಫ್: ಶಿಕ್ಷಕರ ದಿನಾಚರಣೆ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಮತ್ತು ಶಿಕ್ಷಕರ ಸಂಘಟನೆಗಳ ನಡುವಿನ ವೈಮನಸ್ಯ ಇನ್ನೂ ಮುಂದುವರಿದಿದೆ. ಇದಕ್ಕೆ ಇಲ್ಲಿನ ಬೆಮಲ್ ನಗರದಲ್ಲಿ ನಡೆದ ಪ್ರತಿಭಾ ಕಾರಂಜಿ ಸಾಕ್ಷಿಯಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ನಿರಂಕುಶ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅವರು ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ. ಎಲ್ಲಾ ಕಡೆ ಶಿಕ್ಷಕರ ದಿನ ಆಚರಣೆ ಮಾಡಿದ್ದರೂ, ಇಲ್ಲಿ ಮಾತ್ರ ಮಾಡಿಲ್ಲ. ಯಾವುದೇ ರೀತಿಯ ಸಹಕಾರ ನೀಡದೆ ಶಿಕ್ಷಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಇಒ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ದಿನಾಂಕ ಬದಲು: ಪ್ರತಿಭಾ ಕಾರಂಜಿ ಮುನ್ನ ಜಿಪಂ ಸದಸ್ಯೆ ಅಶ್ವಿನಿ, ಆಹ್ವಾನ ಪತ್ರಿಕೆ ನೀಡುವಂತೆ ಅಶೋಕ್ ಅವರನ್ನು ಕೇಳಿದರು. ಶಿಷ್ಠಾಚಾರ ಇಲ್ಲದೆ, ಆಹ್ವಾನ ಪತ್ರಿಕೆ ತಯಾರು ಮಾಡಲಾಗಿದೆ. ಶಿಕ್ಷಕರ ದಿನಾಚರಣೆ ಯನ್ನು ರೆಡ್ಡಿ ಕಲ್ಯಾಣ ಮಂಟಪದಲ್ಲಿ ಮಾಡಬೇಕೆಂದು ತೀರ್ಮಾನವಾಗಿದ್ದರೂ, ಬೆಮಲ್‌ನಲ್ಲಿ ಮಾಡಲು ಮುಂದಾಗಿದ್ದಾರೆ. ದಿನಾಂಕವನ್ನೂ ಬದಲು ಮಾಡಿದ್ದಾರೆ ಎಂದು ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದರು.
ಒಪ್ಪಿಗೆ ನೀಡಿದ್ದಾರೆ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿರೆಡ್ಡಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಶಿಕ್ಷಕರ ದಿನಾಚರಣೆ ಬಗ್ಗೆ ವಿವರ ನೀಡಿದರು. ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ರೆಡ್ಡಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಆದರೆ, ಬಿಇಒ ಬೇಕಾಬಿಟ್ಟಿ ಮಾಡಿದ್ದಾರೆ ಎಂದು ದೂರಿದರು. ಜಿಪಂ ಸದಸ್ಯೆ ಅಶ್ವಿನಿ ಮಾತನಾಡಿ, ಬೇಕಾಬಿಟ್ಟಿ ಮಾಡುವುದಾದರೆ ನಾನು ಸಮ್ಮನಿರುವುದಿಲ್ಲ ಎಂದು ಅಶೋಕ್ ಅವರ ಮೇಲೆ ಹರಿಹಾಯ್ದರು. ರೆಡ್ಡಿ ಕಲ್ಯಾಣ ಮಂಟಪ ಸಿಗಲಿಲ್ಲ. ಆದ್ದರಿಂದ ಬೆಮಲ್ ಕಲಾಕ್ಷೇತ್ರದಲ್ಲಿ ಮಾಡಲು ಕೇಳಿದೆ. ಅದಕ್ಕೆ ಎಂಎಲ್‌ಎ ಒಪ್ಪಿಗೆ ನೀಡಿ ದ್ದಾರೆ ಎಂದು ಅಶೋಕ್ ತಿಳಿಸಿದರು.
ಆಹ್ವಾನ ಪತ್ರಿಕೆ ನೀಡಿಲ್ಲ: ಮುಖಂಡ ವಿನೋದ್ ಕುಮಾರ್ ಮಾತನಾಡಿ, ನಮ್ಮ ಸಂಘಟನೆಗಳು ದುಡ್ಡು ಹಾಕಿ ಶಿಕ್ಷಕರ ದಿನಾಚರಣೆ ಮಾಡುತ್ತೇವೆ. ನಾವು ನಮ್ಮ ಶಾಸಕರ ಉಪಸ್ಥಿತಿಯಲ್ಲಿ ಮಾಡುತ್ತಿದ್ದೇವು. ಊಟದ ವ್ಯವಸ್ಥೆ ಶಾಸಕರೇ ಮಾಡುತ್ತಿದ್ದರು. ಬಿಇಒ ಇದುವರೆಗೂ ಆಹ್ವಾನ ಪತ್ರಿಕೆ ನೀಡಿಲ್ಲ. 20 ವರ್ಷಗಳ ಇತಿಹಾಸದಲ್ಲಿ ಇಂತಹ ಆಹ್ವಾನ ಪತ್ರಿಕೆ ಮಾಡಿಲ್ಲ ಎಂದು ಬಿಇಒ ಮೇಲೆ ದೂರಿದರು. ಅವಮಾನ ಮಾಡುವ ಉದ್ದೇಶ: ಶಿಕ್ಷಕರ ದಿನಾಚರಣೆ ನಮ್ಮ ಹಕ್ಕು. ಬಿಇಒ ಕಚೇರಿಯಿಂದ ಹತ್ತು ಸಾವಿರ ರೂ. ಕೊಡುತ್ತಿದ್ದರು. ಮಿಕ್ಕ ಹಣವನ್ನು ನಾವೇ ಹಾಕಿ ಕೊಂಡು ಮಾಡುತ್ತಿದ್ದೆವು. ಬಿಇಒ ಎಲ್ಲಾ ಶಿಕ್ಷಕರ ಸಂಘ ಟನೆಗಳಿಗೆಅವಮಾನ ಮಾಡುವ ಉದ್ದೇಶವನ್ನೇ ಹೊಂದಿದ್ದಾರೆ. ಆಹ್ವಾನ ಪತ್ರಿಕೆ ಇಲ್ಲದೆ ಗಣ್ಯರನ್ನು ಯಾವ ಮುಖ ಇಟ್ಟುಕೊಂಡು ಕರೆಯುವುದು ಎಂದು ತರಾಟೆಗೆ ತೆಗೆದುಕೊಂಡರು.
ಅವಮಾನ ಆಗುವುದು ಬೇಡ: ಮಧ್ಯಪ್ರವೇಶಿಸಿ ಮಾತನಾಡಿದ ಅಶ್ವಿನಿ, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಿಮ್ಮ ಕೆಲಸ ಸರಿಯಾಗಿ ಮಾಡುತ್ತಿಲ್ಲ. ಪದಾಧಿಕಾರಿಗಳನ್ನು, ಶಿಕ್ಷಕರನ್ನು ಅವಮಾನ ಮಾಡುವ ರೀತಿಯಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದು ಬೇಡ. ನಿಮ್ಮ
ಧೋರಣೆಯನ್ನು ಇತರರ ಮೇಲೆ ಹೇರಬೇಡಿ. ಕೆಜಿಎಫ್ ಬಿಟ್ಟು ಬೇರೆಡೆ ಯಾಕೆ ಮಾಡುತ್ತಿದ್ದೀರಿ ಎಂದು ಅಶೋಕ ಅವರನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಕರ ದಿನಾಚರಣೆ ಇನ್ನು ಒಂದೇ ದಿನ ಇದೆ.
ಯಾವುದೇ ವ್ಯವಸ್ಥೆ ಆಗಿಲ್ಲ. ಶಿಕ್ಷಕರಿಲ್ಲದೆ ಶಿಕ್ಷಕರ ದಿನಾ ಚರಣೆ ಮಾಡುತ್ತೀರ ಮಾಡಿ ಎಂದು ಅಶ್ವಿನಿ
ಶಿಕ್ಷಕರ ಸಂಘದ ಪ್ರತಿನಿಧಿಗಳ ಪರವಾಗಿ ಮಾತನಾಡಿದರು.
ಖಂಡನೆ: ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಧೋರಣೆಯನ್ನು ಜಿಪಂ ಸದಸ್ಯ ಬಿ.ವಿ.ಮಹೇಶ್ ಕೂಡ ಖಂಡಿಸಿದರು. ನೀವು ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಕರ ದಿನಾಚರಣೆ ಮಾಡಬೇಕು. ತಹಶೀಲ್ದಾರರನ್ನು ಖುದ್ದಾಗಿ ಭೇಟಿ ಮಾಡಿ ಎಲ್ಲರನ್ನೂ
ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಕರ ದಿನಾಚರಣೆ ಮಾಡಿ ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿರೆಡ್ಡಿ ಮಾತನಾಡಿ, ಶಿಕ್ಷಕರ ದಿನಾಚರಣೆಗೆ ನಾವು ಬರಲ್ಲ ಎಂದರು. ನಂತರ ಸೆ.24ರಂದು ಶಿಕ್ಷಕರ ದಿನವನ್ನು ರಾಬರ್ಟಸನ್‌ಪೇಟೆಯಲ್ಲಿ ಮಾಡಲು ತೀರ್ಮಾನಿಸಲಾಯಿತು.