Advertisement

ಕೇಳದಾಗಿದೆ ಚಿಣ್ಣರ ಕಲರವ….ಶಾಲೆಗಳಿಂದು ಹೂವುಗಳಿಲ್ಲದ ಕೈತೋಟವಾಗಿದೆ

05:55 PM Sep 05, 2020 | Nagendra Trasi |

ಕೋವಿಡ್ ಮಹಾ ಮಾರಿ ಇಂದು ತನ್ನ ಕ್ರೂರ ಬಾಹುವನ್ನು ಎಲ್ಲೆಡೆ ಪಸರಿಸಿದೆ. ಅದರಲ್ಲೂ ನಮ್ಮ ಶಿಕ್ಷಣ ಕ್ಷೇತ್ರವನ್ನು ಇದು ಬಹಳವಾಗಿ ಕಾಡಿದೆ. ಎಂದೂ ಘಟಿಸದ ಘಟನಾವಳಿಯಿಂದ ಶಿಕ್ಷಕ, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮವಸ್ತ್ರವನ್ನು ತೊಟ್ಟು, ಬೆನ್ನ ಮೇಲೆ ಬ್ಯಾಗನ್ನು ಇಟ್ಟು, ನೂರು ಕನಸುಗಳನ್ನು ಹೊತ್ತು ಬರುವ ಬಾಲ ಭಾಷಿಗರಿಲ್ಲದೆ ಬರಿದೆ ಬಣಗುಡುತ್ತಿರುವ ಶಾಲೆಗಳನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಚಿಣ್ಣರ ಚಿಲಿಪಿಲಿಯ ನಿನಾದವು ಮರೆಯಾಗಿ , ಖಾಲಿ ಕೋಣೆಯ ಒಳಗೆ ಕೇಳುತ್ತಿವುದು ಇಂದು ಬರಿಯ ಮೌನರಾಗ. ಜಾತಿ ಬೇಧವನ್ನು ಮರೆತು, ನಲಿಯುತ್ತಾ ಸಹಪಾಠಿಗಳ ಜೊತೆಗೆ ಬಂದು, ವಿದ್ಯೆಯನ್ನು ಕಲಿಯುವ ಕಣ್ಮಣಿಗಳು ಕಾಣೆಯಾಗಿಹುದು ವ್ಯಥೆಯನ್ನು ತರಿಸಿದೆ.

Advertisement

ಭವ್ಯ ಭವಿಷತ್ತಿಗಾಗಿ ಕನವರಿಸುವ ಕನಸುಗಳನ್ನು ಹೊತ್ತ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಕಾಣದೆ ಕಂಬನಿ ಮಿಡಿಯುತ್ತಿದೆ ಮನಸ್ಸು. ಮಿಸ್, ಮೇಡಂ, ಸರ್ ಗಳೆಂಬ ಕಿವಿಗೆ ಇಂಪು, ಮನಸಿಗೆ ಮುದವನ್ನು ನೀಡುವ ಶಬ್ದಗಳ ಸಂಚಾರವಿಲ್ಲದೆ, ಹೂವುಗಳಿಲ್ಲದ ಕೈತೋಟವಾಗಿದೆ ಶಾಲೆಗಳಿಂದು. ಹಾಲುಗಲ್ಲದ ಹಸುಳೆಗಳ ಗೈರು ಹಾಜರಿಯಲ್ಲಿ ನಿಸ್ತೇಜ, ನಿಶ್ಯಬ್ದವಾಗಿ ನಿಂತ ಸರಸ್ವತಿಯ ದಿವ್ಯ ಆಲಯವನ್ನು ನೋಡಿ ಅರಗಿಸಿಕೊಳ್ಳಲಾಗುತ್ತಿಲ್ಲ.

ತರಗತಿಯ ಕೋಣೆಯಲ್ಲಿ ಕೇಳಿಸದ ಕಂದಮ್ಮರುಗಳ ಕಲರವದಕೇಳಿಸದಾ, ಬೆಂಚು, ಬೋರ್ಡು,ಮತ್ತು ನನ್ನ ಮನಸ್ಸು ಬೇಸರ ಗೊಂಡಿದೆ. ಆಟ, ಪಾಠ, ಸಹಪಠ್ಯ ಚಟುವಟಿಕೆಗಳ ಚೆಲುವೆ ಇಲ್ಲದೆ, ವಾಸ್ತವ್ಯವಿರದ ಕಳೆಗುಂದಿದ ಕುಟೀರವಾಗಿದೆ ನನ್ನ ಮನಸ್ಸು ಮತ್ತು ಶಾಲೆ. ಮಕ್ಕಳ ಅನುಪಸ್ಥಿತಿಯಲ್ಲಿ ಪಾಠದ ಸಾರಾಂಶವನ್ನು ವಿಡಿಯೋ ರೂಪದಲ್ಲಿ ಕಳುಹಿಸುತಿದ್ದು, ಇದು ತರಗತಿಯಲ್ಲಿ ನಡೆಯುವ ಚಟುವಟಿಕೆ ಸಹಿತ ಪಾಠಕ್ಕೆ ವ್ಯತಿರಿಕ್ತವಾಗಿದೆ.

ಆದರೆ ಅನ್ಯ ಮಾರ್ಗವಿಲ್ಲ. ದಿನಾಲೂ ಮನಸ್ಸು ಭವಿತವ್ಯದ ಭಾವಿ ಪ್ರಜೆಗಳ ದರ್ಶನಕ್ಕೆ ಬಹಳ ಹಂಬಲಿಸುತ್ತದೆ. ಮುಗ್ದ ಮನದ ಮುದ್ದು ಮಕ್ಕಳು, ಅವರ ಬಾಲ ಭಾಷೆ, ಶಾಲೆಯ ಮನೋಹರವಾದ ವಾತಾವರಣವನ್ನು ನಾನು ತುಂಬಾ ಕಳೆದುಕೊಂಡಿದ್ದೆನೆ. ಚಿಣ್ಣರ ಚಿಲಿಪಿಲಿಯನ್ನು ಮತ್ತೆ ಕೇಳಲು ಮನಸ್ಸು ಹಪಹಪಿಸುತ್ತಿಹುದು. ಮತ್ತೆ ರಾರಾಜಿಸಲಿ ಭವಿಷತ್ ಬದುಕಿನ ರಾಯಭಾರಿಗಳ ಉತ್ಸಾಹದ ಮೆರವಣಿಗೆ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ.

ರಾಘವೇಂದ್ರ. ಡಿ ಶಿರೂರು
ಶಿಕ್ಷಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next