Advertisement

Teachers’ Day: ಚಂದ್ರಲೋಕವಿರಲಿ; ಜ್ಞಾನಲೋಕಕ್ಕೆ ಕಳುಹಿಸುವವರು ಬೇಕು

12:34 AM Sep 05, 2023 | Team Udayavani |

” ಓಂ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರ್‌ ಉನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ‘
ಅಂದರೆ ಅಜ್ಞಾನವೆಂಬ ಅಂಧಕಾರದಿಂದ ಕುರುಡ ನಾದವನ ಕಣ್ಣನ್ನು ಗುರುವು ಜ್ಞಾನದ ದೀಪದಿಂದ ತೆರೆಯು ತ್ತಾನೆ. ಅಂಥ ಗುರುವಿಗೆ ನಮನ.

Advertisement

ಚಿಕ್ಕ ವಯಸ್ಸಿಗೆ ಶಿಕ್ಷಣದ ಮಹತ್ವವನ್ನು ಜಗತ್ತಿಗೆ ಸಾರಿದ ಮಲಾಲಾ ಯೂಸುಫ್ ಜಾಯ್‌ ಹೇಳುವಂತೆ ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು ಮತ್ತು ಒಬ್ಬ ಶಿಕ್ಷಕ ಜಗತ್ತನ್ನು ಬದಲಾಯಿಸಬಹುದು. ಅಂತಹ ಜಗತ್ತನ್ನು ಬದಲಾಯಿಸುವ ಶಕ್ತಿಯುಳ್ಳ ಶಿಕ್ಷಕರನ್ನು ಗೌರವಿಸಿ ಸಂಭ್ರಮಿಸುವ ದಿನ ಇಂದು ಸೆಪ್ಟಂಬರ್‌ 5, ಶಿಕ್ಷಕರ ದಿನಾಚರಣೆ. ಮಾಜಿ ರಾಷ್ಟ್ರಪತಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಹುಟ್ಟಿದ ದಿನ.

ದೇಶದ ಎರಡನೇ ರಾಷ್ಟ್ರಪತಿ, ಶ್ರೇಷ್ಠ ಶಿಕ್ಷಕ, ತಣ್ತೀಜ್ಞಾನಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಸ್ಮರಣಾರ್ಥ 1962ರಿಂದ ಅವರ ಹುಟ್ಟಿದ ದಿನವನ್ನು° ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ತಮಿಳುನಾಡಿನ ತಿರುತ್ತಣಿಯಲ್ಲಿ 1888, ಸೆಪ್ಟಂಬರ್‌ 5ರಂದು ಜನಿಸಿದ ರಾಧಾಕೃಷ್ಣನ್‌ ಅವರು ಶಿಕ್ಷಣ ಕ್ರಾಂತಿಗೆ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದವರು. ತಮ್ಮ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಿ ವಿಜೃಂಭಿಸು ವವರ ಮಧ್ಯೆ ಡಾ| ರಾಧಾಕೃಷ್ಣನ್‌ನಂಥವರು ಅಪವಾದ. “ನನ್ನ ಜನ್ಮದಿನ ಆಚರಿಸುವುದಾದರೆ ಶಿಕ್ಷಕರ ದಿನಾಚರಣೆಯಾಗಿ ಆಚರಿಸಿ’ ಎಂದವರು ಡಾ| ರಾಧಾಕೃಷ್ಣನ್‌ ಅವರು.

ದೇಶದಲ್ಲೂ ಶಿಕ್ಷಣ ಪದ್ಧತಿಗಳಲ್ಲಿ ಸಾಕಷ್ಟು ಬದಲಾವಣೆ ಗಳು ಘಟಿಸಿವೆ. ಹಿಂದೆ ಗುರುಕುಲ ಪದ್ಧತಿ ಚಾಲ್ತಿಯಲ್ಲಿತ್ತು. ವಿದ್ಯಾರ್ಥಿಗಳೇ ಗುರುಗಳ ಬಳಿ ತೆರಳಿ ವಿದ್ಯಾಭ್ಯಾಸ ಮಾಡ ಬೇಕಿತ್ತು. ಕ್ರಮೇಣ ಶಾಲೆಗಳು ಆರಂಭವಾದವು. ಶಿಕ್ಷಕರು ವಿದ್ಯಾರ್ಥಿಗಳು ಒಂದೆಡೆ ಸೇರಿಸಿ ಬೋಧಿಸುವ ಪ್ರಕ್ರಿಯೆ ಚಾಲ್ತಿಗೆ ಬಂದಿತು. ಈಗ ಆನ್‌ಲೈನ್‌ ಇತ್ಯಾದಿ ಶಿಕ್ಷಣ ಪದ್ಧತಿಗಳು ಜಾರಿಗೆ ಬಂದಿವೆ. ಯಾರು ಎಲ್ಲಿ ಕುಳಿತಾದರೂ ಪಾಠ ಕೇಳಬಹುದು, ಶಿಕ್ಷಕರ ಎದುರೇ ಕುಳಿತು ಪಾಠ ಕೇಳಬೇಕಾದ ಅನಿವಾರ್ಯತೆ ಇಲ್ಲ. ಆದ ಕಾರಣವೋ ಏನೋ ರಾಷ್ಟ್ರದ ಭವಿಷ್ಯ ತರಗತಿ ಕೊಠಡಿಯೊಳಗೆ ನಿರ್ಣಯವಾಗುತ್ತದೆ ಎಂಬ ಮಾತನ್ನು ಸಂಪೂರ್ಣವಾಗಿ ಒಪ್ಪುವಂತಿಲ್ಲ. ಹಾಗೆಂದ ಮಾತ್ರಕ್ಕೆ ಇಲ್ಲವೇ ಇಲ್ಲ ಎಂದಲ್ಲ. ವಿದ್ಯಾರ್ಥಿ ಎದುರು ಈಗ ಆಯ್ಕೆಗಳ ಮೂಟೆಗಳಿವೆ. ಪದ್ಧತಿಯಿಂದ ಹಿಡಿದು ವಿಷಯ, ಮಾಧ್ಯಮ, ಶಾಲೆವರೆಗೂ ಆಯ್ಕೆಗಳಿವೆ. ಆದರೆ ಈ ಆಯ್ಕೆಯ ಸಂತೆಯಲ್ಲಿ ವಿದ್ಯಾರ್ಥಿ ಗುರುವಿನ ಸಖ್ಯದಿಂದ ದೂರಾಗುತ್ತಿದ್ದಾನೆ. ಅಂಗೈಯಲ್ಲಿ ಏನನ್ನಾದರೂ ಕಲಿಯಬಹುದು. ಹಾಗಾದರೆ ಸ್ವ ಸಾಮರ್ಥ್ಯದಿಂದ ಕಲಿಯುವ ಏಕಲವ್ಯರಾಗುತ್ತಿದ್ದಾರೆಯೇ? ಗೊತ್ತಿಲ್ಲ. ಆ ಏಕಲವ್ಯನೂ ಮಾನಸಿಕ ಗುರುವನ್ನು ಹೊಂದಿದ್ದ. ಜತೆಗೆ ದಾಸರೆ ಹೇಳುವಂತೆ ಗುರುವಿನ ಗುಲಾಮನಾಗದೇ ವಿದ್ಯಾರ್ಥಿಗೆ ಅಜ್ಞಾನದಿಂದ ಮುಕುತಿ ಸಿಕ್ಕೀತೇ? ಕಾಲವೇ ತಿಳಿಸಬೇಕು.

ಕಾಗದದ ರಾಕೆಟ್‌ ಒಂದಿಷ್ಟು ದೂರ ಹೋಗಲು ಬರೀ ಗಾಳಿಯಷ್ಟೇ ಸಾಕು. ಆದರೆ ಚಂದ್ರನಲ್ಲಿ ಹೋಗಲು ಪ್ರಬಲ ವಾದ ಉಡ್ಡಯನ ವಾಹನಗಳು ಬೇಕೇ ಬೇಕು. ಅಲ್ಲವೇ? ಇಲ್ಲೂ ಹಾಗೆಯೇ. ವಿದ್ಯಾರ್ಥಿಯು ಬದುಕಿನ ಗಮ್ಯವನ್ನು ಯಶಸ್ವಿಯಾಗಿ ತಲುಪಬೇಕೆಂದರೆ ಅವನನ್ನು ಜ್ಞಾನದ ಕಕ್ಷೆಗೆ ಉಡ್ಡಯನ ಮಾಡುವಂಥ ಗುರುಗಳು ಬೇಕೇ ಬೇಕು.
ಇದೇ ಸಂದರ್ಭದಲ್ಲಿ ಶಿಕ್ಷಕರೂ ಅಷ್ಟೇ. ಈಗಿನ ತಲೆಮಾರಿನ ವಿದ್ಯಾರ್ಥಿಗಳ ತಲೆಯೊಳಗೆ ಮಾಹಿತಿಯನ್ನು ತುಂಬಬೇಕಿಲ್ಲ. ಅದನ್ನು ಅವರು ಸ್ಮಾರ್ಟಾಗಿ ತಮ್ಮ ಪೋಷಕರ ಫೋನ್‌ನಲ್ಲೇ ಒಂದು ಕ್ಲಿಕ್‌ನಲ್ಲಿ ಪಡೆದುಬಿಡುತ್ತಾರೆ. ಆದರೆ ಅರಿವಿನ ಕ್ಷಿತಿಜ ವಿಸ್ತರಿಸುವ ಕೆಲಸವನ್ನು ಆ ಕ್ಲಿಕ್‌ ಮಾಡದು. ಆ ಕೆಲಸ ಶಿಕ್ಷಕರಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಯ ಮನಸ್ಸಿನಲ್ಲಿ ಅರಿವಿನ ಬೀಜ ಬಿತ್ತಿ ಬೆಳಕನ್ನು ಬೆಳೆಯಬೇಕು. ಆ ಬೆಳಕೇ ಅವನನ್ನು ಬದುಕಿ ನುದ್ದಕ್ಕೂ ಕಾಯಬಲ್ಲದು.

Advertisement

ವಿದ್ಯಾರ್ಥಿಗಳಲ್ಲಿನ ಆತ್ಮವಿಶ್ವಾಸದ ಕಿಡಿಯನ್ನು ಪತ್ತೆಹಚ್ಚಿ ಬೆಳಕಾಗಿಸುವಂಥ ಕೆಲಸಕ್ಕೆ ಶಿಕ್ಷಕರು ಇಂದು ಅಗತ್ಯವಿದೆ. ಆಯ್ಕೆಯ ಗೊಂದಲದಲ್ಲಿ ಮುಳುಗಿ ಬದುಕಿನ ಆಯ್ಕೆಯನ್ನೂ ಗುರುತಿಸಲಾಗದಂಥ ಸ್ಥಿತಿಗೆ ತಲುಪದಂತೆ ಹೊಸ ತಲೆಮಾರನ್ನು ಎಚ್ಚರಿಸುವಂತ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಆದ್ದರಿಂದ ಮಾಹಿತಿಯ ಮಾತ್ರೆಗಳನ್ನು ಕೊಟ್ಟು ನೀರು ಕುಡಿಸಲಿಕ್ಕೆ ಖಂಡಿತಾ ಶಿಕ್ಷಕರು ಅಗತ್ಯವಿಲ್ಲ.

ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಹೇಳಿದಂತೆಯೇ, “ನಮ್ಮ ಬಗ್ಗೆ, ನಮ್ಮ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸು ವವರೇ ನಿಜವಾದ ಶಿಕ್ಷಕರು’. ವಿದ್ಯಾರ್ಥಿಗಳಿಗೆ ತಮ್ಮ ದಾರಿ ಯನ್ನು ತಾವೇ ಅರಿತು, ಗುರಿಯೆಡೆಗೆ ಸಾಗುವಂತೆ ಪ್ರೋತ್ಸಾಹಿಸ ಬೇಕು. ಅವರ ಸಾಮರ್ಥ್ಯ ಗುರುತಿಸಿ, ಅವಕಾಶವನ್ನು ವಿವರಿಸಿ ಮಾರ್ಗದರ್ಶನ ಮಾಡಿದರೆ ಅವರು ಯಾವ ಗುರಿಯನ್ನಾ ದರೂ ತಲುಪಿಯಾರು. ಅಂಥ ಕೌಶಲವನ್ನೂ ಕಲಿಸಬೇಕಿದೆ. ಸಮಸ್ಯೆಗಳನ್ನು ಗುರುತಿಸುವ, ಸ್ವತಂತ್ರವಾಗಿ ಪರಿಹಾರ ಕಂಡು ಕೊಳ್ಳುವ, ಪ್ರಶ್ನಿಸುವ, ಸರಿಯಾದುದನ್ನು ಒಪ್ಪಿಕೊಳ್ಳುವಂಥ ಮನಸ್ಥಿತಿಯನ್ನು ರೂಪಿಸುವಂಥ ಗುರುತರ ಹೊಣೆ ಶಿಕ್ಷಕರ ಮೇಲಿದೆ. ಭಾರತ ಸೂಪರ್‌ ಪವರ್‌ ಆಗುವಲ್ಲಿ ಶಿಕ್ಷಕರ ಪಾತ್ರ ಅನನ್ಯ. ಅದನ್ನು ಸಮರ್ಥವಾಗಿ ನಿರ್ವಹಿಸುವವರೇ ಶ್ರೇಷ್ಠ ಶಿಕ್ಷಕರು. ಅಂಥ ಶ್ರೇಷ್ಠರ ಕಾಯಕ ಪ್ರೀತಿಗೆ ನಮಿಸೋಣ, ಶುಭ ಹಾರೈಸೋಣ.

- ಸುಶ್ಮಿತಾ, ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next