ಸಿಂಧನೂರು: ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರೇ ಈ ಸಮಾಜದ ಬುನಾದಿ ಇದ್ದಂತೆ. ಅವರ ಕೊಡುಗೆಯನ್ನು ಸ್ಮರಿಸಲೇಬೇಕು ಎಂದು ಮಸ್ಕಿ ತಹಶೀಲ್ದಾರ್ ಆರ್.ಕವಿತಾ ಹೇಳಿದರು. ನಗರದ ಸುಕಾಲಪೇಟೆಯ ಕನಕದಾಸ ಬಿಇಡಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ, ಶಿಕ್ಷಕರು ನೀಡಿದ ಕೊಡುಗೆ ಅಮೂಲ್ಯವಾಗಿರುತ್ತದೆ. ಬಿಇಡಿ ವಿದ್ಯಾರ್ಥಿಗಳು ಕೂಡ ಭವಿಷ್ಯದಲ್ಲಿ ಕ್ಷಕರಾಗುವ ಕನಸು ಹೊತ್ತಿದ್ದಾರೆ. ಜೀವನದಲ್ಲಿ ಯಾರು, ಎಷ್ಟೇ ಸಾಧನೆ ಮಾಡಿದರೂ ಅಲ್ಲಿ ಶಿಕ್ಷಕರ ಕೊಡುಗೆ ಮರೆಯುವಂತಿಲ್ಲ ಎಂದರು.
ಸಿಪಿಐ ಉಮೇಶ ಕಾಂಬ್ಳೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನಿದ್ದೆಗಿಂತ ಓದಿಗೆ ಮಹತ್ವ ನೀಡಬೇಕು. ಈಗ ಎಚ್ಚರವಿದ್ದು, ಓದಿದರೆ ಭವಿಷ್ಯದಲ್ಲಿ ಜಾಗರಣೆ ಮಾಡುವುದರಿಂದ ತಪ್ಪಿಸಿಕೊಳ್ಳಬಹುದು ಎಂದರು.
ಮಾಜಿ ಸಂಸದ, ಕನಕದಾಸ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಕನಕದಾಸ ಹಾಗೂ ಸರಸ್ವತಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕನಕದಾಸ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ, ಜಾನಪದ ಅಕಾಡೆಮಿ ಸದಸ್ಯ ನಾರಾಯಣಪ್ಪ ಮಾಡಶಿರವಾರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಾಂಶುಪಾಲ ಲಕ್ಷ್ಮ ಣ ಹಂಚಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಶಂಕರ ವಾಲೇಕಾರ ವಿಶೇಷ ಉಪನ್ಯಾಸ ನೀಡಿದರು. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಚೈತ್ರಾ ದೊಡ್ಡಬಸವರಾಜ, ಬೀರಪ್ಪ ವಿರುಪಾಪುರ, ಹಿರೇಲಿಂಗಪ್ಪ ಹಂಚಿನಾಳ, ವೆಂಕಣ್ಣ ತಿಪ್ಪನಹಟ್ಟಿ, ಮಹಿಬೂಬ್ ಮಂತ್ರಿ ಸೇರಿದಂತೆ ಇತರರು ಇದ್ದರು.