ಕೊಪ್ಪಳ: ಪ್ರಸ್ತುತ ದಿನದಲ್ಲಿ ಶಾಲಾ ಮಕ್ಕಳ ಬಗ್ಗೆ ಶಿಕ್ಷಕರಿಗೆ ಕಾಳಜಿ ಕಡಿಮೆಯಾದಂತೆ ಕಾಣುತ್ತಿದೆ. ಪ್ರವಾಸ, ಪ್ರತಿಭಾ ಕಾರಂಜಿ ಸೇರಿದಂತೆ ಕ್ರೀಡಾಕೂಟಕ್ಕೂ ಗೂಡ್ಸ್ ಗಾಡಿಯಲ್ಲಿ ಕುರಿ ಹಿಂಡಿನಂತೆ ತುಂಬಿಕೊಂಡು ತೆರಳುತ್ತಿರುತ್ತಾರೆ. ಶಿಕ್ಷಣ ಇಲಾಖೆ ಅಂತವರ ಮೇಲೆ ಕಠಿಣ ಕ್ರಮಕೈಗೊಳ್ಳುತ್ತಿಲ್ಲ.
ಹೌದು, ಇದಕ್ಕೆ ತಾಜಾ ಸಾಕ್ಷಿ ಎಂಬಂತೆ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಕೊಪ್ಪಳದ ಗವಿಮಠಕ್ಕೆ ಕರೆ ತಂದಿರುವ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಸ್ವಲ್ಪವೂ ಕನಿಕರ ತೋರಿಲ್ಲ. ದನಗಳನ್ನು ಗೂಡ್ಸ್ ಗಾಡಿಯಲ್ಲಿ ತುಂಬಿಕೊಂಡು ಬರುವಂತೆ, ವಿದ್ಯಾರ್ಥಿಗಳನ್ನು ವಾಹನದಲ್ಲಿ ಕರೆ ತಂದಿದ್ದಾರೆ. ಯಾವುದೇ ರಕ್ಷಣಾ ವ್ಯವಸ್ಥೆಯಿಲ್ಲ.
ಗವಿಮಠ ಸೇರಿದಂತೆ ಸುತ್ತಲಿನ ಕೆಲವು ಸ್ಥಳಗಳನ್ನು ಪರಿಚಯಿಸಲು ಹಲವು ವಿದ್ಯಾರ್ಥಿಗಳನ್ನು ಗೂಡ್ಸ್ ಗಾಡಿಯಲ್ಲಿ ಕರೆ ತಂದಿದ್ದರು. ಮಕ್ಕಳು ಹಿಂಬದಿಯಲ್ಲಿ ಯಾವುದೇ ಸುರಕ್ಷತಾ ವ್ಯವಸ್ಥೆ ಇಲ್ಲದೇ ಕುಳಿತಿದ್ದರು. ವಾಹನ ಸಂಚಾರ ಮಾಡುವ ವೇಳೆ ಏನಾದರೂ ಅವಘಡ ನಡೆದರೆ ಯಾರು ಹೊಣೆ?
ಕಳೆದ ಕೆಲವು ವರ್ಷಗಳಿಂದ ಒಂದು ದಿನದ ಪ್ರವಾಸಕ್ಕೆ ಆಯಾ ಶಾಲೆ ಮುಖ್ಯೋಪಾಧ್ಯಾಯರು ಬಿಇಒ ಸೇರಿದಂತೆ ಕ್ಲಸ್ಟರ್ ಮಟ್ಟದ ಅಧಿಕಾರಿಗಳ ಗಮನಕ್ಕೂ ತಾರದೆ ಪ್ರವಾಸ ಕೈಗೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿವೆ. ಪ್ರವಾಸ ತೆರಳಿದ್ದ ವೇಳೆ ಏನಾದರೂ ಅವಘಡ ನಡೆದರೆ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ. ಶಾಲಾ ವಿದ್ಯಾರ್ಥಿಗಳನ್ನು ಈ ರೀತಿ ಗೂಡ್ಸ್ ವಾಹನಗಳಲ್ಲಿ ಕರೆ ತಂದಿರುವಿರಲ್ಲ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದ್ದಕ್ಕೆ ಹಾರಿಕೆಯ ಉತ್ತರ ನೀಡಿದ ಶಿಕ್ಷಕರು ಬೇಜವಾಬ್ದಾರಿಯ ನುಣುಚಿಕೊಳ್ಳುವ ಪ್ರಯತ್ನ ನಡೆಸಿದರು. ಮಕ್ಕಳು ವಾಹನದಲ್ಲಿ ಕುಳಿತುಕೊಂಡಿರುವ ಸ್ಥಿತಿಯ ಫೋಟೋ ತೆಗೆಯುತ್ತಿದ್ದಂತೆ ಎದ್ದು ಬಿದ್ದು ವಾಹನ ಚಲಾಯಿಸಿಕೊಂಡು ತೆರಳಿದರು. ಒಟ್ಟಾರೆ ಇಂತಹ ಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಖಡಕ್ ಸೂಚನೆ ನೀಡುವ ಅವಶ್ಯಕತೆಯಿದೆ. ಪ್ರವಾಸಕ್ಕೆ ತೆರಳುವ ಮುನ್ನ ವಿದ್ಯಾರ್ಥಿಗಳ ರಕ್ಷಣೆ ಮಾಡುವ ಮುಂಜಾಗೃತಾ ಕ್ರಮ ಕೈಗೊಂಡು ತೆರಳಬೇಕಿದೆ.