ಬೆಂಗಳೂರು: ಶಿಕ್ಷಕರಿಗೆ ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಸರ್ಕಾರ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ತೊಡಗಿಸಿಕೊಳ್ಳುವಂತೆ ಆದೇಶಿಸಿದೆ.
ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಕೈಪಿಡಿ-2016 ರ ನಿಯಮಗಳ ಪ್ರಕಾರ ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳಾಗಿ 13 ವಿವಿಧ ಹುದ್ದೆಗಳ ಸಿಬ್ಬಂದಿಯನ್ನು ನಿಯೋಜಿಸಲು ಅವಕಾಶವಿದ್ದು, ಅದರಲ್ಲಿ ಶಿಕ್ಷಕರ ಹುದ್ದೆಯೂ ಒಂದು.
ಅಲ್ಲದೆ, ಸುಪ್ರೀಂಕೋರ್ಟ್ ಕೂಡ ಈ ಬಗ್ಗೆ ಸ್ಪಷ್ಟ ಆದೇಶಗಳನ್ನು ನೀಡಿದ್ದು, ಚುನಾವಣಾ ಕಾರ್ಯದಲ್ಲಿ ಶಿಕ್ಷಕರನ್ನು ಬಳಸಬಹುದು ಎಂದಿದೆ. ಆದರೆ, ಕೆಲಸವೊಂದಿಷ್ಟು ಷರತ್ತುಗಳಿದ್ದು, ಅವುಗಳನ್ನು ಪೂರೈಸುವಂತೆ ಆದೇಶದಲ್ಲಿದೆ.
ನಿವೃತ್ತಿ ಅಂಚಿನಲ್ಲಿರುವವರು, ದೀರ್ಘಕಾಲಿಕ ಕಾಯಿಲೆ ಹೊಂದಿದವರಿಗೆ ವಿನಾಯಿತಿ: ಯಾವುದೇ ಶಾಲೆಯಲ್ಲಿನ ಶೇ.100ರಷ್ಟು ಎಲ್ಲ ಶಿಕ್ಷಕರನ್ನೂ ನಿಯೋಜಿಸಬಾರದು. ಶಿಕ್ಷಕರನ್ನು ನಿಯೋಜಿಸುವಾಗ ರಜಾ ದಿನಗಳಲ್ಲಿ ಹಾಗೂ ಬೋಧನಾ ಸಮಯವನ್ನು ಹೊರತುಪಡಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬೇಕು. ಮಾರಣಾಂತಿಕ ಅಥವಾ ದೀರ್ಘಕಾಲಿಕ ಕಾಯಿಲೆ ಹೊಂದಿರುವ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು. ಮುಂದಿನ 6 ತಿಂಗಳ ಅವಧಿಯಲ್ಲಿ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಚುನಾವಣೆ) ಇಲಾಖೆಯ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್.ಯೋಗೇಶ್ವರ ತಿಳಿಸಿದ್ದಾರೆ.