Advertisement

ಶಾಲಾ ಶಿಕ್ಷಕರ ನೇಮಕಾತಿ: ಪ್ರತಿಭಟನೆಯ ಎಚ್ಚರಿಕೆ

10:18 AM Mar 31, 2017 | Team Udayavani |

ಬೆಳ್ಳಾರೆ : ಅಡ್ತಲೆ ಶಾಲೆಗೆ ಮುಖ್ಯ ಶಿಕ್ಷಕರೊಬ್ಬರ ನೇಮಕವಾಗಿದ್ದು, ಅವರನ್ನು ಶಾಲೆಗೆ ಕಳುಹಿಸದೆ ಅರಂತೋಡು ಶಾಲೆಯ ಶಿಕ್ಷಕರೊಬ್ಬರನ್ನು ಕಳುಹಿಸಿದ್ದಾರೆ. ಅಡ್ತಲೆ ಶಾಲೆಗೆ ನೇಮಕವಾದ ಶಿಕ್ಷಕರನ್ನೇ ಶಾಲೆಗೆ ಕಳುಹಿಸಬೇಕು. ಇಲ್ಲದಿದ್ದರೆ ಶಾಲೆಗೆ  ಬೀಗ ಜಡಿದು ಪ್ರತಿಭಟನೆ ನಡೆಸಲು ಆಲೋಚಿಸಬೇಕಾಗುತ್ತದೆ ಎಂದು  ನಿವೃತ್ತ ಶಿಕ್ಷಕ ಹೊನ್ನಪ್ಪ ಮಾಸ್ತರ್‌ ಅಡ್ತಲೆ ಇತರರು  ಎಚ್ಚರಿಸಿದರು.

Advertisement

ಅರಂತೋಡು ತೆಕ್ಕಿಲ್‌ ಸಮುದಾಯ ಭವನದಲ್ಲಿ ನಡೆದ ಅರಂತೋಡು  ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮ ಪಂಚಾಯತ್‌ ಅಧ್ಯಕ್ಷೆ ನೀಲಾವತಿ ಕೊಡಂಕೇರಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಇಲಾಖೆಯ ಪ್ರತಿನಿಧಿಯಾಗಿ ಆಗಮಿಸಿದ್ದ ಪದ್ಮನಾಭ ಅತ್ಯಾಡಿ ಅವರನ್ನು ಪ್ರಶ್ನಿಸಿದ ಗ್ರಾಮ ಪಂಚಾಯತ್‌ ಸದಸ್ಯ ಕೇಶವ ಅಡ್ತಲೆ ಅವರು, ನೀವು ಅಡ್ತಲೆ  ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡು ಬಿಇಒ ಕಚೇರಿಯಲ್ಲಿಯೇ ಉಳಿದುಕೊಂಡಿರುವುದೇಕೆ ಎಂದು ಹೇಳಿದಾಗ ಪ್ರತಿಕ್ರಿಯಿಸಿದ ಪದ್ಮನಾಭ ಅವರು ಈ ವರ್ಷ ಕೊನೆಯ ಹಂತದಲ್ಲಿದೆ. ಮುಂದಿನ ವರ್ಷ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದರು. 

ಈ ಸಂದರ್ಭ ಮಾತನಾಡಿದ ನಿವೃತ್ತ ಶಿಕ್ಷಕ ಎ.ಕೆ. ಜತ್ತಪ್ಪ ಮಾಸ್ತರ್‌  ಅವರು,  ಅಡ್ತಲೆಗೆ ಕಳುಹಿಸಿರುವ ಶಿಕ್ಷಕರಿಗೆ ಸಮಸ್ಯೆಯಿದೆ. ಆ ಶಿಕ್ಷಕರು ತಮ್ಮ ಸಮಸ್ಯೆಯ ಬಗ್ಗೆ ಮೊದಲೇ ಬರೆದು ಕೊಟ್ಟಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಶಿಕ್ಷಕರಿಗೆ ವಿಆರ್‌ಎಸ್‌ ಪಡೆಯಲು ಹೇಳುವಂತೆ ಕೆ.ಆರ್‌. ಗಂಗಾಧರ್‌ ಸೂಚಿಸಿದರು.

ಗ್ರಾಮ ಪಂಚಾಯತ್‌ ಸದಸ್ಯ ಗಂಗಾಧರ ಬನ ಅವರು ಮಾತನಾಡಿ, ಕಳುಬೈಲು ಸರಕಾರಿ ಶಾಲೆ ಬೀಳುವ ಸ್ಥಿತಿಯಲ್ಲಿದೆ ಅದಕ್ಕೆ ಅನುದಾನ ಇರಿಸಲಾಗಿದ್ದರೂ ಅದು ಸಾಕಾಗುವುದಿಲ್ಲ. ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿ ಇದನ್ನು ಇಲಾಖಾ ವತಿಯಿಂದ ಸರಿಪಡಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಗ್ರಾ.ಪಂ. ಉಪಾಧ್ಯಕ್ಷ ಶಿವಾನಂದ ಅವರೂ ಧ್ವನಿ ಸೇರಿಸಿದರು.

Advertisement

ಹೆಸರು ಬದಲಾಯಿಸಿ
ಗ್ರಾಮ ಪಂಚಾಯತ್‌ ಹೆಸರು ಸರಿಯಿಲ್ಲ. ಅರಂತೋಡು-ತೊಡಿಕಾನ ಗ್ರಾಮ ಪಂಚಾಯತ್‌ ಎಂದು ಹೆಸರು ಬದಲಾಯಿಸಬೇಕು. ಅರಂತೋಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ  ಸಹಕಾರಿ ಬ್ಯಾಂಕ್‌ ಕೂಡ ಅರಂತೋಡು-ತೊಡಿಕಾನ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಇದರ  ಬಗ್ಗೆ ಆಡಳಿತ ಮಂಡಳಿ ಗಮನ ಹರಿಸಬೇಕು ಎಂದು ಎ.ಸಿ. ಲಕ್ಷ್ಮಣ ಗೌಡರು ಹೇಳಿದಾಗ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಶಿವಾನಂದರು ಇದರ ಬಗ್ಗೆ ಗಮನ ಕೊಡುತ್ತೇವೆ ಎಂದು ಹೇಳಿದರು.

ತೋಟಗಾರಿಕಾ  ಇಲಾಖೆಗೆ ಹೋದರೆ ರೈತರ ಬಗ್ಗೆ ಅಸಡ್ಡೆ ಭಾವನೆ ತೋರಿಸುತ್ತಾರೆ ಎಂಬ ದೂರು ಕೇಳಿ ಬಂದಾಗ ತಾಲೂಕು ಪಂಚಾಯತ್‌ ಅಧ್ಯಕ್ಷ ಚನಿಯ ಈ ಬಗ್ಗೆ ನಾನು ಸೂಚನೆ ನೀಡುವುದಾಗಿ ತಿಳಿಸಿದರು.

ಗ್ರಾಮದಲ್ಲಿ ಈಗಾಗಲೇ ವಿದ್ಯುತ್‌ ಸಮಸ್ಯೆ ತೀವ್ರಗೊಂಡಿದ್ದು ಲೋಡ್‌ ಶೆಡ್ಡಿಂಗ್‌ ನಡೆಯುತ್ತಿದೆ. ಇದರ ಬಗ್ಗೆ ಇಲಾಖೆಯವರು ಗಮನ ಹರಿಸಬೇಕೆಂದು ಸಂತೋಷ್‌ ಕುತ್ತಮೊಟ್ಟೆ ಹೇಳಿದರು. ಇತರ ವಿಷಯಗಳ ಕುರಿತು ಚರ್ಚೆ ನಡೆಯಿತು. 

ಪಂಚಾಯತ್‌ ಸದಸ್ಯೆ ಯೋಗೇಶ್ವರಿ  ಮಾತನಾಡಿದರು. ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ನೋಡೆಲ್‌ ಅಧಿಕಾರಿಯಾಗಿ ಭಾಗವಹಿಸಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಸದಸ್ಯ ಹರೀಶ್‌ ಕಂಜಿಪಿಲಿ, ತಾಲೂಕು ಪಂಚಾಯತ್‌ ಸದಸ್ಯೆ ಪುಷ್ಪಾ ಮೇದಪ್ಪ, ಗ್ರಾಮ ಪಂಚಾಯತ್‌ ಸದಸ್ಯರಾದ ನಾಗೇಶ್‌ ಶೆಟ್ಟಿ, ರವೀಂದ್ರ ಜಿ., ಸತೀಶ, ಪುರುಷೋತ್ತಮ, ಚಿತ್ರಾ ದೇರಾಜೆ, ಧನಲಕ್ಷ್ಮೀ, ತಾರಾ ಉಳುವಾರು, ದೇವಕಿ ಕೋಡಿ, ಪುಷ್ಪಾವತಿ ಉಪಸ್ಥಿತರಿದ್ದರು. ಗ್ರಾ.ಪಂ. ಕಾರ್ಯದರ್ಶಿ ಅಜಿತ್‌ ವರದಿ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next