ಬೆಂಗಳೂರು: ರಾಜ್ಯ ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸಂಪೂರ್ಣ ಗೊಂದಲದ ಗೂಡಾಗಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆ ನಿಂತುಬಿಟ್ಟಿದೆ. ವರ್ಗಾವಣೆ ನಿಯಮದಲ್ಲಿ ಬದಲಾವಣೆ ತರಲು ಶಿಕ್ಷಕರೇ ಆಗ್ರಹಿಸುತ್ತಿದ್ದಾರೆ. ಶಿಕ್ಷಕರ ವರ್ಗಾವಣೆ ನಿಯಮದಲ್ಲಿ ಸಾಕಷ್ಟು ಬದಲಾವಣೆ ತರಬೇಕಾದ ಅಗತ್ಯವಿದೆ.
ಇಲ್ಲವಾದರೆ, ಸೇವಾಜೇಷ್ಠತೆಯ ಆಧಾರದಲ್ಲಿ ಅರ್ಜಿ ಸಲ್ಲಿಸಿದ ಒಬ್ಬ ಶಿಕ್ಷಕನೂ ವರ್ಗಾವಣೆ ಪಡೆಯಲು ಸಾಧ್ಯವಾಗು ವುದಿಲ್ಲ. ದಂಪತಿ ಶಿಕ್ಷಕರೇ ವರ್ಗಾವಣೆಯ ಬಹುಪಾಲು ಪಡೆಯುತ್ತಿದ್ದಾರೆ. ಇದರಿಂದ ಅನೇಕ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂದು ಶಿಕ್ಷಕರೇ ಆರೋಪಿಸುತ್ತಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗ ದಲ್ಲಿ ವರ್ಗಾವಣೆಗೆ ಕೋರಿ 109782 ಅರ್ಜಿ ಸಲ್ಲಿಕೆಯಾಗಿದ್ದು, 8724 ಶಿಕ್ಷಕರು ಮಾತ್ರ ವರ್ಗಾ ವಣೆ ಪಡೆದಿದ್ದಾರೆ. ಅದು ಕೂಡ ಘಟಕದ ಒಳಗಿನ ವರ್ಗಾವಣೆಯಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಘಟಕದ ಒಳಗೆ ವರ್ಗಾವಣೆ ಕೋರಿ 93644, ವಿಭಾಗದ ಹೊರಗಿನ ಘಟಕಕ್ಕೆ ವರ್ಗಾವಣೆ ಕೋರಿ 8909 ಹಾಗೂ ವಿಭಾಗದ ಒಳಗಿನ ಘಟಕಕ್ಕೆ ವರ್ಗಾವಣೆ ಕೋರಿ 7229 ಅರ್ಜಿ ಸಲ್ಲಿಕೆಯಾಗಿತ್ತು. ಅದರಲ್ಲಿ 8724 ಶಿಕ್ಷಕರು ಘಟಕದ ಒಳಗೆ ವರ್ಗಾವಣೆ ಪಡೆದಿದ್ದಾರೆ. ಪರಸ್ಪರ ಕೋರಿಕೆಯ ವರ್ಗಾವಣೆ ಕೂಡ ನಡೆದಿಲ್ಲ.
ಹೀಗಾಗಿ ನಿಯಮದಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದೆ. ವರ್ಗಾವಣೆ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮುಖ್ಯ ಮಂತ್ರಿಗಳು ಸೂಚನೆ ನೀಡಿರುವ ಹಿನ್ನೆಲೆ ಯಲ್ಲಿ ಸದ್ಯ ಯಾವುದೇ ರೀತಿಯ ಪ್ರಕ್ರಿಯೆ ನಡೆಯುತ್ತಿಲ್ಲ. ಸಿಎಂ ಅವರೊಂದಿಗೆ ಸಮಾಲೋಚನೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಿರುವುದರಿಂದ ಅಧಿಕಾರಿಗಳು ಕೂಡ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.
ವರ್ಗಾವಣೆಗೆ ತೀವ್ರ ಲಾಬಿ ಹಾಗೂ ಒತ್ತಡ ನಿರ್ಮಾಣವಾಗುತ್ತಿರುವುದು ಮತ್ತು ಸಾಮಾನ್ಯ ವರ್ಗಾವಣೆ ಹಾಗೂ ವಿಶೇಷ ವರ್ಗಾವಣೆ ವಿಚಾರದಲ್ಲಿ ಸ್ಪಷ್ಟತೆ ಪಡೆಯ ಬೇಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯವರೊಂದಿಗೆ ಚರ್ಚಿಸಲು ಮಂಗಳವಾರ ಸಭೆ ಆಯೋಜಿಸಲಾಗಿತ್ತು. ಆದರೆ, ಅವರು ಲಭ್ಯರಾಗದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ.