ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಶಾಲಾ ಶಿಕ್ಷಕರು ವರ್ಗಾವಣೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ದಿನಾಂಕವನ್ನು ಜ.20ರವರೆಗೂ ವಿಸ್ತರಿಸಲಾಗಿದೆ.
2017ರ ಡಿ.29ರಿಂದ ವರ್ಗಾವಣೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು. ಜ.10ರೊಳಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವೇಳಾಪಟ್ಟಿಯಲ್ಲಿ ತಿಳಿಸಿತ್ತು.
ಹೊಸ ಸಾಫ್ಟ್ವೇರ್ ರಚನೆ ಮಾಡಿರುವುದರಿಂದ ಅರ್ಜಿ ಸಲ್ಲಿಸಲು ನೀಡಿದ್ದ ಕಾಲಾವಕಾಶವನ್ನು ಇನ್ನಷ್ಟು ದಿನ ವಿಸ್ತರಿಸಬೇಕು ಎಂದು ಶಿಕ್ಷಕರ ಸಂಘದಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸಂಘದ ಮನವಿಯನ್ನು ಪುರಸ್ಕ ರಿಸಿದ ಸರಕಾರ, ಜ.20ರ ತನಕ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದೆ.
ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿದ ಅನಂತರ ದಾಖಲೆ ಪರಿಶೀಲನೆಗೆ ಒಂದು ತಿಂಗಳ ಕಾಲಾವಕಾಶದ ಅಗತ್ಯ ಇರುತ್ತದೆ. ಅಂದರೆ, ಫೆ.20ರವರೆಗೆ ದಾಖಲಾತಿ ಪರಿಶೀಲನೆ ನಡೆಯಲಿದೆ. ಇದಾದ ಅನಂತರ ಒಂದು ತಿಂಗಳ ಕಾಲ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ. ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಮಾ.20ರತನಕ ಕಾಲಾವಕಾಶ ಬೇಕಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇs… ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರ್ಗಾವಣೆ ಪ್ರಕ್ರಿಯೆ ಮುಗಿದ ಅನಂತರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ, ಶಿಕ್ಷಕ ಹಾಗೂ ಶಿಕ್ಷಕರ ಕುಟುಂಬದ ಹಿತದೃಷ್ಟಿಯಿಂದ ವರ್ಗಾವಣೆಗೊಳ್ಳುವ ಶಿಕ್ಷಕರನ್ನು ವರ್ಗಾವಣೆ ಗೊಂಡ ಸ್ಥಳಕ್ಕೆ 2018ರ ಜೂನ್ 1ರಿಂದ ಜಾರಿಗೆ ಬರುವಂತೆ ಸ್ಥಳ ನಿಯೋಜನೆ ಆದೇಶ ಹೊರಡಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಶಿಕ್ಷಕರ ವರ್ಗಾವಣೆ ಸ್ಥಗಿತವಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವಂತೆ “ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿಲ್ಲ’. ಒಟ್ಟಾರೆ ವರ್ಗಾವಣೆ ಪ್ರಕ್ರಿಯೆ ಎಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲಿದ್ದೇವೆ. ವಿದ್ಯಾರ್ಥಿಗಳಿಗೆ ಮತ್ತು ಪರೀಕ್ಷಾ ಕಾರ್ಯಕ್ಕೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗದಂತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಹೊಸ ವೇಳಾಪಟ್ಟಿ
ವರ್ಗಾವಣೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಮಾಡಿರುವುದರಿಂದ ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಹೊಸ ವೇಳಾಪಟ್ಟಿ ಪ್ರಕಟಿಸಲಾಗುವುದು. ಶಿಕ್ಷಕರ ವರ್ಗಾವಣೆ ಸಂಬಂಧ ಚುನಾವಣಾ ಆಯೋಗದೊಂದಿಗೆ ಯಾವುದೇ ಮಾತುಕತೆ ಅಥವಾ ಪತ್ರವ್ಯವಹಾರ ನಡೆದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್ ಖಚಿತಪಡಿಸಿದರು.