Advertisement
ಮಂಗಳೂರು ಉತ್ತರ ಶಿಕ್ಷಣ ಇಲಾಖೆ ವ್ಯಾಪ್ತಿಯ ಈ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ 101ರಷ್ಟು ಏರಿಕೆಯಾಗಿದೆ. ಆದರೆ ಶಿಕ್ಷಕರ ಕೊರತೆ, ಸೋರುತ್ತಿರುವ ಕೊಠಡಿಗಳು ಹಾಗೂ ಪೀಠೊಪಕರಣದ ಕೊರತೆಯಿಂದಾಗಿ ಮಕ್ಕಳು ಶಾಲೆಗೆ ಬರುವಾಗ ಇಲ್ಲಿ ಸಮಸ್ಯೆ ಎದುರಾಗಲಿದೆ.
Related Articles
Advertisement
ಈ ಶಾಲೆಯಲ್ಲಿ 18 ತರಗತಿ ಕೊಠಡಿಗಳಿವೆ. ಆದರೆ ಬಹುತೇಕ ಎಲ್ಲ ಕೊಠಡಿಗಳು ಮಳೆ ಬರುವಾಗ ಸೋರುತ್ತಿದೆ. ನಲಿ-ಕಲಿ ತರಗತಿ ಕೊಠಡಿ, ಕಂಪ್ಯೂಟರ್ ತರಬೇತಿಯ ಕೊಠಡಿ, ಎಲ್‌ಕೆಜಿ, ಯುಕೆಜಿ ಇರುವ ಕಟ್ಟಡದಲ್ಲಿ ಸೋರುವಿಕೆಯ ಬಹು ಸಮಸ್ಯೆಯಿದೆ. ಜತೆಗೆ ಪೀಠೊಪಕರಣ ಕೂಡ ಸಮರ್ಪಕವಾಗಿ ಇಲ್ಲಿಲ್ಲ. ಡೆಸ್ಕ್, ಬೆಂಚ್‌ಗಳ ಕೊರತೆಯಿದೆ. ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲವಾದರೂ, ಶಾಲಾ ಕಟ್ಟಡ ದುರಸ್ತಿ ಮಾಡಲೇಬೇಕಾದ ಅನಿವಾರ್ಯವಿದೆ. ಹೆಚ್ಚುವರಿಯಾಗಿ 2 ಹೊಸ ಕೊಠಡಿಗೆ ಮಂಜೂರಾತಿ ದೊರಕಿದ್ದರೂ ಕೆಲಸ ಆರಂಭವಾಗಿಲ್ಲ. ಒಂದುವೇಳೆ ತರಗತಿ ತತ್‌ಕ್ಷಣವೇ ಆರಂಭವಾದರೆ ತರಗತಿ ಕೊಠಡಿ ಹೊಂದಿಸುವುದೇ ದೊಡ್ಡ ಸವಾಲಿನ ಸಂಗತಿ.
ಕಸ್ಬಬೆಂಗ್ರೆಯಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿದೆ. ಹೀಗಾಗಿ ಆನ್‌ಲೈನ್ ತರಗತಿಗೆ ಸಮಸ್ಯೆ ಯಾಗುತ್ತಿದೆ. ಇದರ ಜತೆಗೆ ಶಾಲೆಗೆ ಬರುವ ಬಹುತೇಕ ಮಕ್ಕಳ ಮನೆಯಲ್ಲಿ ಟಿವಿ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳಿಗೆ ಟಿವಿ ಪಾಠವೂ ಸಿಗುತ್ತಿಲ್ಲ. ಇದಕ್ಕಾಗಿ ನಾಲ್ಕು ಶಿಕ್ಷಕಿಯರು ನಿಯಮಿತವಾಗಿ ಮಕ್ಕಳನ್ನು ಬೇರೆ ಬೇರೆ ಸಮಯದಲ್ಲಿ ಶಾಲೆಗೆ ಕರೆದು ಪಾಠ ಮಾಡುತ್ತಿದ್ದಾರೆ. ಜತೆಗೆ ಶಾಲೆಯಲ್ಲಿ ಶಿಕ್ಷಕಿಯರ ಮೊಬೈಲ್‌ನಲ್ಲಿಯೇ ಮಾಹಿತಿ ನೀಡುತ್ತಿದ್ದಾರೆ.
539 ವಿದ್ಯಾರ್ಥಿಗಳಿಗೆ 4 ಶಿಕ್ಷಕಿಯರು! : ಬೆಂಗ್ರೆ ಕಸ್ಬ ಶಾಲೆಯಲ್ಲಿ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ 539 ದಾಟಿದ್ದರೂ ಶಿಕ್ಷಕರ ಸಂಖ್ಯೆ ಮಾತ್ರ 4 ದಾಟಿಲ್ಲ. 14 ಹುದ್ದೆ ಮಂಜೂರಾಗಿದ್ದರೂ 10 ಹುದ್ದೆ ಖಾಲಿಯೇ ಇದೆ. ಸಾಮಾನ್ಯವಾಗಿ 30 ಮಕ್ಕಳಿಗೆ ಒಂದು ಶಿಕ್ಷಕರು ಇರಬೇಕಾದರೂ ಇಲ್ಲಿ ನೂರು ಮಕ್ಕಳಿಗೆ ಒಬ್ಬರು ಶಿಕ್ಷಕರು ಕೂಡ ಇಲ್ಲ. 2016ರಿಂದ ಮುಖ್ಯ ಶಿಕ್ಷಕ ಹುದ್ದೆ, 2019ರಿಂದ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆ ಖಾಲಿಯಿದೆ. ಇಲ್ಲಿ ಭೌತಿಕ ತರಗತಿ ಆರಂಭವಾದ ಬಳಿಕವೂ ಹೆಚ್ಚುವರಿ ಶಿಕ್ಷಕರ ನೇಮಕವಾಗದಿದ್ದರೆ ಶಿಕ್ಷಣದ ಗುಣಮಟ್ಟಕ್ಕೆ ಬಹುದೊಡ್ಡ ಹೊಡೆತ ಬೀಳಬಹುದು!
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ತರಗತಿ ಕೊಠಡಿಗಳ ಸುಧಾರಣೆಯಾಗಬೇಕಿದೆ ಹಾಗೂ ಶಿಕ್ಷಕರ ಕೊರತೆ ನಿವಾರಣೆಯಾಗಬೇಕಿದೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಣ ಇಲಾಖೆ ಶಾಲೆಯ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ದಾನಿಗಳು ನೆರವಾದರೆ ಉಪಯೋಗವಾಗುತ್ತಿತ್ತು. –ಗ್ರೇಸಿ ಜುಲಿಯಾನ ಮಥಾಯಸ್, ಪ್ರಭಾರ ಮುಖ್ಯ ಶಿಕ್ಷಕರು.
-ದಿನೇಶ್ ಇರಾ