ಕೋಲಾರ: ಶಿಕ್ಷಕರೊಬ್ಬರ ಬೇಜವಾಬ್ದಾರಿ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ತಾಲೂಕಿನ ಚೆಲುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಳೆದ ಮೂರು ತಿಂಗಳಿನಿಂದಲೂ ಬಿಸಿಯೂಟದಿಂದ ವಂಚಿತವಾಗಿದ್ದು ಬೆಳಕಿಗೆ ಬಂದಿದೆ.
ಬಿಸಿಯೂಟ ಇಲ್ಲದ ಕಾರಣಕ್ಕೆ ಶಾಲೆಯ ಮಕ್ಕಳ ಸಂಖ್ಯೆ ಹದಿಮೂರರಿಂದ ಕೇವಲ ನಾಲ್ಕು ಸಂಖ್ಯೆಗೆ ಕುಸಿದಿತ್ತು. ಜಿಲ್ಲಾ ಕೇಂದ್ರಕ್ಕೆ ಕೆಲವೇ ಕಿ.ಮೀ. ದೂರದಲ್ಲಿರುವ ಈ ಶಾಲೆಗೆ ದುಸ್ಥಿತಿ ಏರ್ಪಟ್ಟಿದ್ದರೂ, ಸಂಬಂಧಪಟ್ಟ ಶಿಕ್ಷಕರ ಮೇಲೆ ಕ್ರಮಕೈಗೊಳ್ಳದ ಇಲಾಖೆಯ ಅಧಿಕಾರಿಗಳು, ಸರ್ಕಾರ ಎಲ್ಲಾ ಸೌಲಭ್ಯ ಕೊಟ್ಟರೂ ಮಕ್ಕಳನ್ನು ಉಪವಾಸ ಕೆಡವಿ ಶಾಲೆಗೆ ಬರದಂತೆ ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆ.
ಪ್ರಭಾರಿ ಮುಖ್ಯ ಶಿಕ್ಷಕರ ವರ್ಗಾವಣೆ: ಚೆಲುವನಹಳ್ಳಿ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಹೊಣೆ ಹೊತ್ತುಕೊಂಡಿದ್ದ ಕೆ.ಎಸ್.ಸುರೇಶ್‌ಬಾಬು ಅವರನ್ನು ಜೂ.11ರಂದು ಅಂತರಗಂಗೆ ಬೆಟ್ಟದ ಮೇಲಿನ ಗ್ರಾಮದ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಹೀಗೆ ಶಾಲೆ ನಿರ್ಗಮಿಸುವ ಸಂದರ್ಭದಲ್ಲಿ ಕೆ.ಎಸ್.ಸುರೇಶ್ ಬಾಬು ಮುಖ್ಯ ಶಿಕ್ಷಕರ ಜವಾಬ್ದಾರಿಯನ್ನು ಶಾಲೆಯ ಮತ್ತೂರ್ವ ಹಿರಿಯಶಿಕ್ಷಕರಿಗೆ ವಹಿಸಬೇಕಾಗುತ್ತದೆ. ಆದರೆ, ಇದ್ಯಾವುದನ್ನೂ ಪಾಲಿಸದೆ ಚೆಲುವನಹಳ್ಳಿ ಶಾಲೆಯ ಎಲ್ಲಾ ಜವಾಬ್ದಾರಿ ತಮ್ಮ ಕಿಸೆಯಲ್ಲಿಟ್ಟು ಕೊಂಡು ಸುರೇಶ್‌ಬಾಬು ತೆರಳಿದ್ದಾರೆ.
ಶೌಚಾಲಯ ಹಣ ದುರುಪಯೋಗ: ಕೋಲಾರ ತಾಲೂಕು ಚೆಲುವನಹಳ್ಳಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದ 2.50 ಲಕ್ಷ ರೂ. ಅನ್ನು ಕೆ.ಎಸ್.ಸುರೇಶ್‌ಬಾಬು ತಾವು ಶಾಲೆಯಿಂದ ನಿರ್ಗಮಿಸಿದ ನಂತರ ಬ್ಯಾಂಕ್‌ನಿಂದ ಡ್ರಾ ಮಾಡಿ ಕೊಂಡು ದುರುಪಯೋಗಿಸಿಕೊಂಡಿದ್ದಾರೆ. ಈ ಕುರಿತು ದೂರುಗಳು ಬಿಇಒ ಮತ್ತು ಡಿಡಿಪಿಐಗೂ ತಲುಪಿದೆ. ಈ ಕುರಿತು ತನಿಖೆ ನಡೆದು ಆರೋಪ ನಡೆದಿರುವುದು ಸಾಬೀತಾಗಿದೆ. ಆದರೂ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸುರೇಶ್‌ಬಾಬು ಮೇಲೆ ಕ್ರಮ ಕೈಗೊಳ್ಳದೇ ಸುಮ್ಮನಿದ್ದರು. ಕನಿಷ್ಠ ಚೆಲುವನಹಳ್ಳಿ ಶಾಲೆಯ ಜವಾಬ್ದಾರಿಯನ್ನು ಮತ್ತೂಬ್ಬ ಶಿಕ್ಷಕರಿಗೆ ಕೊಡಿಸುವಲ್ಲಿಯೂ ವಿಫಲವಾಗಿದ್ದಾರೆ.
ಮುಂದುವರಿದಿಲ್ಲ: ಲಕ್ಷಾಂತರ ರೂ. ದುರುಪಯೋಗದ ಹಿನ್ನೆಲೆಯಲ್ಲಿ ಚೆಲುವನಹಳ್ಳಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಶಿಕ್ಷಕರ ಪೈಕಿ ಯಾರೊಬ್ಬರೂ ಮುಖ್ಯ ಶಿಕ್ಷಕರ ಹುದ್ದೆಯ ಪ್ರಭಾರ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಿಲ್ಲ. ಇದರಿಂದ ಕೆ.ಎಸ್.ಸುರೇಶ್‌ಬಾಬು ಶಾಲೆಯಿಂದ ನಿರ್ಗಮಿಸಿದಾಗಿನಿಂದಲೂ ಅಂದರೆ ಜೂನ್ ತಿಂಗಳಿನಿಂದಲೂ ಚೆಲುವನಹಳ್ಳಿ ಶಾಲೆಯಲ್ಲಿ ಮಕ್ಕಳು ಬಿಸಿಯೂಟದಿಂದ ವಂಚಿತರಾಗಬೇಕಾಗಿದೆ. ಇದೀಗ ದಸರಾ ರಜೆಯ ನಂತರವೂ ಬಿಸಿಯೂಟ ಮುಂದುವರಿದಿಲ್ಲ.
ಶಾಲೆಯಲ್ಲಿ ಬಿಸಿಯೂಟದ ಜವಾಬ್ದಾರಿ ತೆಗೆದುಕೊಳ್ಳುವವರೂ ಯಾರೂ ಇರದ ಕಾರಣದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯೂ ಚೆಲುವನಹಳ್ಳಿ ಶಾಲೆಯಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳ್ಳುವಂತಾಗಿತ್ತು. ಅಧಿಕಾರಿಗಳನ್ನು ಎಚ್ಚರಿಸಿದ
ಉದಯವಾಣಿ ಕರೆ: ಕೋಲಾರ ತಾಲೂಕಿನ ಚೆಲುವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸ್ಥಗಿತಗೊಂಡಿರುವ ಕುರಿತು ತಾಲೂಕು ಬಿಸಿಯೂಟ ಅಧಿಕಾರಿ ಬಾಲಾಜಿಯವರಪ್ರತಿಕ್ರಿಯೆ ಕೋರಿ ಪತ್ರಿಕೆಯಿಂದ ಅವರಿಗೆ ದೂರವಾಣಿ ಕರೆ ಮಾಡಲಾಗಿತ್ತು. ಚುನಾವಣಾ ಕಾರ್ಯದಲ್ಲಿ ತೊಡಗಿಸಿದ್ದ ಬಾಲಾಜಿ ಚೆಲುವನಹಳ್ಳಿ ಬಿಸಿಯೂಟ ಸ್ಥಗಿತಗೊಂಡಿರುವ ಸುದ್ದಿ ತಮ್ಮ
ಗಮನಕ್ಕೆ ಬಂದಿತ್ತು. ಆದರೆ, ಚುನಾವಣಾ ಕಾರ್ಯದೊತ್ತಡದಲ್ಲಿ ಅಲ್ಲಿಗೆ ತೆರಳಲುಸಾಧ್ಯವಾಗಲಿಲ್ಲ. ಇಂದು ಶಾಲೆಗೆ ತೆರಳಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಅದರಂತೆ ಶುಕ್ರವಾರ ಮಧ್ಯಾಹ್ನ ಚೆಲುವನಹಳ್ಳಿ ಶಾಲೆಗೆ ತೆರಳಿದ್ದ ಬಿಸಿಯೂಟ ಅಧಿಕಾರಿ ಬಾಲಾಜಿ, ಎರಡು ಗಂಟೆಗಳ ಕಾಲ ಕೂಲಕಂಷವಾಗಿ ಮಾಹಿತಿ ಸಂಗ್ರಹಿಸಿ, ತಾವು ಶಾಲೆಯಲ್ಲಿರುವಂತೆಯೇ ಟೊಮೇಟೋ ಬಾತ್ ಮಾಡಿಸಿ ಮಕ್ಕಳಿಗೆ ಬಡಿ ಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಕ್ಷೀರಭಾಗ್ಯದಡಿ ಮಕ್ಕಳು ಹಾಲು ಸಿಗುವಂತೆಯೂ ಮಾಡಿದ್ದಾರೆ. ಚೆಲುವನಹಳ್ಳಿ ಶಾಲೆಯಲ್ಲಿ ಬಿಸಿಯೂಟ ಸ್ಥಗಿತಗೊಂಡಿರುವ ಕುರಿತು ಎರಡು ಪುಟಗಳ ವರದಿಯನ್ನು ಬರೆದು ಡಿಡಿಪಿಐ ಮತ್ತು ಬಿಇಒರಿಗೂ ರವಾನಿಸಿದ್ದಾರೆ.
-ಕೆ.ಎಸ್.ಗಣೇಶ್