ಶಿರಸಿ: ಶಿಕ್ಷಕರ ನೋವಿಗೆ ದಿನದ 24 ಗಂಟೆ ಶ್ರಮಿಸಿದ್ದೇ ಈ ಪ್ರೀತಿಯ ಗುಟ್ಟು. ಇದೇ ಪ್ರೀತಿ 7 ಸಲ ವಿಧಾನ ಪರಿಷತ್‌ಗೆ ಆಯ್ಕೆ ಆಗಲು ಕಾರಣವಾಗಿದೆ ಎಂದು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಲಯನ್ಸ್ ಸಭಾಂಗಣದಲ್ಲಿ ಸೋಮವಾರ ನಡೆದ ಶಿಕ್ಷಕರ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ಕುಟುಂಬದಲ್ಲಿ ಪ್ರೀತಿ-ವಿಶ್ವಾಸ ದಶಕಗಳ ಕಾಲ ಉಳಿಸಿ ಕೊಳ್ಳುವುದು ಕಷ್ಟ. ಆದರೆ 42 ವರ್ಷ ಈ ಪ್ರೀತಿ ಉಳಿಸಿಕೊಂಡಿದ್ದು ಸುಲಭವಲ್ಲ. ಶಿಕ್ಷಕರ ಪ್ರೀತಿಯೇ ಈ ಸ್ಥಾನಕ್ಕೆ ನನ್ನನ್ನು ತಂದು ನಿಲ್ಲಿಸಿದೆ ಎಂದ ಅವರು, ಪ್ರಥಮ ಪ್ರಾಶಸ್ತ್ಯದ ಮತ ಕೊಟ್ಟು ಈ ಬಾರಿಯೂ ಬೆಂಬಲಿಸುತ್ತೀರೆಂಬ ವಿಶ್ವಾಸವಿದೆ ಎಂದರು. ಬಿಜೆಪಿ, ನಂದು ಸೇರಿ ಶೇ.80 ಮತಗಳು ಪಕ್ಕಾ. ಉತ್ತಮ ವಾತಾವರಣ ಈ ಚುನಾವಣೆಯಲ್ಲಿ ನಿರ್ಮಾಣವಾಗಿದೆ.
ಗೆದ್ದ ಮರುದಿನದಿಂದ ಆರು ವರ್ಷದ ತನಕ ಶಿಕ್ಷಕರ ನೋವಿಗೆ ಸ್ಪಂದಿಸುತ್ತೇನೆ. ಶಿಕ್ಷಕರ ನೋವಿಗೆ ಸದಾ ಸ್ಪಂದಿಸುತ್ತೇವೆ. ಅತಿಥಿ ಶಿಕ್ಷಕರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು. ಮಾಜಿ ಸಿಎಂ ಜಗದೀಶ ಶೆಟ್ಟರ, ಬಿಜೆಪಿ ಅಭಿಮಾನಿಗಳು, ಹೊರಟ್ಟಿ ಅಭಿಮಾನಿಗಳು ಒಂದೇ. ಹೊರಟ್ಟಿ ಶಕ್ತಿ, ಬಿಜೆಪಿ ಶಕ್ತಿ ಒಂದಾಗಿದೆ. ರಾಜ್ಯ ಸರಕಾರದ ಸಾಧನೆ, ನರೇಂದ್ರ ಮೋದಿ ಸರಕಾರ ಸಾಧನೆ ಜತೆಯಾಗಿದೆ ಎಂದರು.
ಶಿಕ್ಷಕರ ಸಮಸ್ಯೆ ಬಂದಾಗ ಯಾವುದೇ ಸರಕಾರ ಇದ್ದರೂ ಹೋರಾಟ ಮಾಡಿ ಕೆಲಸ ಮಾಡಿದ್ದಾರೆ ಹೊರಟ್ಟಿಯವರು. ಅವರ ಗೆಲುವು ಇನ್ನಷ್ಟು ಶಕ್ತಿಯುತ ಆಗಲಿದೆ ಎಂದರು. ಬೇಲೆಕೇರಿ ಬಂದರು ಅಭಿವೃದ್ಧಿ, ಅಂಕೋಲಾ-ಹುಬ್ಬಳ್ಳಿ ರೈಲ್ವೆ ಕೂಡ ಮುಂದೆ ಆಗಲಿದೆ. ಎಂಪಿ, ಐದು ಶಾಸಕರು, ಉಳ್ವೆಕರ್ ಎಲ್ಲ ಸೇರಿ ಬಿಜೆಪಿ ಆಗಿದೆ ಎಂದರು.
ಸಚಿವ ಶಿವರಾಮ ಹೆಬ್ಟಾರ ಮಾತನಾಡಿ, ಏಳು ಬಾರಿ ಗೆದ್ದ ಹೊರಟ್ಟಿ ಅವರು ಈ ಬಾರಿಯೂ ಗೆಲ್ಲುತ್ತಾರೆ. ಕಳೆದ ಸಲ ಚುನಾವಣೆ ಪ್ರಚಾರಕ್ಕೆ ಹೋದರೆ ಈ ಬಾರಿ ಬಿಡಿ, ಹೊರಟ್ಟಿ ಅವರಿಗೆ ಮತದಾನ ಮಾಡುತ್ತೇವೆ ಎನ್ನುತ್ತಿದ್ದರು. ಅವರು ಒಳ್ಳೆಯ ಕೆಲಸ, ಹೋರಾಟದಿಂದ ಗೆದ್ದಿದ್ದಾರೆ. ಶೆಟ್ಟರ ನೇತೃತ್ವದಲ್ಲಿ ಈ ಚುನಾವಣೆಯಲ್ಲಿ ಗೆಲುವು ಆಗಲಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಏಳು ಬಾರಿ ಗೆದ್ದಿದ್ದಾರೆ ಎಂದರೆ, ಕೆಲಸ ಮಾಡಿದ್ದಾರೆ ಎಂದರ್ಥ. ಸದನದ ಒಳಗೆ-ಹೊರಗೆ ಕೆಲಸ ಮಾಡಿದ್ದಾರೆ. ದಾಖಲೆ ಮತಗಳಿಂದ ಹೊರಟ್ಟಿ ಗೆಲ್ಲುತ್ತಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಎಂ.ಜಿ. ಭಟ್ಟ, ಉಷಾ ಹೆಗಡೆ, ಮಹೇಶ ತೆಂಗಿನಕಾಯಿ, ಗಣಪತಿ ನಾಯ್ಕ, ಚಂದ್ರು ಎಸಳೆ, ಎನ್.ಎಸ್. ಹೆಗಡೆ ಇತರರು ಇದ್ದರು. ಎಂ.ಎಂ. ಭಟ್ಟ ನಿರೂಪಿಸಿದರು.