Advertisement

ಶಿಕ್ಷಕರೇ, ರಜೆ ಮೋಜು ಬಿಟ್ಟು  ಬನ್ನಿ ಶಾಲೆಗೆ!

10:58 AM Apr 27, 2017 | Harsha Rao |

ಹಾವೇರಿ: “ಶಿಕ್ಷಕರೇ, ರಜೆಯ ಈ ದಿನಗಳಲ್ಲಿ ಎಲ್ಲಿಯೇ ಇದ್ದರೂ ಕೂಡಲೇ ಶಾಲೆಗೆ ಬಂದು ನಿಮ್ಮ ಸೇವಾ ಮಾಹಿತಿ
ನೀಡಿ’, ಇದು ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರಿಗೆ ನೀಡಿರುವ ತುರ್ತು ಕರೆ.

Advertisement

ಶಾಲೆಗಳಿಗೆ ರಜೆ ಎಂದು ಪ್ರವಾಸದ ಮೋಜು ಮಾಡಲು ಹೋದವರು, ಸಂಬಂಧಿಕರ ಊರು, ಮದುವೆಗೆ ಹೋದವರು. ನೆಮ್ಮದಿಯಿಂದ ಓಡಾಡಿಕೊಂಡಿರುವವರು ಸೇರಿದಂತೆ ಎಲ್ಲ ಶಿಕ್ಷಕರು ತಕ್ಷಣ ಶಾಲೆಗೆ ಬಂದು ತಮ್ಮ ಸೇವಾ ಮಾಹಿತಿಯ ನಮೂನೆಯನ್ನು ಏ. 27ರೊಳಗೇ ತುಂಬಿ ಕೊಡಬೇಕಾಗಿದ್ದು, ಶಿಕ್ಷಕರು ತಮ್ಮ ಶಾಲೆಯ ಕಡೆಗೆ
ದೌಡಾಯಿಸುತ್ತಿದ್ದಾರೆ. ಬೇಸಿಗೆ ರಜೆ ಇರುವ ಈ ದಿನಗಳಲ್ಲಿ ಸರ್ಕಾರದ “ಬೇಸಿಗೆ ಸಂಭ್ರಮ’ ಹಾಗೂ “ಬಿಸಿಯೂಟ’ ಯೋಜನೆಗೆ ನಿಯೋಜನೆಗೊಂಡಿರುವ ಶಿಕ್ಷಕರು ಸೇರಿ ಶೇ. 30ರಷ್ಟು ಶಿಕ್ಷಕರು ಸ್ಥಳೀಯವಾಗಿಯೇ ಸಿಗುತ್ತಿದ್ದು, ಉಳಿದ ಶೇ. 70ರಷ್ಟು ಶಿಕ್ಷಕರು ರಜೆಯ ಮೋಜಿನಲ್ಲಿದ್ದಾರೆ.

ಇಂಥವರಿಗೆ ಈ ಕರೆ ಕಿರಿಕಿರಿಯಾಗಿ ಪರಿಣಮಿಸಿದೆ. ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ,
ಪ್ರೌಢಶಾಲಾ ಶಿಕ್ಷಕರ ಸೇವಾ ಮಾಹಿತಿಯನ್ನು “ಟೀಚರ್ ಡೇಟಾ ಕ್ಯಾಪcರ್ ಸಾಫ್ಟವೇರ್‌’ ತಂತ್ರಾಂಶದಲ್ಲಿ ಅಳವಡಿಸುವುದಕ್ಕಾಗಿ ಶಿಕ್ಷಣ ಇಲಾಖೆ ಶಿಕ್ಷಕರಿಂದ ತಮ್ಮ ಸೇವಾ ಮಾಹಿತಿ ಪಡೆದುಕೊಳ್ಳುತ್ತಿದ್ದು ಮಾಹಿತಿ ನೀಡುವ
ಬಗ್ಗೆ ಏ. 20ರಂದು ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಉಪನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದಾರೆ.

ತಡವಾಗಿ ತಲುಪಿದ ಸುತ್ತೋಲೆ: ಇಲಾಖೆ ಆಯುಕ್ತರ ಈ ಸುತ್ತೋಲೆ ಹಾಗೂ ಶಿಕ್ಷಕರ ಸೇವಾ ಮಾಹಿತಿ ಭರ್ತಿ ಮಾಡುವ ನಮೂನೆ ಬಹುತೇಕ ಎಲ್ಲ ಉಪನಿರ್ದೇಶಕರಿಗೆ ಏ. 24ರ ಬಳಿಕವೇ ದೊರಕಿದ್ದು, ಕ್ಷೀಪ್ರವಾಗಿ ಶಿಕ್ಷಕರನ್ನು ಶಾಲೆಗೆ
ಕರೆಸುವ ವ್ಯವಸ್ಥೆ ನಡೆದಿದೆ. ಸುತ್ತೋಲೆಯಲ್ಲಿ ಮಾಹಿತಿ ತುಂಬಿಕೊಡಲು ಏ. 27 ಕೊನೆಯ ದಿನ ಎಂದು ತಿಳಿಸಿದ್ದರಿಂದ ಶಾಲೆಗೆ ಬಂದು ಮಾಹಿತಿ ಕೊಡುವಂತೆ ಶಾಲಾ ಮುಖ್ಯಾಧ್ಯಾಪಕರು ಎಲ್ಲ ಶಿಕ್ಷಕರಿಗೆ ದೂರವಾಣಿ ಕರೆ ಮಾಡಿ ಶಾಲೆಗೆ
ಕರೆಸಿಕೊಳ್ಳುತ್ತಿದ್ದಾರೆ.

ಶಿಕ್ಷಕರು ನೀಡಿದ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಿ ಮುಂದಿನ ದಿನಗಳಲ್ಲಿ ಈ ಮಾಹಿತಿ ಆಧಾರದಲ್ಲಿಯೇ ಎಲ್ಲ ಶಿಕ್ಷಕರ ಸೇವಾ ಪ್ರಗತಿ ಚಟುವಟಿಕೆಗಳನ್ನು ಪರಿಗಣಿಸುವುದರಿಂದ ಶಿಕ್ಷಕರು ತಮ್ಮ ಭವಿಷ್ಯದ ದೃಷ್ಟಿಯಿಂದ ಎಲ್ಲೇ ಇದ್ದರೂ ಶಾಲೆಗೆ ಬಂದು ಸ್ವತಃ ತಮ್ಮ ಸೇವಾ ಮಾಹಿತಿಯನ್ನು ಸರಿಯಾಗಿ ತುಂಬಿ, ಮಾಹಿತಿ ಸರಿ ಇರುವ ಬಗ್ಗೆ ದೃಢೀಕರಣ ಪತ್ರ ಕೊಡಬೇಕಾಗಿದೆ.

Advertisement

ಕ್ಷಿಪ್ರ ಕಾರ್ಯಾಚರಣೆ: ಮಾಹಿತಿ ಭರ್ತಿ ಮಾಡಿಕೊಡಲು ಏ. 27 ಕೊನೆಯ ದಿನ ಎಂದು ಹೇಳಿರುವ ಜೊತೆಗೆ ಸುತ್ತೋಲೆ ಹಾಗೂ ಮಾಹಿತಿ ಭರ್ತಿ ನಮೂನೆ ತಡವಾಗಿ ತಲುಪಿಸಿದ್ದರಿಂದ ಉಪನಿರ್ದೇಶಕರಾದಿಯಾಗಿ ಎಲ್ಲ ಹಂತಗಳಲ್ಲಿ
ಈ ಕುರಿತು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ನಮೂನೆಗಳನ್ನು ಪಡೆದುಕೊಂಡ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿಗಳ ಸಭೆ ಮಾಹಿತಿ ನೀಡಿ, ಸಿಆರ್‌ಸಿಗಳು ಶಾಲಾ ಮುಖ್ಯಾಧ್ಯಾಪಕರಿಗೆ ಮಾಹಿತಿ ನೀಡಿ, ಈಗ ಶಾಲಾ ಮುಖ್ಯಾಧ್ಯಾಪಕರು ಎಲ್ಲ ಶಿಕ್ಷಕರಿಗೆ ದೂರವಾಣಿ ಮಾಡಿ ಶಾಲೆಗೆ ಕರೆಯುವ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next