Advertisement

ಗುರುವಿಲ್ಲದ ಕಲಿಕೆ ಅಸಾಧ್ಯ: ಡಾ|ಮಹೇಶ್‌ ಭಟ್‌

08:15 AM May 18, 2018 | Karthik A |

ವೃತ್ತಿಯಲ್ಲಿ ಮಕ್ಕಳ ತಜ್ಞರಾಗಿರುವ ಬಿ.ಸಿ. ರೋಡ್‌ನ‌ ಡಾ| ಎಂ.ಎಸ್‌. ಮಹೇಶ್‌ ಭಟ್‌ ಪ್ರವೃತ್ತಿಯಲ್ಲಿ ಹಾಡುಗಾರ. ಆರನೇ ತರಗತಿಯಲ್ಲಿರುವಾಗಲೇ ತಂದೆ ಡಾ| ಎಂ.ಎಸ್‌. ಭಟ್‌ ಅವರಿಂದಲೇ ಪ್ರೇರಣೆ ಪಡೆದು ಸಂಗೀತ ಕ್ಷೇತ್ರದ ರಸವುಂಡು ಶಾಸ್ತ್ರೀಯ ಸಂಗೀತ ಸಹಿತ ವಿವಿಧ ಪ್ರಾಕಾರಗಳ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡವರು. ಸಂಗೀತ ಕ್ಷೇತ್ರಕ್ಕೆ ಬರಲು ಮೊದಲು ತಂದೆಯೇ ಇವರಿಗೆ ಗುರು. ಬಳಿಕ ಗುರು ಕನ್ಯಾನ ಗಣಪತಿ ಭಟ್‌ ಅವರಲ್ಲಿ ಸಂಗೀತಾಭ್ಯಾಸ ನಡೆಸಿದ್ದರು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮುಂತಾದೆಡೆ ತಂದೆ ಜತೆ ಸೇರಿ ಅನೇಕ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಕೆಲಸದ ಒತ್ತಡದಿಂದಾಗಿ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಸಂಗೀತ ಕಲಿಸುವುದು ಅಸಾಧ್ಯವಾದರೂ ರಜಾ ದಿನಗಳಲ್ಲಿ ಮತ್ತು ಅವಧಿ ಸಿಕ್ಕಾಗ ಸಂಗೀತ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದೇ ಎನ್ನುತ್ತಾರೆ ಅವರು.

Advertisement

ಸಂಗೀತ ಕ್ಷೇತ್ರದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ಆಸಕ್ತಿ ಹೇಗಿದೆ?
ಸಣ್ಣ ಪ್ರಾಯದ ಮಕ್ಕಳಿಗೆ ಸಂಗೀತದ ಬಗ್ಗೆ ಅಷ್ಟೊಂದು ಗೊತ್ತಿರುವುದಿಲ್ಲ. ಆದರೆ ಕಲಿಯುತ್ತಾ ಹೋದಂತೆ ಒತ್ತಾಯವೇ ಆಸಕ್ತಿಯಾಗಿ ಬದಲಾಗುತ್ತದೆ. ಆಸಕ್ತಿ ಇದ್ದವರು ಇಷ್ಟಪಟ್ಟು ಸಂಗೀತ ಕಲಿಯುತ್ತಾರೆ. ಮತ್ತೆ ಕೆಲವರು ಹೆತ್ತವರ ಒತ್ತಾಯದ ಮೇರೆಗೆ ಸಂಗೀತಾಭ್ಯಾಸ ಆರಂಭಿಸುತ್ತಾರೆ. ಸಂಗೀತವನ್ನು ಇಷ್ಟಪಡುವವರು ಬಹಳಷ್ಟು ಮಂದಿ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಗೀತ ಕಲಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಆಧುನಿಕ ಮ್ಯೂಸಿಕ್‌ ಹಾವಳಿ ಸಂಗೀತ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆಯೇ?
ಶಾಸ್ತ್ರೀಯ ಸಂಗೀತದ ಮೇಲೆ ಖಂಡಿತವಾಗಿಯೂ ಆಧುನಿಕ ಸಂಗೀತಗಳು ಪರಿಣಾಮ ಬೀರಿವೆ. ಪಾಶ್ಚಾತ್ಯ ಸಂಗೀತಗಳು ಬಂದು ನಮ್ಮ ಸಂಗೀತದ ಸಾಂಪ್ರದಾಯಿಕತೆಯೇ ಮರೆಯಾಗುತ್ತಿದೆ. ಜನಗಳಿಗೆ ಹೊಸ ಸಂಗೀತ ಕೇಳುವ ಉತ್ಸಾಹ; ಅವರ ಆಸಕ್ತಿಗೆ ಪೂರಕವಾಗಿ ಹಾಡುಗಾರರು ಆಧುನಿಕತೆಯನ್ನು ತರುವುದರಿಂದ ಮೂಲ ಸೊಗಡು ಹೊರಟು ಹೋಗುತ್ತದೆ.

ಶಾಸ್ತ್ರೀಯ ಕಲೆಯಲ್ಲಿ ಇತ್ತೀಚಿನ ಬದಲಾವಣೆಗಳೇನು? 
ಆಧುನಿಕ ಸಂಗೀತ ಭರಾಟೆಗಳಿಂದಾಗಿ ಮಕ್ಕಳಿಗೆ ಅದರತ್ತ ಒಲವು ಹೆಚ್ಚುತ್ತಿದೆ. ಶಾಸ್ತ್ರೀಯ ಸಂಗೀತದ ಕಡೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಆಧುನಿಕ ಸಂಗೀತ ಕೇಳಲು ಒಳ್ಳೆಯದಿರುತ್ತದೆ. ಆದರೆ ಮನಸ್ಸಿನ ಏಕಾಗ್ರತೆ, ಒತ್ತಡ ನಿವಾರಣೆಗೆಲ್ಲ ಶಾಸ್ತ್ರೀಯ ಸಂಗೀತವೇ ಸಹಕಾರಿ.

ಗುರು ಇಲ್ಲದೆ ಶಾಸ್ತ್ರೀಯ ಸಂಗೀತ ಕಲಿಕೆ ಸಾಧ್ಯವೇ?
ಇತಿಹಾಸದಲ್ಲಿ ಗುರು ಇಲ್ಲದೆ ಕಲಿತು ಜನಮನ್ನಣೆ ಗಳಿಸಿದವರು ಇದ್ದಾರೆ. ಆದರೆ ಭಾರತೀಯ ಪದ್ಧತಿಯ ಪ್ರಕಾರ ಯಾವುದೇ ಶಾಸ್ತ್ರೀಯ ಕಲೆಗಳನ್ನು ಗುರುಗಳ ಮುಖಾಂತರ ಕಲಿತರೆ ಹೆಚ್ಚು ಅರ್ಥಪೂರ್ಣ. ಒಂದು ಕಲೆಯಲ್ಲಿ ಉನ್ನತಿ ಪಡೆಯಬೇಕಾದರೆ ಗುರು ಅಗತ್ಯ. ಎಷ್ಟೇ ಆಧುನಿಕತೆ ಬೆಳೆದರೂ ಗುರುವಿನ ಮುಖೇನ ಕಲಿತರೆ ಅದರಿಂದಾಗುವ ಲಾಭವೇ ಬೇರೆ.

Advertisement

ಹಾಡುಗಾರಿಕೆಗೆ ಕೊಡುವ ಆಸಕ್ತಿ ಪಕ್ಕವಾದ್ಯಕ್ಕೆ ಕೊಡುತ್ತಿದ್ದಾರೆಯೇ?
ಹಾಡುಗಾರಿಕೆ ಕಲಿಯುವ ಮಕ್ಕಳ ಸಂಖ್ಯೆ ಜಾಸ್ತಿ ಮತ್ತು ಪಕ್ಕವಾದ್ಯ ಕಲಿಯುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಯಾಕೆ ಹೀಗೆ ಎಂದು ಗೊತ್ತಿಲ್ಲ. ಪರೀಕ್ಷೆಗಳಲ್ಲಿಯೂ ಹಾಡುಗಾರಿಕೆಗೆ ಅರ್ಜಿ ಸಲ್ಲಿಸುವವರು ಹೆಚ್ಚು. ಪಕ್ಕವಾದ್ಯ ಪರೀಕ್ಷೆ ತೆಗೆದುಕೊಳ್ಳುವವರು ಕಡಿಮೆ ಸಂಖ್ಯೆಯಲ್ಲಿರುತ್ತಾರೆ.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next