ಮೂಡುಬಿದಿರೆ: ಕೋವಿಡ್ ಪೀಡಿತೆಯಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕಿ ಪದ್ಮಾಕ್ಷಿಯವರ ಆರೋಗ್ಯಸ್ಥಿತಿ ಗುರುವಾರ ಅಪರಾಹ್ನ ಕೊಂಚ ವಿಷಮಿಸಿದೆ. ವೈದ್ಯರು ಅವರಿಗೆ ಎಕ್ಮೋ ಚಿಕಿತ್ಸೆಗೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಚಿಕಿತ್ಸೆ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದು, ಏರ್ ಲಿಫ್ಟ್ ಮಾಡ ಬೇಕಿದೆ. ಆಕೆಯ ಪತಿ ಶಶಿಕಾಂತ್ ಮತ್ತು ಪುತ್ರಿ ಐಶ್ವರ್ಯಾ ದ.ಕ. ಡಿಸಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಅವರು ಕೋಟ ಶ್ರೀನಿವಾಸ ಪೂಜಾರಿ ಮತ್ತಿತರ ಸಚಿವರ ಜತೆ ಸಂಪರ್ಕ ದಲ್ಲಿದ್ದಾರೆ. ಪದ್ಮಾಕ್ಷಿ ಅವರನ್ನು ಏರ್‌ಲಿಫ್ಟ್ ಮಾಡಿ ಚಿಕಿತ್ಸೆ ಕೊಡಿಸುವ ಸಾಧ್ಯತೆ ಇದೆ.
ಸರಕಾರದಿಂದಲೇ ಚಿಕಿತ್ಸೆ ವೆಚ್ಚ
ವಿದ್ಯಾಗಮ ಯೋಜನೆಯಡಿ ವಿವಿಧ ಕಡೆಗಳಿಗೆ ಪಾಠ ಮಾಡಲು ಹೋಗುತ್ತಿದ್ದ ತಾಯಿಗೆ ಕೊರೊನಾ ತಗಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ತಂದೆಯೂ ಕೊರೊನಾದಿಂದ ಬಳಲುತ್ತಿದ್ದು, ಕುಟುಂಬಕ್ಕೆ ಒದಗಿ ಬಂದ ಸಂಕಷ್ಟವನ್ನು ಅವರ ಪುತ್ರಿ ಐಶ್ವರ್ಯಾ ಫೇಸ್‌ಬುಕ್‌ನಲ್ಲಿ ಬರೆದು ಕೊಂಡು ಸಹಾಯ ಯಾಚಿಸಿದ್ದರು.
ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್, ಸಂಸದ ನಳಿನ್ ಕುಮಾರ್ ಕಟೀಲು, ಸಚಿವರಾದ ಎಸ್. ಸುರೇಶ್ ಕುಮಾರ್, ಡಾ| ಕೆ. ಸುಧಾಕರ್ ಮೊದಲಾದವರಿಗೆ ಟ್ಯಾಗ್ ಮಾಡಿದ್ದರು. ಇದರ ಬೆನ್ನಲ್ಲೇ ಪದ್ಮಾಕ್ಷಿ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಸರಕಾರ ಮುಂದಾಗಿತ್ತು. ಐಶ್ವರ್ಯಾ ಅವರ ಮನವಿಯ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದ ಸಿಎಂ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದರು. ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಖಾಸಗಿ ಆಸ್ಪತ್ರೆ ಯವರಿಗೆ ಸೂಚನೆ ನೀಡಲಾಗಿತ್ತು.
ಮುಖ್ಯಮಂತ್ರಿ, ಸುರೇಶ್‌ಕುಮಾರ್ ಸ್ಪಂದನೆ
ಸಿಎಂ ಅವರು ಸ್ವತಃ ದ.ಕ. ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರನ್ನು ಸಂಪರ್ಕಿಸಿ, ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದ್ದು, ಉನ್ನತ ಮಟ್ಟದ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದ್ದರು. ಅದರಂತೆ ಜಿಲ್ಲಾಧಿಕಾರಿ ಆಸ್ಪತ್ರೆಯವರನ್ನು ಸಂಪರ್ಕಿಸಿ ಸೂಚನೆ ನೀಡಿದ್ದರಲ್ಲದೆ ಐಶ್ವರ್ಯಾ ಅವರನ್ನು ಕೂಡ ಸಂಪರ್ಕಿಸಿ ಧೈರ್ಯ ತುಂಬಿದ್ದರು.
ಸೆ. 29ರಂದು ಪದ್ಮಾಕ್ಷಿ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಪದ್ಮಾಕ್ಷಿ ಅವರ ಪತಿ ಶಶಿಕಾಂತ್ ಅವರಿಗೂ ಕೊರೊನಾ ತಗಲಿದ್ದರೂ ಈಗ ಅವರು ಗುಣಮುಖರಾಗಿದ್ದಾರೆ. ಈ ಮಧ್ಯೆ ಶುಕ್ರವಾರ ಜೈನ ಪಾಠಶಾಲೆಯ ಮುನಿಸುವ್ರತ ಸ್ವಾಮಿ ಬಸದಿಯಲ್ಲಿ ಪದ್ಮಾಕ್ಷಿ ಅವರ ಆರೋಗ್ಯ ಸುಧಾರಣೆಗಾಗಿ ಸ್ಥಳೀಯ ಪ್ರಮುಖರಿಂದ ಸಾಮೂಹಿಕ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ ಎಂದು ಅಭಯಚಂದ್ರ ಜೈನ್ ತಿಳಿಸಿದ್ದಾರೆ.