Advertisement

ಆದಾಯಕ್ಕೆ ಕೊಡುಗೆ ನೀಡಿದ ಅಡಿಕೆ ತೋಟ; ಹಣ್ಣಿನ ಗಿಡ

07:56 PM Nov 12, 2021 | Team Udayavani |

ಬಂಟ್ವಾಳ: ಕಡೇಶ್ವಾಲ್ಯ ಸರಕಾರಿ ಹಿ.ಪ್ರಾ.ಶಾಲೆಯ ಆವರಣದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ನೆಟ್ಟು ಸುಮಾರು 60 ಅಡಿಕೆ ಮರಗಳು ಈ ವರ್ಷದಿಂದ ಫಸಲು ನೀಡುತ್ತಿದ್ದು, ಶಾಲೆಯ ಆದಾಯಕ್ಕೆ ದೊಡ್ಡ ಕೊಡುಗೆ ಯಾಗಲಿದೆ. ಜತೆಗೆ ಶಾಲೆಯ ಸುತ್ತ ಹತ್ತಾರು ಹಣ್ಣು-ಔಷಧೀಯ ಗಿಡಗಳು ಶಾಲೆಗೆ ಹಚ್ಚ ಹಸುರಿನ ವಾತಾವರಣವನ್ನು ನೀಡಿದೆ.

Advertisement

ಕಳೆದ ಮೂವತ್ತು ವರ್ಷಗಳಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ ನಾಯ್ಕ ನೇತೃತ್ವದಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನೆರವಿನಿಂದ ಶಾಲೆಯ ಒಟ್ಟು 1 ಎಕರೆ ನಿವೇಶನದಲ್ಲಿ 50 ಸೆಂಟ್ಸ್‌ ಪ್ರದೇಶದಲ್ಲಿ ಗಿಡಗಳೇ ವಿಸ್ತರಿಸಿಕೊಂಡಿದೆ. ಶಾಲೆಯ ಮುಂಭಾಗದಲ್ಲಿ ಕಿತ್ತಳೆ, ಮುಸುಂಬಿ, ಪೇರಳೆ, ಸೀತಾಫಲ, ರಾಮಫಲ, ರುದ್ರಾಕ್ಷಿ, ದ್ರಾಕ್ಷಿ, ಜಂಬುನೇರಳೆ ಹೀಗೆ 25ಕ್ಕೂ ಅಧಿಕ ಬಗೆಯ ಹಣ್ಣಿನ ಗಿಡ-ಮರಗಳಿವೆ. ಜತೆಗೆ ಹತ್ತಾರು ಬಗೆಯ ಔಷಧೀಯ ಸಸ್ಯಗಳನ್ನು ನೆಡಲಾಗಿದೆ.

ಶಾಲೆಯ ಹಿಂಬದಿಯಲ್ಲಿ ಸುಮಾರು 4 ವರ್ಷಗಳ ಹಿಂದೆ ಅಂದಿನ 7ನೇ ತರಗತಿಯ ವಿದ್ಯಾರ್ಥಿಗಳೇ ಸೇರಿಕೊಂಡು ಶಿಕ್ಷಕ ಭಾಸ್ಕರ್‌ ಅವರ ಮಾರ್ಗದರ್ಶನದಲ್ಲಿ 60ಕ್ಕೂ ಅಧಿಕ ಅಡಿಕೆ ಗಿಡಗಳನ್ನು ನೆಟ್ಟಿದ್ದಾರೆ. ಅದರಲ್ಲಿ ಬಹುತೇಕ ಗಿಡಗಳು ಈ ವರ್ಷ ಫಸಲು ಬಿಟ್ಟಿದೆ.

ಕೊರೊನಾ ಪೂರ್ವದಲ್ಲಿ ಶಾಲೆಯಲ್ಲಿ ಹತ್ತಾರು ಬಗೆಯ ತರಕಾರಿ ಗಿಡಗಳಿದ್ದವು.  ಆದರೆ ಸುಮಾರು 2 ವರ್ಷಗಳಲ್ಲಿ ತರ ಗತಿಗಳು ನಡೆಯದೇ ಇರುವುದರಿಂದ ಈಗ ತರಕಾರಿಯ ಗಿಡಗಳಿಲ್ಲ. ಮುಂದಿನ ದಿನ ಗಳಲ್ಲಿ ತರಕಾರಿ ಗಿಡಗಳನ್ನು ಮತ್ತೆ ಬೆಳೆಯ ಲಾಗುತ್ತದೆ ಎಂದು ಭಾಸ್ಕರ್‌ ಹೇಳು ತ್ತಾರೆ.

ದೈಹಿಕ ಶಿಕ್ಷಣ ಶಿಕ್ಷಕರ ಪರಿಸರ ಪ್ರೇಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸುವ ಮುಖ್ಯ ಶಿಕ್ಷಕಿ ಉಮಾವತಿ ಎನ್‌., ಅವರಿಂದಲೇ ಶಾಲೆಯ ಪರಿಸರ ಹಸುರಾಗಿದ್ದು, ನಮಗೂ ಮನೆಯಲ್ಲಿ ಗಿಡಗಳನ್ನು ಬೆಳೆಸುವುದಕ್ಕೆ ಪ್ರೇರಣೆ ನೀಡಿದೆ. ಶಾಲೆಯ ಬಿಸಿಯೂಟಕ್ಕೂ ತರಕಾರಿ ಸಿಗುತ್ತಿತ್ತು ಎನ್ನುತ್ತಾರೆ.

Advertisement

ಕಟ್ಟಡದ ಬೇಡಿಕೆ:

ಕಡೇಶ್ವಾಲ್ಯ ಶಾಲೆಗೆ ಸುಮಾರು 85 ವರ್ಷಗಳ ಇತಿಹಾಸವಿದ್ದು, ಹಾಲಿ ಕಟ್ಟಡ ಹಳೆಯದಾಗಿರುವುದರಿಂದ ಹೊಸ ಕಟ್ಟಡ ನಿರ್ಮಾಣದ ಬೇಡಿಕೆ ಇದೆ. ಒಂದು ಭಾಗದ ಹಳೆ ಕಟ್ಟಡದ ಹಿಂದೆ ಹೊಸ ತರಗತಿ ಕೊಠಡಿಗಳು ನಿರ್ಮಾಣಗೊಂಡಿದೆ. ಹೀಗಾಗಿ ಅದರ ಮುಂಭಾಗದ ಹಳೆಕಟ್ಟಡದ ತೆರವಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಮುಖ್ಯಶಿಕ್ಷಕಿ ಉಮಾವತಿ ವಿವರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next