Advertisement

ಶಿಕ್ಷಕ ಸ್ನೇಹಿ ಮಸೂದೆ ಮಂಡನೆ: ಸಚಿವ ಸುರೇಶ್‌ ಕುಮಾರ್‌

09:07 AM Mar 01, 2020 | mahesh |

ಕಾರ್ಕಳ: ಮುಂದಿನ ಅಧಿವೇಶನದಲ್ಲಿ ಶಿಕ್ಷಣ ಸ್ನೇಹಿ ಮಸೂದೆ ಮಂಡಿಸುವುದಾಗಿ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು. ಶುಕ್ರವಾರ ಅವರು 67 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಾರ್ಯಾಲಯ ಉದ್ಘಾಟಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರ ಕಡ್ಡಾಯ ವರ್ಗಾವಣೆಯಿಂದಾಗಿ ನಾನಾ ಸಮಸ್ಯೆಗಳು ತಲೆದೋರಿವೆ. ಹೀಗಾಗಿ ಮುಂದಿನ ಅಧಿವೇಶನದಲ್ಲಿ ಶಿಕ್ಷಕ ಸ್ನೇಹಿ ಮಸೂದೆ ಮಂಡಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

Advertisement

ಸಹಾಯವಾಣಿ
ಶಿಕ್ಷಕರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಎಪ್ರಿಲ್‌ ಮೊದಲ ವಾರದಲ್ಲಿ ಸಹಾಯವಾಣಿ ತೆರೆಯಲಾಗುವುದು. ಶಿಕ್ಷಕರು ತಾವು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಕುರಿತು ಸಹಾಯವಾಣಿಗೆ ಮಾಹಿತಿ ನೀಡಿದಲ್ಲಿ ಕೂಡಲೇ ಸಂಬಂಧಪಟ್ಟವರಿಗೆ ರವಾನಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಆ್ಯಪ್‌ ಮೂಲಕ ಸಹಕಾರ ಯಾಚನೆ
ಶೈಕ್ಷಣಿಕ ಕೇಂದ್ರಗಳ ಅಭಿವೃದ್ಧಿಗೆ ನೆರವಾಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆ್ಯಪ್‌ ಬಿಡುಗಡೆ ಮಾಡಲಾಗುವುದು. ಆ್ಯಪ್‌ ಮೂಲಕ ದಾನಿಗಳು ಶಿಕ್ಷಣ ಇಲಾಖೆಗೆ ಪೂರಕವಾದ ಕೊಡುಗೆ ನೀಡುವ ಕುರಿತು ಮಾಹಿತಿ ಒದಗಿಸಬಹುದು ಎಂದು ಸಚಿವರು ಹೇಳಿದರು.

ಶಿಕ್ಷಕರಿಗೆ ತರಗತಿ ಪಾಠ ಬಿಟ್ಟು ಇತರ ಕಾರ್ಯಗಳೇ ಅಧಿಕವಾಗುತ್ತಿದೆ. ಅದನ್ನು ತಪ್ಪಿಸುವಂತೆ ಎರ್ಲಪಾಡಿ ಶಾಲಾ ಮುಖ್ಯಶಿಕ್ಷಕರು ಮನವಿ ಮಾಡಿಕೊಂಡರು. ವೈದ್ಯನಾಥ್‌ ವರದಿ ಜಾರಿಗೊಳಿಸುವಂತೆ ತೆಳ್ಳಾರು ಶಾಲೆಯ ಗಣಪಯ್ಯ ಸಚಿವರಲ್ಲಿ ವಿನಂತಿಸಿದರು. ಉಳಿದಂತೆ ವೇತನ ತಾರತಮ್ಯ ನಿವಾರಿಸುವಂತೆ, ಉಡುಪಿ ಜಿಲ್ಲೆಯ ಶಾಲಾ ಮಕ್ಕಳಿಗೆ ಅಕ್ಷರ ದಾಸೋಹಕ್ಕೆ ಕುಚ್ಚಲು ಅಕ್ಕಿ ವಿತರಿಸಬೇಕೆಂಬ ಬೇಡಿಕೆ ಕೇಳಿಬಂತು.

ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕಡತಗಳು ವರ್ಷಾನುಗಟ್ಟಲೆ ವಿಲೇವಾರಿಯಾಗದೆ ಬಾಕಿಯಿದೆ. ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಭಡ್ತಿ ಕುರಿತಾದ ಕಡತಗಳು ಜಿಲ್ಲಾ ಮಟ್ಟದಲ್ಲಿ ವಿಲೇವಾರಿಯಾಗುವಂತೆ ಕಾಲೇಜು ಶಿಕ್ಷಕರದ್ದೂ ಆಗಬೇಕೆಂದು ವಾಸುದೇವ ಭಟ್‌ ಸಚಿವರಲ್ಲಿ ವಿನಂತಿಸಿದರು.

Advertisement

ಮುಖ್ಯಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕ
ಶಿಕ್ಷಕ ರವೀಂದ್ರ ಹೆಗ್ಡೆ ಅವರು ಸಂವಾದದಲ್ಲಿ ಮುಖ್ಯಶಿಕ್ಷಕರ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಕುರಿತು ಸಚಿವರ ಗಮನ ಸೆಳೆದಾಗ ಎಲ್ಲ ಶಾಲೆಗಳಿಗೂ ಪೂರ್ಣಾವಧಿ ಮುಖ್ಯಶಿಕ್ಷಕರ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಗೊಳಿಸುವುದು ನಮ್ಮ ಸರಕಾರದ ಪ್ರಥಮ ಆದ್ಯತೆಯಾಗಲಿದೆ ಎಂದುತ್ತರಿಸಿದರು.

ಅತೀ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲಾ ಮಕ್ಕಳನ್ನು ವಾಹನ ಸೌಕರ್ಯ ಕಲ್ಪಿಸಿ ಪಕ್ಕದ ಶಾಲೆಗೆ ಕಳುಹಿಸಿದಲ್ಲಿ ಆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಸ್ಮರ್ಧಾತ್ಮಕ ವಾತಾವರಣ ದೊರೆಯುವುದು ಎಂದು ಸಚಿವರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next