ಲಕ್ನೋ : ಭಾರತದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಯಾವತ್ತೂ ಕೊರತೆಯಿಲ್ಲ. ಒಂದರ ಮೇಲೊಂದು ಹೊಸ ಹೊಸ ಸಂಶೋಧನೆಗಳು ನಡೆಯುತ್ತಲೇ ಇವೆ. ಇದೀಗ ಉತ್ತರ ಪ್ರದೇಶದ ಶಿಕ್ಷಕರೊಬ್ಬರು 47 ಭಾಷೆಗಳಲ್ಲಿ ಮಾತನಾಡುವ ರೋಬೋಟ್ (ಯಂತ್ರಮಾನವ) ಅನ್ನು ತಯಾರು ಮಾಡಿದ್ದಾರೆ.
ರಾಜಮಲ್ಪುರ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ದಿನೇಶ್ ಪಾಟೀಲ್ ಎಂಬುವವರು ಈ ಆವಿಷ್ಕಾರವನ್ನು ಮಾಡಿದ್ದಾರೆ. ದಿನೇಶ್ ಮೊದಲು ಬಾಂಬೆಯಲ್ಲಿನ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಶಿಕ್ಷಕರಾಗಿ ಕೆಲಸ ಮಾಡಿದ್ದರಂತೆ. ಬಾಲಿವುಡ್ ನ ‘ರೋಬೋಟ್’ ಸಿನಿಮಾದಿಂದ ಸ್ಪೂರ್ತಿ ಪಡೆದು ‘ಶಾಲು’ ಹೆಸರಿನ ಮಾತನಾಡುವ ರೋಬೋಟ್ ಅನ್ನು ತಯಾರು ಮಾಡಿದ್ದಾರೆ.
‘ಶಾಲು’ ಭಾರತದ 9 ಭಾಷೆಗಳಲ್ಲಿ ಮಾತನಾಡುತ್ತದೆಯಂತೆ. ಅಲ್ಲದೆ ವಿಶ್ವದ 47 ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿದೆಯಂತೆ. ಈ ಯಂತ್ರಮಾನವನನ್ನು ಕಚ್ಚಾ ಸಾಮಗ್ರಿಗಳಾದ ಪ್ಲಾಸ್ಟಿಕ್, ಕಾರ್ಡ್ ಬೋರ್ಡ್, ಮರ, ಅಲ್ಯೂಮಿಲಿಯಂ ಸೇರಿದಂತೆ ಹಲವುಗಳನ್ನು ಬಳಕೆ ಮಾಡಿಕೊಂಡು ತಯಾರಿಸಲಾಗಿದೆ ಎನ್ನುತ್ತಾರೆ ದಿನೇಶ್. ಇದನ್ನು ನಿರ್ಮಾಣ ಮಾಡುವುದಕ್ಕೆ ಬರೋಬ್ಬರಿ 50,000 ರೂ. ಖರ್ಚಾಗಿದೆ ಎಂದು ವರದಿಯಾಗಿದೆ.
ಶಾಲು ರೋಬೋಟ್ ನ ವಿಶೇಷ ಏನಂದ್ರೆ, ಜನರನ್ನು ಗುರುತಿಸುತ್ತದೆ, ನೆನಪಿಟ್ಟುಕೊಳ್ಳುತ್ತದೆ ಅಲ್ಲದೆ ಪ್ರಶ್ನೆಗಳಿಗೆ ಉತ್ತರವನ್ನೂ ನೀಡುತ್ತದೆಯಂತೆ. ಜನರನ್ನು ಉಪಚರಿಸುವುದು, ಭಾವನೆಗಳಿಗೆ ಸ್ಪಂದಿಸುವುದು, ದಿನ ಪತ್ರಿಕೆಗಳನ್ನು ಸಹ ಓದುವ ಸಾಮರ್ಥ್ಯವನ್ನು ಶಾಲು ಹೊಂದಿದೆಯಂತೆ.
ಈ ಯಂತ್ರ ಮಾನವ ‘ಶಾಲು’ನನ್ನು ನಾವು ಮುಂದಿನ ದಿನಗಳಲ್ಲಿ ಶಾಲಾ ಶಿಕ್ಷಕಿಯಾಗಿ ಮತ್ತು ಕಚೇರಿಯ ರಿಸಪ್ಶನಿಸ್ಟ್ ಆಗಿ ಬಳಕೆ ಮಾಡಿಕೊಳ್ಳಬಹುದು ಎಂದು ಯಂತ್ರವನ್ನು ತಯಾರು ಮಾಡಿರುವ ದಿನೇಶ್ ಪಾಟೀಲ್ ಹೇಳಿದ್ದಾರೆ.